ಕೋಲಾರ

4 ಬೈಕ್ ಸಮೇತ ಬಾಲಕನ ಬಂಧನ

Published On :

ಚಿಂತಾಮಣಿ: ನಗರದ ವಿವಿಧ ಪ್ರದೇಶಗಳಲ್ಲಿ ನಾಲ್ಕು ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿದ ಬಾಲಕನೊಬ್ಬನನ್ನು ಪೊಲೀಸರು ಮಾಲು ಸಮೇತ ಬಂಧಿಸಿರುವ ಘಟನೆ ಎನ್.ಆರ್. ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ನಗರದ ಎನ್.ಆರ್. ಬಡಾವಣೆಯ ನಿವಾಸಿ ಪ್ರದೀಪ್ ಎಂಬ ಬಾಲಕ ನಗರದ ವಿವಿಧ ಪ್ರದೇಶಗಳಲ್ಲಿ ನಾಲ್ಕು ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿ  ಚೇಳೂರು ವೃತ್ತದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ನಗರದ ಠಾಣೆಯ ಕ್ರೈಂ ಸಬ್‌ಇನ್ಸ್‌ಪೆಕ್ಟರ್ ಎಂ. ಬಸವರಾಜ್ ಬಾಲಕನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ತನ್ನ ಕಳ್ಳತನಗಳ ಬಗ್ಗೆ ವಿವರವಾಗಿ ತಿಳಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧ ಕಳ್ಳತನ ಮಾಡಿದ್ದ ನಾಲ್ಕು ದ್ವಿಚಕ್ರವಾಹನಗಳನ್ನು ಮಾಲು ಸಮೇತ ಬಂಧಿಸಿದ್ದಾರೆ. ಆರೋಪಿ ಪ್ರದೀಪ್‌ನನ್ನು ನ್ಯಾಯಾಂಗ ಬಂಧನ ವಶಕ್ಕೆ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಕ್ರಾಂತಿ ಕವಿಗೋಷ್ಠಿ
ಗುಡಿಬಂಡೆ: ಪಟ್ಟಣದ ವಾಹಿನಿ ಅಭಿವೃದ್ಧಿ ಸಂಸ್ಥೆ ಕಚೇರಿ ಆವರಣದಲ್ಲಿ ತಾಲೂಕು ಸಿರಿಗನ್ನಡ ವೇದಿಕೆ ವತಿಯಿಂದ ಸಂಕ್ರಾಂತಿ ಕವಿಗೋಷ್ಠಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಮ.ಗ. ಹೆಗಡೆಯವರು ವಹಿಸಿ ಮಾತನಾಡಿದರು. ಈ ವೇಳೆ 12 ಮಂದಿ ಕವಿಗಳು ಭಾಗವಹಿಸಿ ತಾವು ರಚಿಸಿದ ಕವನಗಳನ್ನು ವಾಚಿಸಿದರು. ತಾಲೂಕು ಸಿರಿಗನ್ನಡ ವೇದಿಕೆಯ ಗೌರವಾಧ್ಯಕ್ಷ ರಫಿಕ್ ಗುಡಿಬಂಡೆ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್. ವೆಂಕಟಾಚಲಯ್ಯ, ಕವಿಗಳಾದ ವಿ. ಗಂಗಾಧರ್, ಎನ್. ರಾಮಮೂರ್ತಿ, ವಿ. ಸುಬ್ರಮಣ್ಯ, ಫಯಾಜ್ ಅಹ್ಮದ್, ಸುಬ್ರಮಣ್ಯ ಹೆಗಡೆ ಇದ್ದರು.
ಅನುಮಾನಾಸ್ಪದವಾಗಿ  ಅಪರಿಚಿತ ವ್ಯಕ್ತಿ ಸಾವು
ಚಿಂತಾಮಣಿ: ನಗರದ ವುಡ್‌ಲ್ಯಾಂಡ್ ಹೊಟೇಲ್ ಮುಂಭಾಗದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಗರದಲ್ಲಿ ಬೆಳಕಿಗೆ ಬಂದಿದೆ. ನಗರದ ಚೇಳೂರು ವೃತ್ತದಲ್ಲಿರುವ ವುಡ್‌ಲ್ಯಾಂಡ್ ಹೊಟೇಲ್ ಮುಂಭಾಗದಲ್ಲಿ ಸುಮಾರು 50 ವರ್ಷವುಳ್ಳ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಸ್ಥಳೀಯ ನಾಗರಿಕರ ದೂರಿನ ಮೇರೆಗೆ ನಗರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ನಂತರ ಶವವನ್ನು ನಗರ ಸಾರ್ವಜನಿಕರ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತನ ಪತ್ತೆಗಾಗಿ ವಿಚಾರಣೆ ಮುಂದುವರೆಸಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಬಸ್ ಡಿಕ್ಕಿ
ಚಿಂತಾಮಣಿ: ಶುಕ್ರವಾರ ಬೆಳಗಿನ ಜಾವ ಬೆಂಗಳೂರಿನಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಅತಿ ವೇಗದಿಂದ ರಸ್ತೆ ಬದಿಯ ಮೋರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಲವು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂದನಹಳ್ಳಿ ಗೇಟ್ ಬಳಿ ನಡೆದಿದೆ.
ಚಿಂತಾಮಣಿ- ಬೆಂಗಳೂರು ಮಾರ್ಗವಾಗಿ ಆಂಧ್ರಪ್ರದೇಶದ ಮದನಪಲ್ಲಿ ಕಡೆಗೆ ಹೋಗಬೇಕಾದ ಬೆಂಗಳೂರು ಡಿಪೋಗೆ ಸೇರಿದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದೊಡ್ಡ ಮೋರಿಯೊಂದಕ್ಕೆ ಅಪ್ಪಳಿಸಿದೆ. ಹಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಹೆಚ್ಚಿನ ಅನಾಹುತ ತಪ್ಪಿದೆ ಎಂದು ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ವಿವರಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆ ಪೊಲೀಸರು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ಮುಂದುವರೆಸಿದ್ದಾರೆ.
ಕಂಪ್ಯೂಟರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಚಿಂತಾಮಣಿ: ಉಚಿತ ಕಂಪ್ಯೂಟರ್ ತರಬೇತಿಗಳನ್ನು ನೀಡುತ್ತಿರುವ ಎಸ್‌ಎಲ್‌ಎನ್ ಗ್ರಾಮೀಣ ಸೇವಾ ಸಮಿತಿ ಕಾರ್ಯವೈಖರಿಗೆ ನಗರಸಭಾ ಸದಸ್ಯ ಅಬ್ಬುಗುಂಡು ಶ್ರೀನಿವಾಸರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೂರಾರು ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಂಸ್ಥೆಯು ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಮಾಡಲಿ ಎಂದು ಹೇಳಿದರು.
ನಗರದ ಚೌಡರೆಡ್ಡಿಪಾಳ್ಯ ಬಳಿ ಇರುವ ಕಲೀಲ್ ಪಂಕ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಎಸ್‌ಎಲ್‌ಎನ್ ಗ್ರಾಮೀಣ ಸೇವಾ ಸಮಿತಿ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಂಪ್ಯೂಟರ್ ಉಚಿತ ತರಗತಿಗಳ ಬಗ್ಗೆ ಸಮಿತಿಯ ವ್ಯವಸ್ಥಾಪಕ ತೌಫಿಕ್ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಗರಸಭಾ ಸದಸ್ಯ ವೆಂಕಟರಮಣಪ್ಪ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ವೆಂಕಟರಮಣಾರೆಡ್ಡಿ, ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್. ಮಂಜುನಾಥ್ ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ನೂರ್ ಉದ್ದೀನ್, ಶಿವಾರೆಡ್ಡಿ, ಕಲೀಂ, ಅಮೀರ್, ಡಾ. ಶಿವಾನಂದ್ ಸೇರಿದಂತೆ ಇನ್ನೂ ಹಲವು ಮುಖಂಡರು ಶಿಬಿರಾರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಾಯಿ ಬಾಬಾ ಕುರಿತು ನಾಟಕ ಪ್ರದರ್ಶನ
ಬಂಗಾರಪೇಟೆ: ರಾಜ್ಯದಲ್ಲೇ ಮೊದಲ ಬಾರಿಗೆ ಪಟ್ಟಣದಲ್ಲಿ ಶಿರಡಿ ಸಾಯಿ ಬಾಬಾರವರ ಜೀವನ ಚರಿತ್ರೆ ಕುರಿತು ಶಿರಡಿಯಿಂದ ಆಗಮಿಸಿದ್ದ ದುಗ್ಗಲ್ ಬಾಬಾ ಮತ್ತು ತಂಡದಿಂದ ಏಕ್ ಶಾಮ್ ಸಾಯಿನಾಮ್ ಎಂಬ ಹೆಸರಿನಲ್ಲಿ ಪಟ್ಟಣದ ಬಾಲಕರ ಜೂನಿಯರ್ ಕಾಲೇಜಿನ ಮೈದಾನದಲ್ಲಿ ನಡೆದ ನಾಟಕ ಪ್ರದರ್ಶನ ಮತ್ತು ಭಜನೆ ಕಾರ್ಯಕ್ರಮ ಸಾಯಿ ಭಕ್ತರನ್ನು ಆಕರ್ಷಿಸಿತು.
ಗುರುವಾರ ಸಂಜೆ ಆರಂಭವಾದ ಸಾಯಿ ಬಾಬರವರ ಜೀವನ ಚರಿತ್ರೆ ಮತ್ತು ಭಜನೆ ಕಾರ್ಯಕ್ರಮ ಅತ್ಯಂತ ಸುಂದರವಾಗಿ ಮೂಡಿ ಬಂತು. ಈಗಾಗಲೇ ಬಾಬ ಬಗ್ಗೆ ಹಲವು ಸಿನಿಮಾಗಳು ಬಂದು ಹೋಗಿದೆ. ಆದರೆ ಪಟ್ಟಣದಲ್ಲಿ ನಡೆದ ಕಾರ್ಯಕ್ರಮ ಸಾಯಿ ಬಾಬಾ ಅವರನ್ನು ಹತ್ತಿರದಿಂದ ನೋಡಿದಷ್ಟು ಅನುಭವವಾಯಿತು ಎಂದು ಭಕ್ತಾದಿಗಳು ಪುಳಕಿತರಾದರು.
ನಾಲ್ಕು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನೋಡುತ್ತಿದ್ದರು. ಇದುವರೆಗೂ ರಾಜ್ಯದಲ್ಲಿ ಎಲ್ಲಿಯೂ ಸಾಯಿ ಬಾಬಾರವರ ನಾಟಕ ಪ್ರದರ್ಶನ ನಡೆಸಿಕೊಟ್ಟಿಲ್ಲ ಎಂದು ಹೇಳಿದರು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಸಹ ನಡೆಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ಜಿಪಂ ಮಾಜಿ ಅಧ್ಯಕ್ಷ ಮಂಗಮ್ಮ ಮುನಿಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮತ್ತಿತರರು ಮೆಚ್ಚಿಗೆ ವ್ಯಕ್ತಪಡಿಸಿದರು.
ಚಿನ್ನದ ವ್ಯಾಪಾರಿಯಿಂದ ಬ್ಯಾಗ್ ಕಸಿದು ಪರಾರಿ
ಮುಳಬಾಗಲು: ಪಟ್ಟಣದ ಹೊಟೇಲೊಂದರಲ್ಲಿ ಊಟ ಮಾಡಿದ ನಂತರ ಬಿಲ್ ಪಾವತಿಸುತ್ತಿದ್ದ ವ್ಯಕ್ತಿಯಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಕೆಜಿಎಫ್ ನಗರದ ವೇಲಾಯುಧಮ್ ಎಂಬುವರು ಪಟ್ಟಣದ ಚಿನ್ನದಂಗಡಿಗಳಿಗೆ ಚಿನ್ನದಾಭರಣಗಳನ್ನು ಸರಬರಾಜು ಮಾಡುವ ಸಲುವಾಗಿ ಪಟ್ಟಣಕ್ಕೆ ಬಂದ ಅವರು, ಬಸ್ ನಿಲ್ದಾಣದ ಬಳಿಯ ಹೊಟೇಲ್‌ನಲ್ಲಿ ಊಟ ಮುಗಿಸಿ ಬಿಲ್ ನೀಡುವ ವೇಳೆಯಲ್ಲಿ ಹಿಂದಿನಿಂದ ಬಂದ ವ್ಯಕ್ತಿ ಅವರ ಬಳಿಯಿದ್ದ ಚಿನ್ನದ ಬ್ಯಾಗ್ ಕಸಿದಿದ್ದಾನೆ. ಆತನ ಜೊತೆಗೆ ಬಂದು ಪಲ್ಸರ್ ಬೈಕ್‌ನದ್ದ  ನಿಂತಿದ್ದ ಮತ್ತೊಬ್ಬ ವಾಹನವನ್ನು ನಡೆಸಿಕೊಂಡು ವೇಗವಾಗಿ ಪಟ್ಟಣದ ಕುಂಬಾರಪಾಳ್ಯದ ದಾರಿಯಲ್ಲಿ ಪರಾರಿಯಾಗಿದ್ದಾನೆ. ವಿಷಯ ತಿಳಿದ ತಕ್ಷಣ ಪೊಲೀಸರು ಎಲ್ಲಾ ಠಾಣೆಗಳಿಗೂ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.