ಕೋಲಾರ

ಕುಡಿವ ನೀರಿನ ಯೋಜನೆ ಅನುಷ್ಠಾನಗೊಳಿಸಿ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಜ.18
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಮುಗಿಸಬೇಕೆಂದು ಶಾಸಕ ಕೆ.ಆರ್. ರಮೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಕೋಲಾರ ತಾಪಂ ಕಚೇರಿ ಸಭಾಂಗಣದಲ್ಲಿ ಶನಿವಾರ ಅವರು ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯರೊಂದಿಗೆ ಸಭೆ ನಡೆಸಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಹೋಳೂರು, ಸುಗಟೂರು ಹೋಬಳಿ ವ್ಯಾಪ್ತಿಯ ಗ್ರಾಪಂಗಳಲ್ಲಿ ಕುಡಿಯುವ ನೀರು ಹಾಗೂ ನರೇಗಾ ಯೋಜನೆ ಅನುಷ್ಠಾನದಲ್ಲಿ ಆಗಿರುವ ಪ್ರಗತಿ ಪರಿಶೀಲಿಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಮೂರು ತಿಂಗಳು ಯಾವುದೇ ಕೆಲಸ ಕಾರ್ಯ ನಡೆಯುವುದಿಲ್ಲ, ಫಲಿತಾಂಶದ ನಂತರ ರಾಜಕೀಯದ ವಾತಾವಣ ಬದಲಾಗುವುದರಿಂದ ಮತ್ತೆ ಮೂರು ತಿಂಗಳು ಅಧಿಕಾರಿಗಳು ಚೇತರಿಕೆ ಕಾಣಬೇಕಾಗುತ್ತದೆ. ಚುನಾವಣೆ ಹಿನ್ನಲೆಯಲ್ಲಿ 6 ತಿಂಗಳು ಕಾಲ ವ್ಯರ್ಥವಾದರೆ ಉಳಿದ ಆರು ತಿಂಗಳಲ್ಲಿ ಜನರ ಸಮಸ್ಯೆ ಹೇಗೆ ತಾನೇ ನಿವಾರಣೆ ಮಾಡಲು ಸಾಧ್ಯವೆಂದು ಪ್ರಶ್ನಿಸಿದರು.
ಗುತ್ತಿಗೆದಾರರ ವಿರುದ್ಧ ಸಿಡಿಮಿಡಿ: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಸಮರೋಪಾದಿಯಲ್ಲಿ ಕಾಮಗಾರಿಗಳನ್ನು ಮುಗಿಸಬೇಕು, ಅಗತ್ಯವಿದ್ದಲ್ಲಿ ಹೊಸ ಕೊಳವೆ ಬಾವಿ ಕೊರೆಸಲು, ಈಗಾಗಲೇ ಕೊರೆಸಿರುವ ಕೊಳವೆ ಬಾವಿಗಳಿಗೆ ಪಂಪು ಮೋಟಾರ್ ಅಳವಡಿಸಲು ಹಾಗೂ ಪೈಪ್ ಲೈನ್ ಅಳವಡಿಸಲು ಬೇಕಾದ ಹಣವನ್ನು ಗ್ರಾಪಂಗಳಿಂದ ಖರ್ಚು ಮಾಡಿ ದಾಖಲೆಗಳು ನೀಡಿದಲ್ಲಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸುವೆ ಎಂದು ಪಿಡಿಒಗಳಿಗೆ ಭರವಸೆ ನೀಡಿದರು. ಕುಡಿಯುವ ನೀರಿನ ಯೋಜನೆಗಳಿಗೆ ಟೆಂಡರ್ ಪಡೆದು ಕೆಲಸ ನಿರ್ವಹಿಸದೆ ಇರುವ ಗುತ್ತಿಗೆದಾರರು ಕೂಡಲೇ ಕಾಮಗಾರಿ ನಡೆಸದಿದ್ದರೆ ಕಾನೂನು ಪ್ರಕಾರ ಬ್ಲಾಕ್ ಲಿಸ್‌ಗೆ ಗುತ್ತಿಗೆದಾರರ ಹೆಸರು ಸೇರಿಸಲಾಗುತ್ತದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೆಲಸ ಮಾಡದೆ ಬಾರ್‌ಗಳಲ್ಲಿ ಕುಳಿತು ರಾಜಕಾರಣ ಮಾಡುವ ಗುತ್ತಿಗೆದಾರರೊಂದಿಗೆ ಶಾಮೀಲು ಆಗಿ ಜನರಿಗೆ ತೊಂದರೆ ಉಂಟು ಮಾಡಿದರೆ ಸೆಂಟ್ರೆಲ್‌ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಕಾಲಕ್ಕೆ ಮುಗಿಸಿ: ಕುಡಿಯುವ ನೀರು ಮತ್ತು ನರೇಗಾ ಯೋಜನೆಯ ಕೆಲಸಗಳನ್ನು ಸಕಾಲಕ್ಕೆ ಮುಗಿಸಿ ಜನರಿಗೆ ಅನುಕೂಲ ಮಾಡುವ ಗುತ್ತಿಗೆದಾರರಿಗೆ ನಾನು ದೀರ್ಘದಂಡ ನಮಸ್ಕಾರ ಸಲ್ಲಿಸುತ್ತೇನೆ. ಒಂದು ವೇಳೆ ಸರ್ಕಾರ ಏನು ಮಾಡಲು ಸಾಧ್ಯವಿಲ್ಲವೆಂದು ಯಾರಾದರೂ ಉದ್ದಟತನದಿಂದ ವರ್ತಿಸಿದರೆ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಸೂಚ್ಯವಾಗಿ ಹೇಳಿದರು. ಇನ್ನು 8 ದಿನಗಳಲ್ಲಿ ಕುಡಿಯುವ ನೀರಿನ ಎಲ್ಲ ಕಾಮಗಾರಿಗಳು ಮುಗಿಸಿದಲ್ಲಿ ಮಾತ್ರ ಸರ್ಕಾರದ ಮಾನ-ಮಾರ್ಯದೆ ಉಳಿಯುತ್ತೆ. ಅಧಿಕಾರಿಗಳು ಇಲ್ಲವೇ ಗುತ್ತಿಗೆಗಾರರು ಹಳೇ ಮೋಟಾರ್‌ಗಳಿಗೆ ಬಣ್ಣ ಬಳೆದು ಅದನ್ನು ಕೊಳವೆ ಬಾವಿಗಳಿಗೆ ಅಳವಡಿಸಿದರೆ ಪರಿಸ್ಥಿತಿ ನೆಟ್ಟಗೆ ಇರಲ್ಲ, ನಾನು ಬದುಕಿರುವ ತನಕ ಈ ರೀತಿಯ ಕೆಲಸ ಸಾಧ್ಯವಿಲ್ಲ, ಬೇಕಾದರೆ ನಾನು ಸತ್ತ ನಂತರ ನಿಮ್ಮಿಷ್ಟ ಬಂದಂತೆ ಮಾಡಿಕೊಳ್ಳಿ ಎಂದು ಕುಡಿಯುವ ನೀರಿನ ಬಗ್ಗೆ ತಾತ್ಸಾರ ತೋರಿರುವ ಪಿಡಿಒಗಳು ಮತ್ತು ಗುತ್ತಿಗೆದಾರರ ಕಾರ್ಯವೈಖರಿಗೆ ಸಿಡಿಮಿಡಿಗೊಂಡರು.
ರಾಜಕಾರಣ ಮಾಡಬೇಡಿ: ಮಾಜಿ ಸಚಿವ ಕೆ. ಶ್ರೀನಿವಾಸಗೌಡರು ಮತ್ತು ನಾನು ಕೆಲವು ವರ್ಷಗಳ ಕಾಲ ಜೊತೆಯಲ್ಲಿದ್ದು ಕೆಲಸ ಮಾಡಿದ್ದೇವೆ. ಈಗ ನಾವಿಬ್ಬರು ಬೇರೆ ಬೇರೆ ಪಕ್ಷದಲ್ಲಿ ಇರಬಹುದು. ಹಾಗಂತ ಅಭಿವೃದ್ಧಿ ಕೆಲಸದಲ್ಲಿ ರಾಜಕಾರಣ ಮಾಡಲು ನಾನಂತೂ ತಯಾರಿಲ್ಲ. ಶ್ರೀನಿವಾಸಗೌಡರ ಗ್ರಾಮ ಸೇರಿದಂತೆ ಅಣ್ಣಿಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಬೇಕು, ಯಾರಿದಂಲೂ ದೂರುಗಳು ಕೇಳಿ ಬರದಂತೆ ಎಚ್ಚರವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಣ್ಣಿಹಳ್ಳಿಯ ಕೃಷ್ಣನವರು ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಲ್ಲೂ ಯಾವುದೇ ರಾಜಕಾರಣಕ್ಕೆ ಅವಕಾಶವಿಲ್ಲದೆ ಜನರ ಸಮಸ್ಯೆ ಅರಿತು ಸಮರೋಪಾದಿಯಲ್ಲಿ ಕಾಮಗಾರಿಗಳು ನಡೆಸಬೇಕೆಂದರು. ಕುಡಿಯುವ ನೀರು, ಉದ್ಯೋಗ ನೀಡುವ ವಿಚಾರದಲ್ಲಿ ರಾಜಕಾರಣ ಸಲ್ಲದು, ಕೆಲವು ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಅಶ್ಲೀಲ ಒಪ್ಪಂದ ಮಾಡಿಕೊಂಡು ಹಾಗೂ ರಾಜಕೀಯ ಜಿದ್ದಾ ಜಿದ್ದಿಗೆ ಬಿದ್ದು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು ತಪ್ಪು ತಿದ್ದಿಕೊಂಡು ಇನ್ನು ಮುಂದೆ ಜನಪರವಾಗಿ ಕೆಲಸ ಮಾಡದಿದ್ದರೆ ನನ್ನ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಗಟ್ಟಿ ದನಿಯಲ್ಲಿ ಪಿಡಿಒಗಳನ್ನು ಎಚ್ಚರಿಸಿದರು.
ಕುಡಿಯುವ ನೀರು ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರ 88 ಕೋಟಿ ರು. ಬಿಡುಗಡೆ ಮಾಡಿದ್ದರೂ ಕೇವಲ 9 ಕೋಟಿ ರು.ಖರ್ಚು ಮಾಡಿ 79 ಕೋಟಿ ರು ಉಳಿಸಿಕೊಳ್ಳಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಣ ಬಳಕೆಯಾಗದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕ ಚನ್ನಬಸವಣ್ಣ, ತಾಪಂ ತಾಂತ್ರಿಕ ವಿಭಾಗದ ಅಧಿಕಾರಿ ಶಿವಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.