ಕೋಲಾರ

ಎತ್ತಿನಹೊಳೆ ಶಂಕುಸ್ಥಾಪನೆಗೆ ವಿರೋಧ

Published On :

ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರ ಒತ್ತಡದಿಂದ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವ ಎತ್ತಿನಹೊಳೆ ಯೋಜನೆಗೆ ತರಾತುರಿಯಲ್ಲಿ ಸಿದ್ಧತೆಗಳನ್ನು ಕೈಗೊಳ್ಳುತ್ತಿರುವುದರ ನಡುವೆ ಅವಿಭಜಿತ ಕೋಲಾರ ಜಿಲ್ಲೆಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಮುದ್ದೇನಹಳ್ಳಿಯಲ್ಲಿ ಜ.31 ರಂದು ಆಯೋಜಿಸಿರುವ ಎತ್ತಿನಹೊಳೆ ಯೋಜನೆಯ ಶಂಕುಸ್ಥಾಪನೆಗೆ ಅವಕಾಶ ನೀಡುವುದಿಲ್ಲ, ಪಕ್ಷಾತೀತವಾಗಿ ಅವಿಭಜಿತ ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ನೀರಾವರಿ ಹೋರಾಟಗಾರರನ್ನೊಳಗೊಂಡಂತೆ 1 ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮದ ಸ್ಥಳಕ್ಕೆ ಬಂದು ಯಾರನ್ನೂ ಲೆಕ್ಕಿಸದೇ ಅಡ್ಡಿಪಡಿಸುತ್ತೇವೆ. ಮುಂದಿನ ಆಗು ಹೋಗುಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಗರದ ತಾಪಂ ಸಭಾಂಗಣದಲ್ಲಿ ತರಾತುರಿಯಲ್ಲಿ ಜ.31 ರಂದು ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಚರ್ಚಿಸಲು ನೀರಾವರಿ ಹೋರಾಟಗಾರರು ಸಭೆ ನಡೆಸಿದರು. ಈ ಸಭೆಗೆ ಹಾಜರಾಗದ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂಬ ಮಾತನ್ನು ಮೊದಲೇ ಮುಖಂಡರು ಹೇಳಿದ್ದ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.
ಎತ್ತಿನಹೊಳೆ ನೀರಾವರಿ ಯೋಜನೆಗೆ ಯಾರೂ ವಿರೋಧಿಸುತ್ತಿಲ್ಲ. ಆದರೆ, ನೀರಾವರಿ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗುವುದಕ್ಕೆ ಅವಕಾಶ ನೀಡುವುದಿಲ್ಲ. ಪ್ರಸ್ತುತ ಯೋಜನೆಗಾಗಿಯೋಜನಾ ವರದಿ ತಯಾರಾಗಿಲ್ಲ, ಇನ್ನೂ ಟೆಂಡರ್ಗೂ ಅನುಮೋದನೆ ಸಿಕ್ಕಿಲ್ಲ.ಪ್ರಮುಖವಾಗಿ ಪರಿಸರ, ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಂಡೇ ಇಲ್ಲ. ಕೇವಲ ಶಂಕುಸ್ಥಾಪನೆ ನೆರವೇರಿಸುವುದಕ್ಕೆ ಮಾತ್ರ ಯೋಜನೆಯನ್ನು ಸೀಮಿತಗೊಳಿಸಿ, ಇನ್ನೂ 15 ವರ್ಷಗಳ ಕಾಲ ಕೆಲಸ ನಡೆಯದೇ ವಿಳಂಬವಾಗುವಂತೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಎಲ್ಲಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಜ.31ಕ್ಕೆ ಬೇಡ: ಜ.31 ಕ್ಕೆ ಕೈಗೊಳ್ಳುತ್ತಿರುವ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮುಂದೂಡಬೇಕು. ಮುಂಬರುವ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಲು ಕನಿಷ್ಠ 40 ದಿನಗಳಾಗುತ್ತದೆ. ಈ ದಿನದೊಳಗಡೆ ಪರಿಸರ ಖಾತೆಯನ್ನು ನಿಭಾಯಿಸುತ್ತಿರುವ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ನೀರಾವರಿ ಯೋಜನೆಗಾಗಿ ಬೇಕಾಗಿರುವ ಅರಣ್ಯ ಇಲಾಖೆಗೆ ಸೇರಿದ 19 ಹೆಕ್ಟೇರ್ ಭೂಮಿಯಲ್ಲಿ ಕಾಮಗಾರಿ ಕೈಗೊಳ್ಳಲು ಅನುಮತಿ ಕೊಡಿಸಲಿ, ಆ ನಂತರ ಟೆಂಡರ್ಗೆ ಅನುಮೋದನೆ ಪಡೆದು ಮುಂದಿನ ತಿಂಗಳು ಫೆಬ್ರವರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲು ಮುಂದಾಗಲಿ, ಆಗ ಯಾರು ವಿರೋಧ ವ್ಯಕ್ತಪಡಿಸುವುದಿಲ್ಲ. ಬದಲಿಗೆ ಅಗತ್ಯವಿರುವ ಸಹಕಾರ ಕೊಡುತ್ತೇವೆ ಎಂಬ ಅಭಿಪ್ರಾಯ ನೀರಾವರಿ ಹೋರಾಟಗಾರರಿಂದ ಕೇಳಿ ಬಂತು.
ಕೋಲಾರ ಜಿಲ್ಲೆಯಲ್ಲಿ ಯರ್ರಗೋಳ್ ನೀರಾವರಿ ಯೋಜನೆಗೆ ಮೊದಲು ಶಂಕುಸ್ಥಾಪನೆ ನೆರವೇರಿಸಿ ಪೈಪ್ ಲೈನ್ ಅಳವಡಿಸುವ ಕಾರ್ಯ ಕೈಗೊಳ್ಳಲಾಯಿತು. ಆದರೆ, ಡ್ಯಾಂ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡಲಿಲ್ಲ. ಕೊನೆಗೆ ಏಳೆಂಟು ವರ್ಷ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅನುಮತಿ ಸಿಕ್ಕಿದೆ. ಇದೇ ಗತಿ ಎತ್ತಿನಹೊಳೆ ಯೋಜನೆಗೂ ಬರುವುದು ಬೇಡ ಎಂದರು.
ಸ್ವಯಂ ಶಾಸಕರೇ ವಿರೋಧ: ನೀರಾವರಿ ಹೋರಾಟಗಾರರ ಅಭಿಪ್ರಾಯ ಪಡೆದುಕೊಳ್ಳುವುದರ ಜೊತೆಗೆ ಸಭೆಯಲ್ಲಿದ್ದ ಶಾಸಕರು ಜ.31 ಕ್ಕೆ ನಿಗದಿಯಾಗಿರುವ ಕಾರ್ಯಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ವಿರೋಧಿಸುವ ಭರವಸೆ ನೀಡಿದರು.
ಶಾಸಕ ಡಾ.ಕೆ. ಸುಧಾಕರ್ ಮಾತನಾಡಿ, ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವಂತೆ ರಾಜ್ಯ ಸರ್ಕಾರದ ಮೇಲೆ ಹೆಚ್ಚಿಗೆ ಒತ್ತಡಗಳು ಬರುತ್ತಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಭಾಗದ ಜನರಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಕಂಕಣ ಬದ್ಧರಾಗಿದ್ದು ಜನರ ಹಿತವನ್ನು ಕಾಪಾಡುವುದೇ ಅವರ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಯೋಜನೆಗೆ 1 ಸಾವಿರ ಕೋಟಿ ರು.ಗಳನ್ನು ಮೀಸಲಿಟ್ಟು ಟೆಂಡರ್ ಕರೆದಿದ್ದು ಆದಷ್ಟು ಬೇಗ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಉತ್ಸುಕತೆಯನ್ನು ಹೊಂದಿದ್ದಾರೆ ಎಂದ ಅವರು, ಜ.31 ರಂದು ಹಮ್ಮಿಕೊಂಡು ಶಂಕುಸ್ಥಾಪನೆ ತರಾತುರಿಯಲ್ಲಿ ಕೈಗೊಳ್ಳುವುದು ಬೇಡ ಎಂಬ ಜನರ ನಿರ್ಧಾರವನ್ನು ಅವರ ಗಮನಕ್ಕೆ ತಂದು ಕಾರ್ಯಕ್ರಮವನ್ನು ಮುಂದೂಡಲು ಒತ್ತಾಯಿಸುವುದಾಗಿ ಭರವಸೆ ನೀಡಿದರು.  ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, ಶಾಶ್ವತ ನೀರಾವರಿ ಈ ಭಾಗದ ಜನರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಯಾವುದೇ ಸರ್ಕಾರವಾಗಲಿ ಜನರಿಗೆ ವಿರೋಧವಾಗಿ ತೀರ್ಮಾನವನ್ನು ಕೈಗೊಳ್ಳದೇ ಜನರ ಅಭಿಪ್ರಾಯದಂತೆ ನಡೆದುಕೊಳ್ಳಬೇಕು. ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ಗಮನ ಸೆಳೆದಿದ್ದೇನೆ ಎಂದು ತಿಳಿಸಿದರು.
ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ, ಎತ್ತಿನಹೊಳೆ ಯೋಜನೆಗೆ ಜ.31 ರಂದು ಶಂಕುಸ್ಥಾಪನೆ ನೆರವೇರಿಸಲು ಬಿಡುವುದಿಲ್ಲ, ಜಿಲ್ಲೆಯ ಎಲ್ಲಾ ಶಾಸಕರೂ ಜನರ ತೀರ್ಮಾನದಂತೆ ನಡೆದುಕೊಳ್ಳಲಿದ್ದು ಎಲ್ಲರೂ ಸೇರಿಕೊಂಡು ಕಾರ್ಯಕ್ರಮಕ್ಕೆ ಅಡ್ಡಿಯನ್ನುಂಟು ಮಾಡೋಣ ಎಂದು ಕರೆ ನೀಡಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷ ಚಿನ್ನಪ್ಪ, ಮಾಜಿ ಅಧ್ಯಕ್ಷ ಎಂ.ವಿ. ಕೃಷ್ಣಪ್ಪ, ಎಂ.ಬಿ. ಚಿಕ್ಕನರಸಿಂಹಯ್ಯ, ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ, ನೀರಾವರಿ ಹೋರಾಟಗಾರ ಸಮಿತಿ ಅಧ್ಯಕ್ಷ ಆರ್. ಆಂಜನೇಯರೆಡ್ಡಿ, ಮುಖಂಡರಾದ ಎಸ್. ಲಕ್ಷ್ಮಯ್ಯ, ಕೆ.ಸಿ. ರಾಜಾಕಾಂತ್ ಇದ್ದರು.



ಶಾಸಕರ ಮೇಲೆ ಒತ್ತಡ
ಯಾವುದೇ ಕಾರಣಕ್ಕೂ ಜ.31 ರಂದು ಶಂಕುಸ್ಥಾಪನೆ ನೆರವೇರಿಸಲು ಮುಂದಾಗದಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಶಾಸಕರನ್ನು ನೀರಾವರಿ ಹೋರಾಟಗಾರರು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ಭೇಟಿ ಮಾಡಿ ಈ ಭಾಗದ ಜನರ ಅಭಿಪ್ರಾಯ ತಿಳಿಸಿ ಮನವರಿಕೆ ಮಾಡಿಕೊಡಬೇಕು. ತರಾತುರಿಯಲ್ಲಿ ಕೇವಲ ಕಾಟಾಚಾರಕ್ಕೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಜನರು ಬಿಡುವುದಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಜ.31 ರಂದು ನಡೆಸಲು ಉದ್ದೇಶಿಸಿರುವ ಕಾರ್ಯಕ್ರಮವನ್ನು ಮುಂದೂಡುವಂತೆ ಒತ್ತಾಯಿಸಬೇಕೆಂದು ಮನವಿ ಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.