ಕೋಲಾರ

ಕಾಂಗ್ರೆಸ್ಗೆ ಬಹುಮತ ಖಚಿತ

Published On :

ಚಿಂತಾಮಣಿ: ರಾಹುಲ್ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಬಹುಮತ ಪಡೆದು 3ನೇ ಅವಧಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಬೂರಗಮಾಕಲಹಳ್ಳಿ ಸಂಜೀವ ಕಲ್ಯಾಣಮಂಟಪದಲ್ಲಿ ಕಾಂಗ್ರೆಸ್ ಬೂತ್ ಕಮಿಟಿ ಪೂರ್ವ ಬಾವಿ ಸಭೆಯಲ್ಲಿ ಅವರು ಮಾತನಾಡಿದರು.
ಹೊಸ ರೈಲು ಮಾರ್ಗಕ್ಕೆ ಚಾಲನೆ: ಮುಂದಿನ ದಿನಗಳಲ್ಲಿ ಗೌರಿಬಿದನೂರು ನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಆಂಧ್ರಪ್ರದೇಶ ಸಿಟಿಎಂಗೆ ರೈಲು ಮಾರ್ಗ ಸಂಪರ್ಕ ಕಲ್ಪಿಸಿ ಇಲ್ಲಿಂದ ತಿರುಪತಿಗೆ ರೈಲು ವ್ಯವಸ್ಥೆಯನ್ನು ಕಲ್ಪಿಸಿ ರೈತರ ಬೆಳೆದಂತಹ ತರಕಾರಿ, ಹಣ್ಣು-ಹಂಪಲು ಸಾಗಾಣಿಕೆಗೆ ಹೊಸ ರೈಲು ಮಾರ್ಗಕ್ಕೆ ಚಾಲನೆ ನೀಡಲು ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ರೇಲ್ವೆ  ಅಧಿಕಾರಿ ಹಾಗೂ ಸಚಿವರ ಜೊತೆ ಮಾತನಾಡಿ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಭರವಸೆ ನೀಡಿದರು. ಜಿಪಂ ಸದಸ್ಯ ನಂದನವನ ಶ್ರೀರಾಮರೆಡ್ಡಿ,  ಹಾದಿಗೆರೆ ಚೌಡರೆಡ್ಡಿ, ಮುಖಂಡರಾದ ವಾಣೀ ಕೃಷ್ಣಾರೆಡ್ಡಿ, ಆನೂರು ಸುಬ್ಬಣ್ಣ,ಕುರುಟಹಳ್ಳಿ ರಾಧಾಕೃಷ್ಣ, ಕಮಲಮ್ಮ, ಕುರುಬೂರು ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.
ಕಬ್ಬಿಣ ಸಂಗ್ರಹಣೆಗೆ ಚಾಲನೆ
ಕೋಲಾರ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪಂಚ ಲೋಹ ವಿಗ್ರಹ ನಿರ್ಮಾಣ ಮಾಡುವ ಸಂಬಂಧ ಮಣ್ಣು ಮತ್ತು ಕಬ್ಬಿಣದ ಸಂಗ್ರಹಣೆಗಾಗಿ ಲೋಹ ಸಂಗ್ರಹ ಸಮಿತಿ ಕಳುಹಿಸಿರುವ ಬಾಕ್ಸ್ಗಳನ್ನು ಜ.22 ರಂದು ತಂಬಿಹಳ್ಳಿಯ ಮಠದ ಶ್ರೀ 108 ವಿದ್ಯಾ ಸಾಗರ ಮಾಧವ ತೀರ್ಥರಿಂದ ಉದ್ಘಾಟನೆ ಮಾಡಿಸಿ, ತದನಂತರ ತಾಲೂಕು ಹಾಗೂ ಗ್ರಾಪಂಗಳಿಗೆ ಕಳುಹಿಸಲಾಗುವುದು ಎಂದು ಸಮಿತಿ ಸಂಚಾಲಕ ಯಶ್ವಂತ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುಜರಾತಿನಿಂದ ಮಣ್ಣು ಮತ್ತು ಲೋಹಗಳ ಸಂಗ್ರಹಣೆಗೆ ಬಾಕ್ಸ್ಗಳನ್ನು ಲೋಹ ಸಂಗ್ರಹಣಾ ಸಮಿತಿಯಿಂದ ಕಳುಹಿಸಲಾಗಿದೆ ಎಂದರು. ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರನ್ನು ನೇಮಿಸಲಾಗಿದ್ದು ಇವರು ಈ ಸಂಗ್ರಹಣಾ ಕಾರ್ಯದಲ್ಲಿ ಪಾಲ್ಗೊಳ್ಳುವರು, ಪಕ್ಷಾತೀತವಾಗಿ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರ ಸಹಿಗಳನ್ನು ಮತ್ತು ಭಾವಚಿತ್ರಗಳನ್ನು ಸಂಗ್ರಹಿಸಿ ಅವುಗಳನ್ನು ಜ.26 ರ ಒಳಗಾಗಿ ಕಳುಹಿಸಿಕೊಡಬೇಕಾಗಿದೆ ಎಂದು ತಿಳಿಸಿದರು. ದೇಶಕ್ಕಾಗಿ ಹೋರಾಡಿ ಮೃತಪಟ್ಟಿರುವವರ ಪ್ರದೇಶದ ಸಮಾಧಿಗಳ ಹಿಡಿ ಮಣ್ಣನ್ನು ತೆಗೆದುಕೊಳ್ಳಲು ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದು ತಿಳಿಸಿದರು. ಇದೇ ರೀತಿಯಾಗಿ ತಾಲೂಕಿಗೆ 20 ಶಾಲೆಗಳನ್ನು ಆಯ್ಕೆಮಾಡಿ ಪಟೇಲ್ ಅವರ ಬಗ್ಗೆ ಚರ್ಚಾಸ್ಪರ್ಧೆ, ಭಾಷಣ, ಪ್ರಬಂಧ, ರಸಪ್ರಶ್ನೆ  ಕಾರ್ಯಕ್ರಮಗಳನ್ನು ಖಾಸಗಿ ಹಾಗೂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗುವುದು ಎಂದರು. ಬಿಜೆಪಿ ಮುಖಂಡ ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಜಯಂತಿಲಾಲ್, ಮುಳಬಾಗಿಲು ವೆಂಕಟರಮಣಪ್ಪ, ಸಂತೋಷ್, ನವೀನ್, ಮಂಜುನಾಥ್, ನಟರಾಜ್ ಹಾಗೂ ಮಮತ ಇದ್ದರು.
ಸ್ವಾವಲಂಬನೆಗೆ ತರಬೇತಿ ಸಹಕಾರಿ
ಟೇಕಲ್: ಗ್ರಾಮೀಣ ಮಹಿಳೆಯರು ಸ್ವಾವಲಂಭಿಗಳಾಗಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತದೆ ಎಂದು ಜಿಲ್ಲಾ ಸಾಕ್ಷರ ಸಮಿತಿ ಕಾರ್ಯದರ್ಶಿ ವೆಂಕಟಾಚಲಪತಿ ತಿಳಿಸಿದರು. ಕೆ.ಜಿ. ಹಳ್ಳಿ ಗ್ರಾಪಂ ವ್ಯಾಪ್ತಿಯ ಅನಿಗಾನಹಳ್ಳಿ ಗ್ರಾಮದಲ್ಲಿ ಕೋಲಾರ ಜಿಲ್ಲಾ ಲೋಕ ಶಿಕ್ಷಣ ಸಮಿತಿ ಹಾಗೂ ತೊರಲಕ್ಕಿಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿ, 3 ತಿಂಗಳ ಕಾಲ ತರಬೇತಿ ಹಮ್ಮಿಕೊಂಡಿದ್ದು ಫಲಾನುಭವಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಎಂ. ರಾಜಣ್ಣ ತರಬೇತಿ ಬಗ್ಗೆ ತಿಳಿಸಿದರು. ಜಯರಾಮ್, ಕೋದಂಡರಾಮಯ್ಯ, ವೆಂಕಟರೆಡ್ಡಿ, ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.