ರಾಜ್ಯದಲ್ಲಿ ದಲಿತರಿಗೆ ಸಿಎಂ ಸ್ಥಾನ ಸಿಕ್ಕಿಲ್ಲ
ಕೋಲಾರ: ರಾಜ್ಯದಲ್ಲಿ ದಲಿತರ ಸಂಖ್ಯೆ ಹೆಚ್ಚಿದ್ದರೂ ನಮ್ಮವರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಾಗಿಲ್ಲ, ಇದಕ್ಕೆ ನಮ್ಮಲ್ಲಿನ ಸಂಕುಚಿತ ಮನೋಭಾವನೆ ಹಾಗೂ ಒಗ್ಗಟ್ಟಿನ ಕೊರತೆಯೇ ಕಾರಣ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸತ್ಯ ಭದ್ರಾವತಿ ವಿಷಾದಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗುರುವಾರ ದಲಿತರ ನಾಯಕ ದಿ.ಎನ್. ಶಿವಣ್ಣ ಜನ್ಮ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ದಲಿತರ ಐಕ್ಯತಾ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಲಿತರು ಭಿನ್ನಮತ ಬದಿಗಿಟ್ಟು ಒಗ್ಗೂಡಿ ಸಂಘಟನೆಗೆ ಶ್ರಮಿಸದಿದ್ದರೆ ರಾಜ್ಯದಲ್ಲಿ ಅಧಿಕಾರ ಪಡೆಯುವುದು ಕಷ್ಟವಾಗುತ್ತದೆ ಎಂದರು.
ದೆಹಲಿಯಲ್ಲಿ ಇತ್ತೀಚಿಗೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಮರ್ವಾಡಿಗಳು ಸಂಘಟಿತರಾಗಿ ಆಡಳಿತ ಚುಕ್ಕಾಣಿಯನ್ನು ಹಿಡಿಯಲು ಸಾಧ್ಯವಾಗಿರುವಾಗ ದಲಿತರು ಹೆಚ್ಚಾಗಿರುವ ಕರ್ನಾಟಕದಲ್ಲಿ ಒಬ್ಬ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ಆತ್ಮಾವಲೋಕನೆ ಮಾಡಿಕೊಳ್ಳಬೇಕಾಗಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ)ದ ಮಾವಳ್ಳಿ ಶಂಕರ್ ಮಾತನಾಡಿ, ದೇಶದಲ್ಲಿರುವ ಸುಮಾರು 80 ಕೋಟಿ ಮಂದಿ ಬಡವರು, ದಲಿತರು ಪ್ರತಿ ದಿನ ಜಾತಿಯ ಅಪಮಾನದಿಂದ ನರಳುತ್ತಿದ್ದರೆ ಶೇ.20 ರಷ್ಟು ಮೇಲ್ಜಾತಿಯವರು ನಮ್ಮನ್ನು ಅಳುತ್ತಿದ್ದಾರೆಂದು ಆರೋಪಿಸಿದರು.
ಯಾವುದೇ ಚಳವಳಿಗಳು ತ್ಯಾಗ ಬಲಿದಾನದಿಂದ ಹುಟ್ಟಿದರೆ ಅವು ನಿರಂತರವಾಗಿ ಸಾಗುತ್ತದೆ ಮತ್ತು ಬೆಳೆಯುತ್ತದೆ. ಆದರೆ ವೈಭವದಿಂದ ಮತ್ತು ಸಂತಪ್ತಿಯಿಂದ ಇದ್ದರೆ ಅದಕ್ಕೆ ಉಳಿಗಾಲವಿಲ್ಲ ಎಂದ ಅವರು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅನೇಕ ಮಹಾನೀಯರು ಸೈದ್ದಾಂತಿಕ ನೆಲಗಟ್ಟಿನ ಮೇಲೆ ಹುಟ್ಟಹಾಕಿರುವ ಮತ್ತು ಸಿದ್ದಾಂತಗಳನ್ನು ಹೊಂದಿರುವ ಸಂಘಟನೆಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ಸೂಲಿಕುಂಟೆ ರಮೇಶ್ ವಹಿಸಿದ್ದರು. ದಲಿತ ಸಂಯುಕ್ತ ರಂಗದ ಜಿಲ್ಲಾಧ್ಯಕ್ಷ ಎಂ. ಮುನಿರಾಜು, ಕಾರ್ಯದರ್ಶಿ ಹಾರೋಹಳ್ಳಿ ನಾರಾಯಣಸ್ವಾಮಿ, ಮಾದಿಗ ದಂಡೋರದ ಸಾಹುಕಾರ ಶಂಕರಪ್ಪ, ಆಟೋ ನಾರಾಯಣಸ್ವಾಮಿ, ಪದ್ಮಾವತಿ ಇದ್ದರು.
ದಿ.ಎನ್. ಶಿವಣ್ಣರ ಜನ್ಮದಿನಾಚರಣೆ
ಚಿಂತಾಮಣಿ: ಸಮಾಜದಲ್ಲಿ ನೊಂದವರ ಪರ ಧ್ವನಿಯೆತ್ತಿದ ದಿ.ಎನ್. ಶಿವಣ್ಣರ ಸೇವೆ ಜನರು ಎಂದಿಗೂ ಮರೆಯಲಾರರು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಂಗಸ್ವಾಮಿ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ದಲಿತ ಮುಖಂಡ ದಿ.ಎನ್. ಶಿವಣ್ಣರ 64ನೇ ಜನ್ಮ ದಿನಾಚರಣೆಯಲ್ಲಿ ಕೇಕ್ ಕತ್ತರಿಸಿ ಮಾತನಾಡಿ, ದಲಿತ ಪರ ಹೋರಾಟಗಾರ ಎನ್. ಶಿವಣ್ಣ ಕಳೆದ ಹಲವು ದಶಕಗಳಿಂದ ಎಲ್ಲಾ ವರ್ಗದ ಪರ ಧ್ವನಿಯೆತ್ತಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ನಾಯಕ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಿಜಯನರಸಿಂಹ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಣ್ಣು ವಿತರಿಸಿದರು. ಡಾ. ಜಯಂತಿ, ಡಾ. ಮಂಜುಳ, ಜೆ.ಜೆ. ಕಾಲೋನಿ ಚಂದ್ರಪ್ಪ, ಡೆಕೋರೇಷನ್ ಈಶ್ವರ್, ಚಲಪತಿ, ರಘು, ಕೆ. ನಾರಾಯಣಸ್ವಾಮಿ, ಮಂಜುನಾಥ್ ಇದ್ದರು.
ದಲಿತ ನಾಯಕನ ಜನ್ಮದಿನಾಚರಣೆ
ಶಿಡ್ಲಘಟ್ಟ: ದಲಿತ ನಾಯಕ ಎನ್. ಶಿವಣ್ಣನವರ 64ನೇ ಜನ್ಮದಿನೋತ್ಸವವನ್ನು ದಲಿತ ಸಂಘರ್ಷ ಸಮಿತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸುವ ಮೂಲಕ ಆಚರಿಸಲಾಯಿತು. ಸಮಿತಿಯ ತಾಲೂಕು ಸಂಚಾಲಕ ಅರುಣ್ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿದರು. ಜಿಲ್ಲಾ ಸಂಚಾಲಕ ತಿರುಮಳಪ್ಪ, ಮುನಿವೆಂಕಟಪ್ಪ, ಜಯಶೀಲ ಕುಮಾರ್, ಅಶೋಕ, ನರಸಿಂಹಮೂರ್ತಿ, ಮೂರ್ತಿ, ಕಿರಣ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

