ರಾಷ್ಟ್ರೀಯ ಯುವ ದಿನಾಚರಣೆ
ಕೋಲಾರ: ಯುವ ಸಪ್ತಾಹ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಪ್ರಬಂಧ ಹಾಗೂ ಚರ್ಚಾಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿ ಯುವಜನತೆಯಲ್ಲಿ ವೀರಸನ್ಯಾಸಿ ವಿವೇಕಾನಂದರ ತತ್ವಗಳು, ಮೌಲ್ಯಗಳ ಕುರಿತು ಅರಿವು ಮೂಡಿಸುವ ಯತ್ನವಾಗಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರು ಮತ್ತು ತರುಣ ಶಕ್ತಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಕಾಲೇಜಿನ ಹಲವಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದು, ದ್ವಿತೀಯ ಬಿಎಸ್ಸಿಯ ಸಿ.ಎಸ್. ಶ್ರೀಲತಾ ಪ್ರಥಮ, ಎ.ಎಂ. ನಾಗವೇಣಿ-ದ್ವಿತೀಯ ಹಾಗೂ ಎಸ್. ಸಹನ-ತೃತೀಯ ಬಹುಮಾನ ಪಡೆದರು. ಇಂದಿನ ಸಮಸ್ಯೆಗಳಿಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು ಪರಿಹಾರವೇ ಕುರಿತ ಚರ್ಚಾಸ್ಪರ್ಧೆಯಲ್ಲಿ ದ್ವಿತೀಯ ಬಿಎಸ್ಸಿಯ ಎಸ್. ಸಹನ ಪ್ರಥಮ ಮತ್ತು ಪ್ರಥಮ ಬಿಎಸ್ಸಿಯ ಎಚ್.ಎಸ್.ಪ್ರತಿಮಾ ದ್ವಿತೀಯ ಬಹುಮಾನ ಗಳಿಸಿಕೊಂಡರು. ಸ್ಪರ್ಧೆಗಳ ಉಸ್ತುವಾರಿಯನ್ನು ಸಂಸ್ಥೆಯ ಪ್ರಾಂಶುಪಾಲ ನಂದವಾಡಗಿ, ಉಪನ್ಯಾಸಕ ಹೇಮಮಾಲಿನಿ, ಸುಜಾತಾ, ಎಸ್. ರವೀಂದ್ರ ಇದ್ದರು.
ಶಾಲಾ ವಾರ್ಷಿಕೋತ್ಸವ
ಕೋಲಾರ: ತಾಲೂಕಿನ ಎಚ್. ಕ್ರಾಸ್, ಉರಟಿ ಅಗ್ರಹಾರ ಗ್ರಾಮದವಾಗ್ದೇವಿ ವಿದ್ಯಾನಿಕೇತನ ಪ್ರಾಥಮಿಕ ಮತ್ತು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಜ.24 ರಂದು ಶುಕ್ರವಾರ ಪೋಷಕರ ದಿನಾಚರಣೆ ಮತ್ತು 25 ರಂದು ಶನಿವಾರ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪೋಷಕರ ದಿನಾಚರಣೆ ಪ್ರಾರಂಭವಾಗಲಿದ್ದು ವಾಗ್ದೇವಿ ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಡಾ. ಉಮಾಮಹೇಶ್ವರ್ ಅಧ್ಯಕ್ಷತೆ ವಹಿಸುವರು. ವೇಮಗಲ್ ಠಾಣೆಯ ಸಬ್ಇನ್ಸ್ಪೆಕ್ಟರ್ ಯಶವಂತ್, ವಾಗ್ದೇವಿ ವಿದ್ಯಾನಿಕೇತನ ಶಾಲೆಯ ಮುಖ್ಯ ಶಿಕ್ಷಕಿ ಶೋಭ ಇರುವರು. 25 ರಂದು ಶನಿವಾರ ಮಧ್ಯಾಹ್ನ 1ಗಂಟೆಗೆ ಶಾಲಾ ವಾರ್ಷಿಕೋತ್ಸವ ಆರಂಭವಾಗಲಿದ್ದು ಶಿಡ್ಲಘಟ್ಟ ಕ್ಷೇತ್ರದ ಶಾಸಕ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಕೋಲಾರ ಕ್ಷೇತ್ರದ ಶಾಸಕ ವರ್ತೂರು ಆರ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಬೆಗ್ಲಿ ಸೂರ್ಯಪ್ರಕಾಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ನಾಗೇಂದ್ರ ಪ್ರಸಾದ್, ವಾಗ್ದೇವಿ ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ವಿ. ರಾಜಣ್ಣ ಭಾಗವಹಿಸುವರು.
ಕಠಿಣ ಶ್ರಮದಿಂದ ಗುರಿ ಸಾಧಿಸಿ: ರೋಹಿಣಿ
ಕೋಲಾರ: ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿ ಇಟ್ಟುಕೊಂಡು ಕಠಿಣ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸು ಸಾಧಿಸಬೇಕು ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ತಿಳಿಸಿದರು.
ನಗರದ ಪಿಸಿ ಬಡಾವಣೆಯಲ್ಲಿ ಶ್ರೀನಿವಾಸ ಹಾಗೂ ಶ್ವೇತಾ ವಾಣಿಜ್ಯ ವಿದ್ಯಾಶಾಲೆಗಳ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ಸಲುವಾಗಿ ತನ್ನಲ್ಲಿರುವ ಕೌಶಲ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ಕೆಜಿಎಫ್ನಲ್ಲಿ ಪೇದೆ ಮುರಳೀಧರ್ ಅವರ ಶ್ರಮದಿಂದ ಕೆಜಿಎಫ್ ಪೊಲೀಸ್ ಇಲಾಖೆಯು ರಾಜ್ಯದಲ್ಲಿಯೇ ಮಾಹಿತಿ ತಂತ್ರಜ್ಞಾನ ಬಳಕೆಯ ಮೊಟ್ಟ ಮೊದಲ ಜಿಲ್ಲೆಯಾಗಿ ಹಲವಾರು ವರ್ಷಗಳಿಂದಲೂ ಹೊರ ಹೊಮ್ಮಿದೆ ಎಂದರು. ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ.ಶೈಲಜಾ ಮಾತನಾಡಿ, ಭಾರತದ ಅರ್ಥವ್ಯವಸ್ಥೆಯು ಯುವ ಜನರ ಶ್ರಮದ ಮೇಲೆ ಅವಲಂಬಿತವಾಗಿರುವುದರಿಂದ 2020ಕ್ಕೆ ವಿಶ್ವದ ಸೂಪರ್ ಪವರ್ ಆಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಶಿಕ್ಷಣದಿಂದ ತನ್ನ ಬದುಕನ್ನು ಬದಲಾಯಿಸಿಕೊಳ್ಳುವ ಜೊತೆಗೆ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯುವಜನತೆ ಹೊತ್ತುಕೊಳ್ಳಬೇಕೆಂದರು.
ನಗರಸಭೆ ಆಯುಕ್ತ ಕೆ.ಎನ್.ಜಗದೀಶ್, ಶ್ರೀನಿವಾಸ ವಾಣಿಜ್ಯ ವಿದ್ಯಾಶಾಲೆಯ ಮುಖ್ಯಸ್ಥ ಕೆ.ರಂಗನಾಥ್ ಇದ್ದರು. ಅತ್ಯುತ್ತಮ ವಿದ್ಯಾರ್ಥಿನಿಯರಾದ ಲಾವಣ್ಯ, ಸವಿತಾ, ತರಬೇತುದಾರರಾದ ವಾಣಿ, ದಿವ್ಯಾರಿಗೆ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

