ಪಾಠ ಮಾಡದ ಶಿಕ್ಷಕರ ಬಗ್ಗೆ ಮಾಹಿತಿ ನೀಡಿದರೆ ಕ್ರಮ
ಕೋಲಾರ: ಪಾಠ ಮಾಡದ ಶಿಕ್ಷಕರ ಬಗ್ಗೆ ಯಾರಾದರೂ ನಿಖರವಾದ ಮಾಹಿತಿ ನೀಡಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.
ನಗರಕ್ಕೆ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿದ್ದ ಸಚಿವರಿಗೆ ಪಾಠ ಮಾಡದೆ ಕೆಲ ಶಿಕ್ಷಕರು ರಾಜಕಾರಣ ಮಾಡುತ್ತಿದ್ದಾರೆ. ಶಿಕ್ಷಕರ ಸಂಘಟನೆಯಲ್ಲಿನ ಕೆಲ ಪದಾಧಿಕಾರಿಗಳು ಶಾಲೆಗಳಿಗೆ ಸರಿಯಾಗಿ ಹೋಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಸಾರ್ವಜನಿಕವಾಗಿ ಕೇಳಿ ಬಂದಿದ್ದರೂ ಕ್ರಮ ಕೈಗೊಂಡಿಲ್ಲವೆಂದು ಪತ್ರಕರ್ತರು ತಿಳಿಸಿದಾಗ, ರಾಜ್ಯದ ಕೆಲ ಕಡೆ ಶಿಕ್ಷಕರಿಗೆ ಪಾಠ ಹೇಳುವುದಕ್ಕೆ ಬರಲ್ಲ ಅನ್ನೋದು ನನಗೂ ಗೊತ್ತಿದೆ, ಇಂತಹ ಶಿಕ್ಷಕರ ವಿರುದ್ಧ ಸಂಬಂಧಪಟ್ಟ ಬಿಇಒಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಕೋಲಾರ ಜಿಲ್ಲೆಯಲ್ಲಿ ಶಾಲೆಗೆ ಹೋಗದೆ, ಒಂದು ವೇಳೆ ಹೋದರೂ ಪಾಠ ಮಾಡದೆ ರಾಜಕಾರಣ ಮಾಡುತ್ತಿರುವ ಶಿಕ್ಷಕರು ಯಾರಾದರೂ ಇದ್ದಲ್ಲಿ ಅಂತಹವರ ವಿರುದ್ಧ ಜನತೆ ಖಚಿತ ಮಾಹಿತಿ ನೀಡಿದಲ್ಲಿ ಮನೆಗೆ ಕಳುಹಿಸುತ್ತೇನೆಂದು ಎಚ್ಚರಿಕೆ ನೀಡಿದರು. ಯಾವುದೇ ಆಧಾರವಿಲ್ಲದೆ ಏಕಾಏಕಿ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ, ಬಿಇಒಗಳು ಶಾಲೆಗಳ ಪರಿಸ್ಥಿತಿ ಬಗ್ಗೆ ಗಮನ ಹರಿಸಬೇಕು, ಕೆಲಸ ಮಾಡದ ಶಿಕ್ಷಕರಿಗಿಂತ ಮೊದಲು ಬಿಇಒಗಳು ಸರಿ ಹೋಗಬೇಕು, ಒಂದೇ ಕಡೆ ಮೂರು ವರ್ಷಕ್ಕಿಂತ ಹೆಚ್ಚು ಸಮಯ ಕೆಲಸ ಮಾಡುತ್ತಿರುವ ಬಿಇಒಗಳನ್ನು ಯಾವುದೇ ಮುಲಾಜು ಇಲ್ಲದೆ ಬೇರೆಡೆಗೆ ವರ್ಗಾವಣೆ ಮಾಡುತ್ತೇನೆಂದು ಹೇಳಿದರು.
ಕೋಲಾರ ನಗರದಲ್ಲಿ ಗುರುವಾರ ನಡೆದ ತಾಲೂಕು ಶೈಕ್ಷಣಿಕ ಸಮಾವೇಶದಲ್ಲಿ ನಲಿಕಲಿ ಸೇರಿದಂತೆ ಶಿಕ್ಷಣ ಇಲಾಖೆಯಿಂದ ಜಾರಿಗೆ ತಂದಿರುವ ಕಾರ್ಯಕ್ರಮಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಲಿಕಲಿ ಯೋಜನೆ ಜಾರಿಯಲ್ಲಿತ್ತು. ಆಗ ಯೋಜನೆ ಬಗ್ಗೆ ಮಾತನಾಡದೆ ಈಗ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕೆಂಬುದು ನಮ್ಮ ಉದ್ದೇಶವೂ ಆಗಿದೆ, ಇದಕ್ಕೆ ಪೂರಕವಾದ ಸಲಹೆ ನೀಡಿದಲ್ಲಿ ಬದಲಾವಣೆ ತರಲು ಬದ್ಧ. ನಮ್ಮ ಸರ್ಕಾರದಿಂದ ಶಿಕ್ಷಣ ಇಲಾಖೆ ಖಂಡಿತ ಹಾಳಾಗುತ್ತಿಲ್ಲ, ಹಿಂದಿನ ಸರ್ಕಾರದಲ್ಲಿ ಏನಾದರೂ ಅವ್ಯವಸ್ಥೆ ಆಗಿದ್ದರೆ ಮಾಹಿತಿ ನೀಡಿದಲ್ಲಿ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಮಾರ್ಮಿಕವಾಗಿ ನುಡಿದರು.
ಬಿಎಡ್ ಮಾಡಿರುವ ಶಿಕ್ಷಕರ ಸಮಸ್ಯೆ ನಾನು ಶಿಕ್ಷಣ ಸಚಿವನಾದ ಮೇಲೆ ಬಗೆಹರಿಯುವ ಹಂತ ತಲುಪಿದೆ. ಸಮಸ್ಯೆ ಸುಳಿಯಲ್ಲಿ ಸಿಕ್ಕಿದ್ದ ಶಿಕ್ಷಕರಿಗೆ ಜೀವದಾನ ಮಾಡಿದ್ದೇನೆ, ಕ್ಷೀರ ಭಾಗ್ಯ ಯೋಜನೆಯಿಂದಾಗಿ 22 ಜಿಲ್ಲೆಯಲ್ಲಿ ಮಕ್ಕಳಲ್ಲಿನ ಪೌಷ್ಠಿಕಾಂಶದ ಕೊರತೆ ಕಡಿಮೆ ಆಗಿದೆ, ಶಿಕ್ಷಕರು ಸರ್ಕಾರ ಉದ್ದೇಶಗಳನ್ನು ಅರಿತು ಕೆಲಸ ಮಾಡಬೇಕು, ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕಾಗಿದೆ. ಒಂದೇ ಸಾರಿ ಎಲ್ಲವೂ ಸಾಧ್ಯವಿಲ್ಲ, ಪ್ರಮುಖ ಸಮಸ್ಯೆಗಳನ್ನು ನಿವಾರಣೆ ಮಾಡಲು ಆದ್ಯತೆ ನೀಡಿರುವುದಾಗಿ ತಿಳಿಸಿದರು.
ಮುಳಬಾಗಿಲು ತಾಲೂಕಿನ ಕುರುಡುಮಲೆಯ ಸರ್ಕಾರಿ ಶಾಲೆ ಕೊಠಡಿಯೊಂದರಲ್ಲಿ ಗುತ್ತಿಗೆದಾರ ಗೋದಾಮು ಮಾಡಿಕೊಂಡಿದ್ದಾನೆ, ಅದೇ ರೀತಿ ಕೋಲಾರದ ಅರುಣೋದಯ ಎಂಬ ಖಾಸಗಿ ಶಾಲೆಯಲ್ಲಿ ಶಿಕ್ಷಕರೊಬ್ಬರ ವೇತನವನ್ನು ಆಡಳಿತ ಮಂಡಲಿ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಶಾಲೆಗೆ ಭೇಟಿ ನೀಡಿ ಸತ್ಯಾಂಶ ಪರಿಶೀಲಿಸಿ ಲೋಪವಾಗಿದ್ದಲ್ಲಿ ಶಾಲೆಯ ಮಾನ್ಯತೆ ರದ್ದು ಮಾಡುವಂತೆ ಡಿಡಿಪಿಐಗೆ ಸೂಚಿಸಿದರು.
ಶಾಲಾ ಕೊಠಡಿಯನ್ನು ತರಗತಿ ನಡೆಸಲು ಬಿಟ್ಟುಕೊಡದೆ ಗೋದಾಮು ಮಾಡಿಕೊಂಡಿರುವವರ ವಿರುದ್ಧ ಪೊಲೀಸರಿಗೆ ದೂರು ನೀಡಿ ಕೊಠಡಿ ಬಿಡಿಸಿಕೊಡಿ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಕತ್ರಿ, ಪಿಯು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ರಾಮೇಗೌಡ, ಜಿಪಂ ಸಿಇಒ ವಿನೋದ್ ಪ್ರಿಯ, ನಗರಸಭೆ ಸದಸ್ಯ ಮುಬಾರಕ್, ಮಾಜಿ ಶಾಸಕ ಅಮರೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

