ಸಮಸ್ಯೆ ಸರ್ಕಾರದ ಗಮನಕ್ಕೆ ತನ್ನಿ
ಕೋಲಾರ: ಜನರ ಮೂಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅರ್ಹರಿಗೆ ಸವಲತ್ತುಗಳು ಸಿಗುವಂತಾಗಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಾಧ್ಯಮಗಳಿಗೆ ಸಲಹೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪ್ರಜಾ ಎಕ್ಸ್ಪ್ರೆಸ್ ವಾರ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿ, ಮಾಧ್ಯಮಗಳು ಸಮಾಜದ ಕನ್ನಡಿಯಂತೆ, ಸರ್ಕಾರ ಇಲ್ಲವೇ ಜನಪ್ರತಿನಿಧಿಗಳು ತಪ್ಪು ಮಾಡಿದಾಗ ರಚನಾತ್ಮಕ ಟೀಕೆ-ಟಿಪ್ಪಣಿ ಮೂಲಕ ಅರಿವು ಮೂಡಿಸಬೇಕು. ರೋಚಕ ಸುದ್ದಿಗಳಿಂದ ಪತ್ರಿಕೆಯ ಪ್ರಚಾರ ಸಂಖ್ಯೆ ಹೆಚ್ಚಿಸಿಕೊಳ್ಳುವುದಕ್ಕೆ ಯತ್ನಿಸಿದರೆ ಜನತೆಯ ಪ್ರೀತಿ, ವಿಶ್ವಾಸ, ನಂಬಿಕೆ ಬೇಗನೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಸೂಚ್ಯವಾಗಿ ನುಡಿದರು.
ಸರ್ಕಾರಗಳು ರೂಪಿಸುವ ಮತ್ತು ಜಾರಿಗೆ ತರುವ ಅನೇಕ ಯೋಜನೆಗಳು ಗ್ರಾಮೀಣ ಪ್ರದೇಶದ ಜನತೆ ಅದರಲ್ಲೂ ಬಡವರಿಗೆ ತಿಳಿಯುವುದು ಸುಲಭವಲ್ಲ. ಮಾಧ್ಯಮಗಳು ಸರ್ಕಾರದ ಯೋಜನೆಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಪ್ಪದೆ ಸಿಗುವಂತೆ ಮಾಡುವ ಮೂಲಕ ಸಮಾಜಮುಖಿಯಾಗಬೇಕೆಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಮಾಧ್ಯಮಗಳು ಜನರ ನಾಡಿ ಮಿಡಿತವನ್ನು ಅರಿತು ಕೆಲಸ ಮಾಡಬೇಕು, ಸರ್ಕಾರ ಇಲ್ಲವೇ ಬೇರೆ ಯಾವುದೇ ಸಂಸ್ಥೆ, ವ್ಯಕ್ತಿಯಿಂದ ಆಗುವ ಅನ್ಯಾಯ, ಶೋಷಣೆ, ಪ್ರಯೋಜನ ಕುರಿತು ನಿಖರವಾದ ಮಾಹಿತಿಯೊಂದಿಗೆ ಬೆಳಕು ಚೆಲ್ಲಿದಲ್ಲಿ ಫಲಶೃತಿ ಸಿಗುತ್ತದೆ, ತೇಜೋವಧೆ, ಅನಗತ್ಯ ಟೀಕೆ, ಬ್ಲಾಕ್ ಮೇಲ್ ಮಾಡುವುದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ಪತ್ರಕರ್ತರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ತಿಳಿಸಿದರು. ಸಣ್ಣ ಪತ್ರಿಕೆಗಳು ನಡೆಸುವುದು ಕಷ್ಟವಾಗಿರುವುದರಿಂದ ಸರ್ಕಾರ ಇದರ ನೆರವಿಗೆ ಬರಬೇಕೆಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಮಹಮದ್ ಯೂನಸ್, ನಗರಸಭೆ ಸದಸ್ಯ ಪ್ರಸಾದ್ ಬಾಬು, ಸಾ.ಮಾ. ಪ್ರಸನ್ನ, ಜಿಪಂ ಸದಸ್ಯ ಅ.ಮು. ಲಕ್ಷ್ಮೀನಾರಾಯಣ ಇದ್ದರು. ಪತ್ರಿಕೆಯ ಸಂಪಾಕದ ಕೆ.ವಿ. ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

