ಕೋಲಾರ

ಪೊಲೀಸರ ಕಿರುಕುಳ ತಪ್ಪಿಸಲು ಆಗ್ರಹಿಸಿ ಎಸ್ಪಿಗೆ ಶೇರ್ ಆಟೋ ಚಾಲಕರ ಮನವಿ

Published On :

ಕೋಲಾರ: ಗ್ರಾಮೀಣ ಪ್ರದೇಶದ ಜನರಿಗೆ ಕಡಿಮೆ ದರಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುತ್ತಿರುವ ಶೇರ್ ಆಟೋಗಳ ಚಾಲಕರಿಗೆ ಪೊಲೀಸರು ವಿನಾ ಕಾರಣ ಕಿರಕುಳ ನೀಡುತ್ತಿದ್ದಾರೆಂದು ಆರೋಪಿಸಿ ಆಟೋ ಚಾಲಕರು ಸೋಮವಾರ ಜಿಲ್ಲಾ ಪೊಲೀಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ನಿವಾಸ್ ಸಪೆಟ್ ಅವರಿಗೆ ದೂರು ನೀಡಿದರು.
ನಗರದ ವಿವಿಧ ಕಡೆಗಳಿಂದ ಹತ್ತಾರು ಶೇರ್ ಆಟೋಗಳು ಸಂಚಾರ ಸ್ಥಗಿತಗೊಳಿಸಿ ಎಸ್ಪಿ ಕಚೇರಿಗೆ ಸಾಗಿತು. ಚಾಲಕರು ಕೆಲ ನಿಮಿಷ ಧರಣಿ ನಡೆಸಿ ನಂತರ ತಮ್ಮ ಸಮಸ್ಯೆ ನಿವಾರಣೆ ಮಾಡುವಂತೆ ಮನವಿ ಸಲ್ಲಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಅನೇಕ ಕಡೆ ಸಾರಿಗೆ ವ್ಯವಸ್ಥೆ ಇಲ್ಲದೆ ಜನತೆ ಪರದಾಡುತ್ತಿದ್ದಾರೆ. ಇವರಿಗೆ ನಾವು ಕಡಿಮೆ ದರದಲ್ಲಿ ಪ್ರಯಾಣ ಸೌಲಭ್ಯ ಕಲ್ಪಿಸಿದ್ದೇವೆ. ಆಟೋ ಖರೀದಿಗಾಗಿ ಸಾಲ ಮಾಡಲಾಗಿದೆ, ತೆರಿಗೆ ಪಾವತಿ ಮಾಡುತ್ತೀವೆ, ಹೀಗಿದ್ದರೂ ಪೊಲೀಸರು ಹಣಕ್ಕಾಗಿ ಪೀಡಿಸುತ್ತಿದ್ದಾರೆ, ಹಣ ಕೊಟ್ಟಲ್ಲಿ ಯಾವುದೇ ತೊಂದರೆ ಇಲ್ಲದಂತೆ ವಾಹನ ಓಡಿಸಬಹುದು, ಕೊಡದಿದ್ದರೆ ಕಿರಕುಳ ನೀಡುತ್ತಾರೆ, ಆಟೋ ನಂಬಿ ಜೀವನ ಸಾಗಿಸುತ್ತಿರುವ ನಮಗೆ ಬೇರೆ ದಾರಿ ಇಲ್ಲವೆಂದು ಅಳಲು ತೋಡಿಕೊಂಡರು.
ಮನವಿ ಸ್ವೀಕರಿಸಿದ ಎಸ್ಪಿ ಡಾ. ರಾಮ್ನಿವಾಸ್ ಸಪೆಟ್, ಕಾನೂನು ಬಾಹಿರವಾಗಿ ಆಟೋ ಓಡಿಸಿದಲ್ಲಿ ಕ್ರಮ ಕೈಗೊಳ್ಳುವುದು ಪೊಲೀಸರ ಕರ್ತವ್ಯ. ಸಾರ್ವಜನಿಕರಿಂದ ಕೆಲ ಆಟೋ ಚಾಲಕರ ವಿರುದ್ಧ ದೂರುಗಳು ಬಂದಿವೆ. ನೀವು ಸರಿಯಾಗಿದ್ದರೆ ಯಾರಿಗೂ ಭಯಪಡಬೇಕಾಗಿಲ್ಲ, ಇನ್ನು ಪೊಲೀಸರು ನಿಮ್ಮಿಂದ ಹಣ ಕೇಳಿದಲ್ಲಿ ತಕ್ಷಣ ನನಗೆ ತಿಳಿಸಿ. ಕಾನೂನು ಪಾಲಿಸಿದರೆ ನನ್ನ ಬೆಂಬಲ ನಿಮಗಿರುತ್ತದೆ, ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದರೆ ಕ್ರಮ ಅನಿವಾರ್ಯವೆಂದು ತಿಳಿಸಿದರು. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ಆಟೋಗಳ ವಿರುದ್ಧ ಅನಗತ್ಯ ಕ್ರಮ ತಡೆಯಬೇಕು, ವಸೂಲಿ ಮಾಡುವ ಪೊಲೀಸರಿಗೆ ಬುದ್ಧಿವಾದ ಹೇಳುವಂತೆ ಆಟೋ ಚಾಲಕರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.