ಕೋಲಾರ

ಜೆಡಿಎಸ್ನಿಂದ ಮತ್ತೆ ಶಾಶ್ವತ ನೀರಾವರಿ ಜಪ

Published On :

ಕೋಲಾರ: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಶಾಶ್ವತ ನೀರಾವರಿ ಯೋಜನೆಯನ್ನೇ ಪ್ರಮುಖ ಆಜೆಂಡಾವನ್ನಾಗಿಟ್ಟುಕೊಂಡು ಮತಯಾಚಿಸಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಅಂಕಿತ ಹಾಕುವುದಾಗಿ ವಾಗ್ದಾನ ಮಾಡಿದ್ದರಾದರೂ ಮತದಾರರ ಆಶೀರ್ವಾದ ಸಿಗಲಿಲ್ಲವೆಂದರು.
ಶಾಶ್ವತ ನೀರಾವರಿ ಯೋಜನೆ ಜಾರಿ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ವಿಫಲವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳನ್ನು ಮತದಾರ ತಿರಸ್ಕಾರ ಮಾಡುವುದು ಖಚಿತ, ಈ ಬಾರಿ ರಾಷ್ಟ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರಲಿದ್ದು, ರಾಜ್ಯದಲ್ಲಿ ಕನಿಷ್ಠ 10ರಿಂದ 12 ಸ್ಥಾನ ಗಳಿಸುವ ಜೆಡಿಎಸ್ ಕೇಂದ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎತ್ತಿನ ಹೊಳೆ ಯೋಜನೆಗೆ ಜ.31 ರಂದು ಶಂಕುಸ್ಥಾಪನೆ ನೆರವೇರಲಿದೆ ಎಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಆದರೆ, ಯೋಜನೆಗೆ ಇನ್ನು ಡಿಪಿಆರ್ ಆಗದಿರುವುದರಿಂದ ಹಾಗೂ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಸಿದಗಿರುವುದರಿಂದ ಶಂಕುಸ್ಥಾಪನೆ ಮಾಡಿದರೂ ಯೋಜನೆ ಅನುಷ್ಠಾನ ಕಷ್ಟವಾಗಲಿದೆ ಎಂದರು. ಮೊಯ್ಲಿ ಅವರು ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎತ್ತಿನ ಹೊಳೆಗೆ ಶಂಕುಸ್ಥಾಪನೆ ಮಾಡಲು ಹೊರಟಿದ್ದಾರೆಂದು ಆರೋಪಿಸಿದರು.
ನಮಗೆ ಕುಡಿಯುವ ನೀರು ಬೇಕಾಗಿದೆ, ಸರ್ಕಾರ ಇಂತಹದ್ದೇ ಯೋಜನೆಯಿಂದ ನೀರು ಕೊಡಲಿ ಎಂಬುದು ನಮ್ಮ ವಾದವಲ್ಲ, ಯೋಗ್ಯವಾಗ ಯೋಜನೆ ಜಾರಿಗೆ ತಂದರೆ ಸಹಕಾರ ನೀಡುವುದಾಗಿ ವೆಂಕಟಶಿವಾರೆಡ್ಡಿ ತಿಳಿಸಿದರು. ಡಾ.ಪರಮಶಿವಯ್ಯ ವರದಿ ಜಾರಿಗೆ ಜೆಡಿಎಸ್ ವರಿಷ್ಠರು ವಿರೋಧ ವ್ಯಕ್ತಪಡಿಸಿ ಕೆ.ಸಿ. ರೆಡ್ಡಿ ವರದಿ ಅನುಷ್ಠಾನಕ್ಕೆ ಮುಂದಾಗಿದ್ದರು, ನಿಮ್ಮ ಪಕ್ಷದವರೇ ಈಗ ಮತ್ತೊಂದು ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ, ಈಗ ನಿಮಗೆ ಯಾವ ಯೋಜನೆಯಿಂದ ಶಾಶ್ವತ ನೀರಾವರಿ ಯೋಜನೆ ಜಾರಿಯಾಗಬೇಕಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಲು ತಡಬಡಿಸಿದರು.
ಚುನಾವಣೆಗೆ ತಯಾರಿ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುವುದಕ್ಕೆ ಒಳ್ಳೆಯ ಅವಕಾಶಗಳು ಇವೆ. ಈ ಬಾರಿ ಈ ಎರಡೂ ಕ್ಷೇತ್ರಗಳು ಜೆಡಿಎಸ್ ಪಾಲು ಆಗುವುದು ಖಚಿತ, ಕಾಂಗ್ರೆಸ್ ಕೇಂದ್ರದಲ್ಲಿ ಉತ್ತಮ ಆಡಳಿತ ನೀಡಲು ವಿಫಲವಾಗಿದೆ ಎಂದರು.
ಜೆಡಿಎಸ್ನಿಂದ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಅಭ್ಯರ್ಥಿಗಳನ್ನು ವರಿಷ್ಠರು ನಿರ್ಧರಿಸುತ್ತಾರೆ, ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು 10 ಮಂದಿ ಆಕಾಂಕ್ಷಿಗಳಿದ್ದು ಬೆಂಗಳೂರು ಬಿಬಿಎಂಪಿಯ ಮಾಜಿ ಆಯುಕ್ತ ಸಿದ್ದಯ್ಯ ಹಾಗೂ ಬೆಂಗಳೂರು ವಿವಿಯ ಮೈಲಾರಪ್ಪ ಸೇರಿದಂತೆ 10 ಮಂದಿಯ ಹೆಸರನ್ನು ವರಿಷ್ಠರಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಇಲ್ಲವೇ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರಲ್ಲ, ನಮ್ಮ ಪಕ್ಷದಿಂದ 10ರಿಂದ 12 ಮಂದಿ ಗೆಲ್ಲುತ್ತಾರೆ, ಇದೇ ತಿಂಗಳು ಜ.25 ರಂದು ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿ ಲೋಕಸಭಾಕ್ಷೇತ್ರದ ಮುಖಂಡರ ಹಾಗೂ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು ಅಂದೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗುವುದೆಂದರು.
ಸಮಾವೇಶಕ್ಕೆ ಪಕ್ಷದ ವರಿಷ್ಠರನ್ನು ಆಹ್ವಾನಿಸಿಲ್ಲ, ಜಿಲ್ಲೆಯ ಮುಖಂಡರ ನೇತೃತ್ವದಲ್ಲೇ ಸಭೆ ನಡೆಯುತ್ತದೆ. ಜ.29 ರಂದು ಬೆಂಗಳೂರಿನಲ್ಲಿ ಯುವ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವ ಕಾರ್ಯಕರ್ತರನ್ನು ಸಂಘಟಿಸಿ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಕೆಎಚ್ಎಂ ಸೋಲು ಮುಖ್ಯವಲ್ಲ: ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರನ್ನು ಸೋಲಿಸಬೇಕೆಂಬುದು ನಮ್ಮ ಉದ್ದೇಶವಲ್ಲ, ಜೆಡಿಎಸ್ ಗೆಲ್ಲಬೇಕೆಂಬುದು ನಮ್ಮ ಆಸೆ. ಕೆಲವು ಸಂದರ್ಭಗಳಲ್ಲಿ ತೆಗೆದುಕೊಂಡ ರಾಜಕೀಯ ತೀರ್ಮಾನಗಳಲ್ಲಿ ವ್ಯತ್ಯಾಸವಾಗಿರಬಹುದು, ಈ ಬಾರಿ ಯಾವುದೇ ಮ್ಯಾಚ್ ಫಿಕ್ಸಿಂಗ್ಗೆ ಅವಕಾಶ ಇರುವುದಿಲ್ಲ, ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೆ ಪಕ್ಷದ ಎಲ್ಲ ಕಾರ್ಯಕರ್ತರು ಚುನಾವಣೆಗಾಗಿ ಕೆಲಸ ಮಾಡಲಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ರಾಮರಾಜು, ಶ್ರೀಕೃಷ್ಣ, ಜಿಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಮಂಗಮ್ಮ ಮುನಿಸ್ವಾಮಿ, ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜು, ಮಾಜಿ ಶಾಸಕ ಭಕ್ತವತ್ಸಲಂ, ಜಿಪಂ ಮಾಜಿ ಅಧ್ಯಕ್ಷ ಚೌಡೇಶ್ವರಿ, ನಗರಸಭೆ ಸದಸ್ಯರಾದ ಮುಬಾಕರ್, ಮುರಳಿಗೌಡ, ಕೆಜಿಎಫ್ ನಗರಸಭೆ ಮಾಜಿ ಅಧ್ಯಕ್ಷ ದಯಾನಂದ್, ಛದ್ರಕೋಡಿಹಳ್ಳಿ ರಾಮೇಗೌಡ, ರವೀಂದ್ರ, ಚನ್ನವೀರಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.