ಕೋಲಾರ

ಮತ್ತೆ ಮರಳು ಸಾಗಾಣೆಕೆ ಅನುಮತಿ ಕೂಗು

Published On :

ಸರ್ಕಾರದ ನಿಷೇಧದ ನಡುವೆಯೂ ನಿಲ್ಲದ ಅಕ್ರಮ ಮರಳು ದಂಧೆ



ಟಿ ಎನ್. ವೆಂಕಟೇಶ್
ಕ.ಪ್ರ.ವಾರ್ತೆ   ಚಿಕ್ಕಬಳ್ಳಾಪುರ   ಜ.22
ಸಾರ್ವಜನಿಕರ ಒತ್ತಾಯದಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿತಕ್ಕೆ ಕಾರಣವಾಗುವ ಅಕ್ರಮ ಮರಳು ಸಾಗಾಣಿಕೆ ನಿಷೇಧಿಸಲಾಗಿದೆ. ಈ ನಡುವೆ ಕಟ್ಟಡ ನಿರ್ಮಾಣ ಗುತ್ತಿಗೆದಾರರು, ಮರಳು ಸಾಗಾಣಿಕೆದಾರರು ಮತ್ತೆ ಮರಳು ಸಾಗಾಣಿಗೆ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದಾರೆ.
ಬಯಲು ಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಪಾತಾಳ ತಲುಪುತ್ತಿದ್ದು 1 ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಸಿಗುತ್ತಿರುವ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್ ಸೇರಿದಂತೆ ಲವಣಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಮಿಶ್ರಣವಾಗಿ ಕುಡಿಯುಲು ಯೋಗ್ಯವಾಗಿಲ್ಲ. ಅಲ್ಲದೇ ನದಿಪಾತ್ರಗಳಲ್ಲಿ ಅಕ್ರಮವಾಗಿ ಮರಳನ್ನು ಲೂಟಿ ಮಾಡಿ ಬೇರೆಡೆಗೆ ಸಾಗಾಣಿಕೆ ಮಾಡುತ್ತಿರುವುದರಿಂದ ಇನ್ನೂ ಅಂತರ್ಜಲ ಮಟ್ಟ ಕುಸಿಯುತ್ತಿದೆ.
ಈಗಾಗಲೇ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ, ಜಕ್ಕಲಮಡಗು, ಕೇತೇನಹಳ್ಳಿ, ಪೆರೇಸಂದ್ರ, ಮಂಡಿಕಲ್ ಹಾಗೂ ಗೌರಿಬಿದನೂರು ತಾಲೂಕಿನ ಉತ್ತರಪಿನಾಕಿನಿ, ಮಂಚೇನಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮರಳನ್ನು ಯರ್ರಾಬಿರ್ರಿ ಲೂಟಿ ಮಾಡಲಾಗುತ್ತಿದೆ. ಅನೇಕ ಹೋರಾಟಗಳ ನಡುವೆಯೂ ಜನನಾಯಕರೆನಿಸಿಕೊಂಡ ಹಲವರೇ ಸರ್ಕಾರಕ್ಕೂ ಮತ್ತು ಜನರಿಗೂ ವಂಚನೆ ಮಾಡಿ ಮರಳನ್ನು ಲೂಟಿ ಮಾಡಿ ಬೆಳೆಯುತ್ತಲೇ ಇದ್ದಾರೆ. ಜಿಲ್ಲಾಡಳಿತ ಮರಳು ಸಾಗಾಣಿಕೆಯನ್ನು ನಿಷೇಧ ಮಾಡಿದ್ದರೂ ಸಂಬಂಧಪಟ್ಟ ಇಲಾಖೆಗಳ ಕೆಲ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಬುಟ್ಟಿಗೆ ಹಾಕಿಕೊಂಡು ಮರಳಿನ ಅಕ್ರಮ ಮಾರಾಟ ವ್ಯವಹಾರ ನಡೆಸುತ್ತಿದ್ದಾರೆ. ತಮ್ಮ ಗ್ರಾಮಗಳ ಸುತ್ತಮುತ್ತಲೂ ಮರಳನ್ನು ಖಾಲಿ ಮಾಡುತ್ತಿರುವುದರ ಬಗ್ಗೆ ನರಿಂದ ದೂರುಗಳನ್ನು ಕೇಳಿ ಬರುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.
ಜನರಿಗೇ ತೊಂದರೆ: ಮರಳಿನ ಸಾಗಾಣಿಕೆ ನಿಷೇಧ ಜನರನ್ನೇ ತೊಂದರೆಗೀಡು ಮಾಡುತ್ತಿದೆ. ಬಹಳಷ್ಟು ಮಂದಿ ದಂಧೆಕೋರರು ಅನೇಕರ ಕಣ್ಣು ತಪ್ಪಿಸಿ, ಜೊತೆಗೆ ನಿಭಾಯಿಸಿಕೊಂಡು ಮರಳು ತರುತ್ತಿರುವ ಹಿನ್ನೆಲೆಯಲ್ಲಿ 4 ಸಾವಿರ ರು.ಗಳಿಗೂ ಹೆಚ್ಚು ಹಣವನ್ನು ತೆತ್ತು ಮನೆ ಮತ್ತು ಕಟ್ಟಡ ಮಾಲೀಕರು ಮರಳನ್ನು ಪಡೆಯುತ್ತಿದ್ದಾರೆ. ಮರಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇರುವುದರಿಂದ ದರ ದುಬಾರಿಯಾಗುತ್ತಿದ್ದು ದಂಧೆಕೋರರು ತಾವು ನೀಡಬೇಕಾಗಿರುವ ಲಂಚ, ಹೆಚ್ಚಾಗಿರುವ ಕಾರ್ಮಿಕರ ಕೂಲಿ ಹಣವನ್ನು ಜನ ಸಾಮಾನ್ಯರ ಮೇಲೆ ಹಾಕುತ್ತಿದ್ದಾರೆ. ಇದರಿಂದ ಮರಳು ಸಾಗಾಣಿಕೆಯೂ ನಿಂತಿಲ್ಲ, ಸುಲಭವಾಗಿ ಮರಳು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಗುತ್ತಿಗೆದಾರರ ಒತ್ತಾಯ: ಮರಳು ಸಾಗಾಣಿಕೆ ಲಾರಿ ಮಾಲೀಕರ ಮುಷ್ಕರದ ಬಿಸಿಗೆ ರಾಜ್ಯ ಸರ್ಕಾರ ಹೊಸದಾಗಿ ಮರಳು ನೀತಿ ಜಾರಿಗೆ ತಂದಿರುವ ಬೆನ್ನಲ್ಲೇ ಇಲ್ಲಿನ ಮರಳು ಸಾಗಾಣಿಕೆ ಗುತ್ತಿಗೆದಾರರು, ಲಾರಿ ಮತ್ತು ಟ್ರ್ಯಾಕ್ಟರ್ ಮಾಲೀಕರು, ಚಾಲಕರು ಪ್ರತಿಭಟನೆ ಕೈಗೊಂಡು ಮರಳು ಸಾಗಾಣಿಕೆಗೆ ಅವಕಾಶ ನೀಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಸಿದ್ಧೇಶ್ವರಸ್ವಾಮಿ ದೇವಾಲಯದಲ್ಲಿ ಜಮಾಯಿಸಿದ ಮುಖಂಡರು, ಪ್ರಸ್ತುತ ಮರಳು ಸಾಗಾಣಿಕೆಯನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಯಾವುದೇ ಮನೆ ಮತ್ತು ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿಲ್ಲ, ಇನ್ನೂ ಕೆಲವು ಅರ್ಧಂಬರ್ಧ ನಿಂತು ಮಾಲೀಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಗಾರೆ ಕೆಲಸಗಾರರು ಮತ್ತು ಗುತ್ತಿಗೆದಾರರಿಗೆ ಕೆಲಸವಿಲ್ಲದೇ ಜೀವನ ನಡೆಸಲು ತೊಂದರೆಯಾಗುತ್ತಿದೆ. ಸರ್ಕಾರ ಹೊಸದಾಗಿ ರೂಪಿಸಿರುವ ನಿಯಮದಂತೆ ಜಿಲ್ಲೆಯಲ್ಲೂ ಕಾನೂನು ಬದ್ಧವಾಗಿ ಮರಳು ಸಾಗಾಣಿಕೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಪ್ರಸ್ತುತ ಸ್ಥಳೀಯ ಮನೆ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದರೂ ತಡೆಯಲಾಗುತ್ತಿದೆ. ದುಬಾರಿ ದಂಡ ಹಾಕಿ ಮರಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಮನೆ ಮತ್ತು ಕಟ್ಟಡ ಮಾಲೀಕರ ಬೇಡಿಕೆಗೆ ಅನುಗುಣವಾಗಿ ಮರಳನ್ನು ಪೂರೈಕೆ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿ, ನದಿ ಪಾತ್ರಗಳನ್ನು ಹೊರತುಪಡಿಸಿ ಮರಳನ್ನು ಸಾಗಾಣಿಕೆ ಮಾಡಲು ನಿರ್ದಿಷ್ಟವಾಗಿ ಸ್ಥಳಗಳನ್ನು ಸರ್ಕಾರ ನಿಗದಿಪಡಿಸಬೇಕು. ಸಮರ್ಪಕವಾದ ಶುಲ್ಕವನ್ನು ಪಡೆದುಕೊಂಡು ಅಕ್ರಮ ವಸೂಲಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.