'ಮತದಾನದ ಹಕ್ಕು ಮಾರಿಕೊಳ್ಳಬೇಡಿ'
ಕೋಲಾರ: ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಮತದಾನ ಮಹತ್ವದ್ದಾಗಿದ್ದು, ಹದಿನೆಂಟು ವರ್ಷ ತುಂಬಿದ ಯಾವುದೇ ಭಾರತೀಯರು ತನಗಿರುವ ಮತದಾನದ ಹಕ್ಕನ್ನು ಮಾರಾಟ ಮಾಡಿಕೊಳ್ಳಬಾರದು ಎಂದು ನಗರದ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ವೆಂಕಟಸ್ವಾಮಿ ಹೇಳಿದರು.
ನಗರದ ಜೂನಿಯರ್ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪೂರ್ವಭಾವಿಯಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿವಿಧ ಚಟುವಟಿಕೆ ಮತ್ತು ಕ್ರೀಡಾ ಸ್ಪರ್ಧೆಗಳ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಚುನಾವಣಾ ಆಯೋಗ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಜ.25ರಂದು ಮತದಾರರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ವಿದ್ಯಾರ್ಥಿಗಳಲ್ಲಿ ಕಡ್ಡಾಯ ಮತದಾನ ಕುರಿತಂತೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದೆಯೆಂದರು. ಹದಿನೆಂಟು ವರ್ಷ ತುಂಬಿದವರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಚುನಾವಣಾ ವ್ಯವಸ್ಥೆಯನ್ನು ಬಲಬಡಿಸುವ ಉದ್ದೇಶದಿಂದ ಅನೇಕ ಬದಲಾವಣೆಗಳು ಆಗುತ್ತಿದ್ದು, ಮತಪೆಟ್ಟಿಗೆಗೆ ಬದಲಾಗಿ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ, ಈಗ ಇದೇ ಪ್ರಥಮ ಬಾರಿಗೆ ಯಾರಿಗೆ ಮತ ಚಲಾಯಿಸುವುದಿಲ್ಲವೆಂಬ ಅವಕಾಶವನ್ನು ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ಪಡೆದ ಮತಕ್ಕಿಂತಲೂ ನೋಟಾ ಮತಗಳು ಹೆಚ್ಚಾಗಿದ್ದಲ್ಲಿ ಅವರನ್ನು ಮತ್ತೇ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸುವ ಸಾಧ್ಯತೆಗಳೂ ಇವೆ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಬಂಗಾರಪೇಟೆ ಬಾಲಕಿಯರ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಡಿ.ಇ. ವೆಂಕಟರಾಜು ಮಾತನಾಡಿ, ಸಮಾಜದ ಬದಲಾವಣೆಗೆ ಯುವಕರು ಮುಂದಾಗಬೇಕೆನ್ನುವುದು ಸ್ವಾಮಿ ವಿವೇಕಾನಂದರ ಹೆಬ್ಬಯಕೆಯಾಗಿತ್ತು, ಸೋಲು ಗೆಲುವು ಎನ್ನುವುದನ್ನು ಗಮನಿಸದೆ ಯುವ ಪೀಳಿಗೆ ಚುನಾವಣಾ ವ್ಯವಸ್ಥೆಯಲ್ಲಿ ಭಾಗವಹಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮ ಸಂಯೋಜಕ ಉಪನ್ಯಾಸಕ ಜಿ.ಎನ್. ಗೋಪಿಕೃಷ್ಣನ್, ವೆಂಕಟೇಶ್ ಇದ್ದರು. ವಿವಿಧ ಸ್ಪರ್ಧೆಗಳ ತೀರ್ಪುಗಾರರಾಗಿ ಉಪನ್ಯಾಸಕರಾದ ಜಿ. ಗಾಯತ್ರಮ್ಮ, ಎಚ್.ಎಂ. ಚಂದ್ರಣ್ಣ, ಜಿ.ಕೆ. ನಾರಾಯಣಸ್ವಾಮಿ ಭಾಗವಹಿಸಿದ್ದರು. ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

