ಸಮ್ಮೇಳನದಲ್ಲಿ ಪಂಡರಿ ಭಜನೆ
ಕೋಲಾರ: ಮುಂದಿನ ತಿಂಗಳು ಫೆ.12 ರಂದು ಕೋಲಾರ ನಗರದಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಪಂಡರಿ ಭಜನೆ ನೃತ್ಯಕ್ಕೆ ಅವಕಾಶ ಕಲ್ಪಿಸುವ ಮೂಲಕ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜ್ ಭರವಸೆ ನೀಡಿದರು.
ನಗರದ ರೋಟರಿ ಭವನದಲ್ಲಿ ಭಾನುವಾರ ಸಿರಿಗನ್ನಡ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಡರಿ ಭಜನೆ ಮಾಡುವ ತಂಡವರು ತೆಲುಗು ಬದಲಿಗೆ ಭಜನೆಯನ್ನು ಕನ್ನಡದಲ್ಲಿ ಹಾಡುವ ಮೂಲಕ ಪಂಡರಿ ಭಜನೆ ಕನ್ನಡದಲ್ಲಿ ಪ್ರಖ್ಯಾತಿ ಗಳಿಸುವಂತೆ ಗಮನ ನೀಡಬೇಕೆಂದು ನಗರದ ಕೀಲುಕೋಟೆಯ ಪಂಡರಿ ಭಜನಾ ತಂಢದ ರೂವಾರಿಗಳಾದ ಕೃಷ್ಣಸ್ವಾಮಿ ಮತ್ತು ಪಾಪಣ್ಣ ತಂಡಕ್ಕೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮಗಳು ಹೆಚ್ಚಾಗುತ್ತಿದ್ದು ಸಂಘ ಸಂಸ್ಥೆಗಳು ಗುಣಮಟ್ಟ ಕಾಪಾಡುವುದರ ಜೊತೆಗೆ ಆರೋಗ್ಯಕರ ಪೈಪೋಟಿ ನೀಡುವಂತೆ ಸೂಚ್ಯವಾಗಿ ತಿಳಿಸಿದರು.
ಕಾರ್ಯಕ್ರಮವನ್ನು ಪತ್ರಕರ್ತ, ಮನ್ವಂತರ ಪ್ರಕಾಶನದ ಅಧ್ಯಕ್ಷ ಅನಂತರಾಮ್ ಉದ್ಘಾಟಿಸಿದರು, ಸಾಹಿತಿಗಳಾದ ಯು.ವಿ. ನಾರಾಯಣಾಚಾರ್, ಕೋಗಿಲಹಳ್ಳಿ ಕೃಷ್ಣಪ್ಪ, ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಜಯಶ್ರೀ ಸಂಕ್ರಾಂತಿ ಸಂಭ್ರಮದ ಅಂಗವಾಗಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿರುವುದಕ್ಕೆ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಡಾ.ಕೆ.ಎಂ.ಜಿ. ಮೌನಿ ಅವರನ್ನು ಅಭಿನಂದಿಸಿದರು.
ಪ್ರಧಾನ ಕಾರ್ಯದರ್ಶಿ ರಮೇಶ್ ಭಟ್ ಕಲ್ಲೂರು ಪ್ರಸ್ತಾವಿಕವಾಗಿ ಮಾತನಾಡಿದರು, ಕೋಲಾರದ ದೇವಿ ನಾಟ್ಯ ಕಲಾ ಅಕಾಡೆಮಿಯ ಬಿ. ಭವ್ಯಶ್ರೀ, ಟಿ. ಹರ್ಷಿತರವರ ಭರತನಾಟ್ಯ, ರಾಧಾ ಡಾ. ಪ್ರಕಾಶ್, ಎನ್.ಸಿ. ರಾಜೇಶ್ವರಿ, ಎಚ್. ವಾಜೀದ್ ಭಾನು, ಡಾ.ನಾ. ಮುನಿರಾಜು ರವರ ಕವಿತೆ ವಾಚನ, ಕ್ರೇಜಿ ಕ್ರಿಯೇಟರ್ ಶಾಲೆಯ ನಿರ್ದೇಶಕ ಮಹೇಶ್ ರಾವ್ ಕದಂ ನೇತೃತ್ವದಲ್ಲಿ ಮಕ್ಕಳು ನಡೆಸಿಕೊಟ್ಟ ನೃತ್ಯ ರೂಪಕ, ಉಲ್ಲಪ್ಪ ತಂಡದ ಕೋಲಾಟ ಪ್ರೇಕ್ಷಕರ ಮನ ಗೆದ್ದಿತು.
ವೇದಿಕೆಯ ಅಧ್ಯಕ್ಷ ಡಾ.ಕೆ.ಎಂ.ಜಿ ಮೌನಿ, ಖಜಾಂಚಿ ರವೀಂದ್ರ ಸಿಂಗ್, ಉಪಾಧ್ಯಕ್ಷ ಪೋಸ್ಟ್ ನಾರಾಯಣಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

