ಕೋಲಾರ

ಅಧಿಕಾರಿಗಳ ಮಾಹಿತಿಗೆ ಶಾಸಕರ ಚಾಟಿ

Published On :

ಬಂಗಾರಪೇಟೆ: ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ನಿರೀಕ್ಷೆ ಮಾಡಿದಷ್ಟು ಮಳೆ ಬಾರದ ಕಾರಣ ಬೆಳೆ ಬಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದರು.
ಮಳೆ 2012 ವರ್ಷಕ್ಕಿಂತಲೂ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿದ್ದರೂ ಸಕಾಲಕ್ಕೆ ಮಳೆ ಕೈಕೊಟ್ಟಿದ್ದರಿಂದಾಗಿ ಎಲ್ಲಾ ಮಳೆಯಾಶ್ರಿತ ಬೆಳೆಗಳು ನಷ್ಟವಾಗಿವೆ, ಶೇಂಗಾ ಬೆಳೆ ಶೇ.90ರಷ್ಟು ನಷ್ಟವಾಗಿದೆ, ರಾಗಿ ಬೆಳೆ ಸಮಾಧಾನತಂದಿದೆ ಎಂದು ಮಾಹಿತಿ ನೀಡಿದಾಗ ಅಂದಾಜು ನಷ್ಟ ಎಷ್ಟಾಗಿದೆ ಎಂಬ ಪ್ರಶ್ನೆಗೆ ಮಾಹಿತಿ ಲಭ್ಯವಾಗಿಲ್ಲ ಮತ್ತು ಬರದಿಂದ ಬೆಳೆ ನಷ್ಟವಾಗಿದ್ದರೆ ಸರ್ಕಾರಕ್ಕೆ ಯಾಕೆ ವರದಿ ಸಲ್ಲಿಸಿಲ್ಲ ಎಂಬ ಪ್ರಶ್ನೆಗೆ ನಾವು ಜಿಲ್ಲಾ ಮೇಲಾಧಿಕಾರಿ ಗಮನಕ್ಕೆ ತರಲಾಗಿದೆ ಅವರು ಸರ್ಕಾರಕ್ಕೆ ವರದಿ ಸಲ್ಲಿಸುವರು ಎಂದು ಹೇಳಿದ ಮಾತು ಶಾಸಕರಿಗೆ ತೃಪ್ತಿ ತರಲಿಲ್ಲ.
ಕಾಲಕಾಲಕ್ಕೆ ರೈತರಿಗೆ ಆಗುವ ತೊಂದರೆ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಅದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಅದು ಬಿಟ್ಟು ನಿರ್ಲಕ್ಷ್ಯತನದಿಂದ ಕೆಲಸ ಮಾಡುವುದಕ್ಕಿಂತಲೂ ವರ್ಗಾಯಿಸಿಕೊಂಡು ಹೋಗುವುದು ಲೇಸು ಎಂದು ಮಾತಿನ ಚಾಟಿ  ಬೀಸಿದರು.
ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ; ಮೃತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆರವರ ಕುಟುಂಬಕ್ಕೆ ಸೂಕ್ತ ಪರಿಹಾರದ ಜೊತೆಗೆ ಎಲ್ಲಾ ರೀತಿಯ ನೆರವು ನೀಡಬೇಕೆಂದು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿತು.
ನಗರದ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಶ್ರದ್ಧಾಂಜಲಿ ಸಲ್ಲಿಸಿ ಮಲ್ಲಿಕಾರ್ಜುನ ಬಂಡೆರವರಿಗೆ ಗೌರವ ಸಲ್ಲಿಸಿದ ನಂತರ ಸರ್ಕಾರ ನೆರವು ನೀಡುವಂತೆ ಒತ್ತಾಯಿಸಲಾಯಿತು. ಮಲ್ಲಿಕಾರ್ಜುನ ಬಂಡೆರವರು ಪಾತಕಿಯನ್ನು ಸೆರೆ ಹಿಡಿಯಲು ಹೋಗಿ ತಮ್ಮ ಜೀವವನ್ನು ತೆತ್ತಿದ್ದಾರೆ. ಅವರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಒಬ್ಬ ದಕ್ಷ ಅಧಿಕಾರಿಯ ಆರೋಗ್ಯ ಚಿಂತಾಜನಕ ಸ್ಥಿತಿಗೆ ತಲುಪಿದರೆ ಸರ್ಕಾರ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ಪ್ರಮುಖ ಜವಾಬ್ದಾರಿ. ಆದರೆ, ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿತು ಎಂದು ಆರೋಪಿಸಿದ ಮುಖಂಡರು, ಈಗಲಾದರೂ ಬಂಡೆರವರ ಕುಟುಂಬಕ್ಕೆ ಎಲ್ಲಾ ರೀತಿಯ ನೆರವು ನೀಡಬೇಕು. ಮುಂದೆ ದಕ್ಷ ಅಧಿಕಾರಿಗಳು ಇಂತಹ ಅನಾಹುತಕ್ಕೆ ಸಿಲುಕಿಕೊಳ್ಳದಿರಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಉಪ ವಿಭಾಗಾಧಿಕಾರಿ ಶಾಂತಲಾ ಪ್ರತಿಭಟನಾಕಾರರಿಂದ ಮನವಿ ಪತ್ರವನ್ನು ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಎಎಪಿ ಅಭಿಷೇಕ್, ಮೋಹನ್ ಬಾಬು, ದೇವೇಂದ್ರ ಕುಮಾರ್, ಶ್ರೀಕಾಂತ್ ಭಾಗವಹಿಸಿದ್ದರು.
ಧನುರ್ಮಾಸದ ಪ್ರಯುಕ್ತ ವಿಶೇಷ ಪೂಜೆ
ಶಿಡ್ಲಘಟ್ಟ: ಧನುರ್ಮಾಸದ ಪ್ರಯುಕ್ತ ಮೇಲೂರಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಮೇಲೂರಿನ ಜಂಟಿರಾಗಿಮಾಕನಹಳ್ಳಿ ಗ್ರಾಮದಲ್ಲಿ ಸೀತಾ ಲಕ್ಷಣ ಮೂರ್ತಿ ಸಮೇತ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸುಮಾರು ಒಂದು ತಿಂಗಳಿನಿಂದ ಧನರ್ ಮಾಸ ಪ್ರಯುಕ್ತ ಪ್ರತಿದಿನ ಬೆಳ್ಳಿಗೆ 8 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆ ಮಾಡಿಕೊಂಡು ಸಾಗುತ್ತಾ ಮನೆ ಮನೆಯು ಮುಂದೆ ಪೂಜೆ ಸಲ್ಲಿಸುವ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಈ ಪದ್ಧತಿಯನ್ನು ಈ ಬಾರಿಯೂ ಮುಂದುವರಿಸಿದ್ದಾರೆ. ಗೋಪಾಲಪ್ಪ, ರಾಮಾಂಜಿನಪ್ಪ, ನಾರಾಯಣಸ್ವಾಮಿ ಎಂ.ಎಂ. ಸ್ವಾಮಿ ಭಜನಾ ತಂಡದ ಮುನಿಯಪ್ಪ, ಸಿ.ಇ. ಹನುಮಂತಪ್ಪ, ಸುಬಣ್ಣ, ಶಾಂತಮ್ಮ, ಶಿವಣ್ಣ, ರತ್ನಮ್ಮ ಇದ್ದರು.
ಸಂಕ್ರಾಂತಿ ಪ್ರಯುಕ್ತ ರಾಸುಗಳ ಮೆರವಣಿಗೆ
ಶಿಡ್ಲಘಟ್ಟ: ಮಕರ ಸಂಕ್ರಾಂತಿ ಪ್ರಯುಕ್ತ ಪಟ್ಟಣದಲ್ಲಿ ರಾಸುಗಳ ಮೆರವಣಿಗೆ ನಡೆಸಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀಕೃಷ್ಣ ಸ್ವಾಮಿ ಪಲ್ಲಕಿ ಹಾಗೂ ರಾಸುಗಳ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಊರ ಬಾಗಿಲಿನಲ್ಲಿ ರಸ್ತೆಗೆ ಅಡ್ಡಲಾಗಿ ಬೆಂಕಿ ಹಾಕಿ ರಾಸುಗಳನ್ನು ಬೆಂಕಿಯಲ್ಲಿ ಹಾರಿಸಲಾಯಿತು. ಉತ್ಸವದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಾಸುಗಳಿಗೆ ಲಕ್ಕಿ ಡ್ರಾ ಮೂಲಕ ಆಯ್ಕೆಯಾದ ರಾಸುಗಳಿಗೆ ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನ 2,000, ದ್ವಿತಿಯ ಬಹುಮಾನ 1,500, ತೃತಿಯ ಬಹುಮಾನ 1,000 ಹಾಗೂ ಒಟ್ಟು ಮೆರವಣಿಗೆಯಲ್ಲಿ 40 ರಿಂದ 50 ಜೊತೆ ರಾಸುಗಳು ಭಾಗವಹಿಸಿದ್ದು ಎಲ್ಲಾ ರಾಸುಗಳಿಗೂ 500 ರು.ಗಳಂತೆ ಸಮಾದಾನಕರ ಬಹುಮಾನಗಳನ್ನು ನೀಡಲಾಯಿತು. ನಂದಾ ಮುನಿಕೃಷ್ಣಪ್ಪ, ಅರ್ಚಕ ಎಸ್. ಸತ್ಯಪ್ರಕಾಶ್, ಜೆ.ಎಸ್. ವೆಂಕಟಸ್ವಾಮಿ ಪುರುಷೋತ್ತಮ್, ಮುರಳಿಮೋಹನ್, ಕುಮಾರ್, ಮಂಜುನಾಥ, ಗಂಗರೆಡ್ಡಿ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.