ನಾಳೆಯಿಂದ ಫಲಪುಷ್ಪ ಪ್ರದರ್ಶನ
ಚಿಕ್ಕಬಳ್ಳಾಪುರ: ಕೃಷಿ ಮತ್ತು ತೋಟಗಾರಿಕೆಯಲ್ಲಾಗುತ್ತಿರುವ ಪ್ರಗತಿ ಬಿಂಬಿಸಿ ರೈತರಲ್ಲಿ ಜಾಗೃತಿ ಮೂಡಿಸಲು ಜ.26 ರಿಂದ ಜ.28 ರವರೆಗೆ ತಾಲೂಕಿನ ನಂದಿ ಕ್ರಾಸ್ ಬಳಿ ಇರುವ ಪಿಆರ್ಎಸ್ ತೋಟಗಾರಿಕಾ ಕ್ಷೇತ್ರದಲ್ಲಿ ಮೂರು ದಿನಗಳ ಕೃಷಿ ಮಾಹಿತಿ ಆಂದೋಲನ ಮತ್ತು ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ ಜಿಲ್ಲಾಡಳಿತ ಫಲಪುಷ್ಪ ಪ್ರದರ್ಶನವನ್ನು ಆಕರ್ಷಕವಾಗಿ ಕೈಗೊಳ್ಳುತ್ತ ಬಂದಿದ್ದು ಈ ಬಾರಿಯು ಮತ್ತಷ್ಟು ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರದರ್ಶನಕ್ಕಾಗಿ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ನಂದಿ ಕ್ರಾಸ್ ಬಳಿ ಇರುವ ತೋಟಗಾರಿಕೆ ಕ್ಷೇತ್ರದಲ್ಲಿ ನಾನಾ ಫಲಪುಷ್ಪಗಳನ್ನು ಬಳಸಿಕೊಂಡು ಅಲಂಕೃತ ವಸ್ತುಗಳನ್ನು ತಯಾರಿಸುವ ಕೆಲಸದಲ್ಲಿ ವಿವಿಧ ನುರಿತ ಕಲಾವಿದರು ತಲ್ಲೀನರಾಗಿದ್ದಾರೆ. ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಖಾಸಗೀ ಕಂಪನಿಗಳು ಸೇರಿದಂತೆ ಹಲವರು ರೈತರಿಗೆ ಅತ್ಯವಶ್ಯಕವಾಗಿರುವ ಕೃಷಿ ಯಂತ್ರೋಪಕರಣಗಳು, ಹೊಸ ಬೀಜತಳಿಗಳು, ಸಸಿಗಳು, ಕೃಷಿ ಉತ್ಪನ್ನಗಳಿಗೆ ಸಂಬಂಧಪಟ್ಟಂತೆ ಜಾಗೃತಿ ಮೂಡಿಸಲು ಮಳಿಗೆಗಳನ್ನು ಸ್ಥಾಪಿಸಲು ಮುಂದಾಗಿವೆ.
ಕಳೆದ 2012 ಮತ್ತು 2013 ರಲ್ಲಿ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿಗಳಿಂದ ಮೀನು, ಆನೆ, ಮೊಸಳೆ, ತಂಬೂರಿ, ದೀಪ, ಗಣಪತಿ, ಸೂರ್ಯ ಕಾಂತಿ, ದೇವರ ಮಂಟಪ ಸೇರಿದಂತೆ ವಿವಿಧ ಕಲಾಕೃತಿಗಳನ್ನು ತಯಾರಿಸಿ ಪ್ರದರ್ಶನದಲ್ಲಿಡಲಾಗಿತ್ತು. ಆಕರ್ಷಕ ಹೂಗಳಿಂದ ನಂದಿ ಮತ್ತು ಭಾರತ ನಕ್ಷೆಯನ್ನು ತಯಾರಿಸಲಾಗಿತ್ತು. ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಾಣಿಕೆ ಪರಿಚಯ, ಪಶು ಸಂಗೋಪನಾ ಇಲಾಖೆಯಿಂದ ಟಗರು, ಕುರಿ ಸಾಕಾಣಿಕೆ, ಖಾಸಗೀ ಕಂಪನಿಗಳು ಪವರ್ ಟಿಲ್ಲರ್, ಹನಿ ನೀರಾವರಿ ಪದ್ಧತಿ, ರೇಷ್ಮೆ ಸೊಪ್ಪು ಕತ್ತರಿಸುವ ಯಂತ್ರ, ವಿವಿಧ ರಾಸಾಯಾನಿಕ ಔಷಧಿಗಳು, ಗೊಬ್ಬರಗಳು, ಇದರ ಜೊತೆಗೆ ಸಾವಯವ ಗೊಬ್ಬರ ಸೇರಿದಂತೆ ರೈತರಿಗೆ ಅನುಕೂಲವಾಗುವ ವಿಷಯಕ್ಕೆ ಸಂಬಂಧಿಸಿದಂತೆ ಮಳಿಗೆಗಳನ್ನು ತೆರೆದಿದ್ದವು. ಅಲ್ಲದೇ ರೈತರಿಗೆ ಕೃಷಿಯಲ್ಲಿನ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ನುರಿತ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಪ್ರಗತಿಪರ ರೈತರನ್ನು ಪರಿಚಯಿಸುವುದು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇದರಿಂದ ರೈತರು ಮಾತ್ರವಲ್ಲದೇ ತಮ್ಮ ಕುಟುಂಬ ಸಮೇತ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನವನ್ನು ವೀಕ್ಷಿಸಿ ಖುಷಿಪಟ್ಟಿದ್ದರು. ಇದೀಗ 2014 ರಲ್ಲೂ ಮತ್ತಷ್ಟು ಗಮನ ಸೆಳೆಯುವಂತೆ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಹಣ್ಣು ಮತ್ತು ತರಕಾರಿಗಳ ಹೊಸ ತಳಿಗಳು, ಲಂಬ ಮತ್ತು ಚಾವಣಿ ಉದ್ಯಾನವನ, ಔಷಧಿ ಮತ್ತು ಸುಗಂಧಿತ ಬೆಳೆಗಳು, ಸಾವಯವ ಕೃಷಿ, ಮಾವು ಮತ್ತು ಗೋಡಂಬಿ ಅಧಿಕ ಸಾಂದ್ರತೆಯ ಪದ್ಧತಿ, ಪ್ಲಾಸ್ಟಿಕ್ ಹೊದಿಕೆಯಿಂದಾಗುವ ಅನುಕೂಲಗಳು, ಮನೆಯಂಗಳದಲ್ಲಿ ಬೆಳೆಸಬಹುದಾದ ಪೌಷ್ಟಿಕ ತೋಟದ ಪ್ರಾತ್ಯಕ್ಷಿತೆ, ಹಣ್ಣು ಮತ್ತು ತರಕಾರಿಗಳಲ್ಲಿ ಅಲಂಕಾರಿಕ ಕೆತ್ತನೆ ಮತ್ತು ಜೋಡಣೆ ಸೇರಿದಂತೆ ಇತರೆ ಅಭಿವೃದ್ಧಿ ಇಲಾಖೆಗಳಿಂದ ಮಾಹಿತಿ ಮತ್ತು ವಸ್ತು ಪ್ರದರ್ಶನ ನಡೆಯಲಿದೆ.
ಅಲ್ಲದೇ ಅಣಬೆ ಬೇಸಾಯ, ಕೈ ತೋಟ ಮತ್ತು ದಾರಿ ತೋಟ, ಕೃಷಿ ಬೆಳೆಗಳ ಬೇಸಾಯ ಕ್ರಮ, ಕೃಷಿ ಇಲಾಖೆ ಕಾರ್ಯಕ್ರಮಗಳು, ಸುರಕ್ಷಿತ ಕೀಟನಾಶಕಗಳು, ತೋಟಗಾರಿಕೆಯಲ್ಲಿ ಸಂರಕ್ಷಿತ ಬೇಸಾಯ, ಹಣ್ಣಿನ ಬೆಳೆಗಳ ಬೇಸಾಯ, ಬಾಳೆ ಬೇಸಾಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಖ್ಯಾತ ವಿಜ್ಞಾನಿಗಳು ತಾಂತ್ರಿಕ ಸಮಾವೇಶವನ್ನು ನಡೆಸಿಕೊಡಲಿದ್ದಾರೆ. ಹುಲಿ ಹಾಗೂ ಪರಿಸರ ಸಂರಕ್ಷಣೆ ಜಾಗೃತಿ ವಿಶೇಷ ಆಕರ್ಷಣೆಯಾಗಿದೆ.
ಭಾಗವಹಿಸಲು ಮನವಿ: ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ನಂದಿ ಉದ್ಯಾನ ಕಲಾ ಸಂಘದ ಸಹಯೋಗದೊಂದಿಗೆ ನಡೆಯುವ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಜ.26 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ತಿಳಿಸಿದ್ದಾರೆ.
ಜಿಪಂ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ. ಸುಧಾಕರ್ ವಹಿಸಲಿದ್ದು ಕೇಂದ್ರ ಸಚಿವರಾದ ಡಾ.ಎಂ. ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕೆ ಸಚಿವ ಡಾ. ಶಾಮನೂರು ಶಿವಶಂಕರಪ್ಪ, ವಿಧಾನಸಭೆ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪನಿದೇಶಕಿ ಎಚ್. ಗಾಯಿತ್ರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಮದಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

