ಬಲಿತ ದಲಿತರಿಂದ ಮೀಸಲಾತಿ ದುರ್ಬಳಕೆ
ಕನ್ನಡಪ್ರಭ ವಾರ್ತೆ, ಕೋಲಾರ, ಜ.25
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ಸಮುದಾಯದ ಸಮಗ್ರಾಭಿವೃದ್ಧಿಗಾಗಿ ರೂಪಿಸಿದ ಮೀಸಲಾತಿಯನ್ನು ಬಲಿತ ದಲಿತರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡ ಚಿ.ನಾ. ರಾಮು ಆರೋಪಿಸಿದರು.
ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಶನಿವಾರ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ದಲಿತರ ಶೋಷಣೆ ತಪ್ಪಿಸಲು ಮೀಸಲಾತಿ ಜಾರಿಗೆ ತಂದರು. ಆದರೆ, ಈ ಸೌಲಭ್ಯದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಬಲಿತ ಕೆಲ ದಲಿತರಿಂದಲೇ ಸಮುದಾಯದ ಇನ್ನಿತರ ಬಡವರ ಶೋಷಣೆ ಆಗುತ್ತಿರುವುದು ಅಂಬೇಡ್ಕರ್ ಆಶಯಗಳಿಗೆ ಮಾಡಿದ ಅಪಮಾನವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಮೀಸಲಾತಿಯ ಕೃಪೆಯಿಂದ ಜೀವನ ಮಟ್ಟ ಸುಧಾರಣೆ ಮಾಡಿಕೊಂಡ ದಲಿತ ನಾಯಕರು ಸಮುದಾಯದ ಇನ್ನಿತರ ಬಡವರ ಬಗ್ಗೆ ಕಾಳಜಿ ವಹಿಸಬೇಕು, 30 ವರ್ಷಗಳ ಕಾಲ ಮೀಸಲಾತಿಯ ಲಾಭದಿಂದ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಉನ್ನತ ಮಟ್ಟದ ಹುದ್ದೆಗಳನ್ನು, ಸರ್ಕಾರದ ಸವಲತ್ತುಗಳನ್ನು ಪಡೆದಿರುವ ವ್ಯಕ್ತಿಗಳು ತಮಗಾಗಿ ದುಡಿದಿರುವ ದಲಿತರ ಪ್ರಗತಿಗೆ ಗಮನ ನೀಡಬೇಕು. ಆದರೆ, ಕೋಲಾರ ಕ್ಷೇತ್ರದಿಂದ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿ ತಮ್ಮ ಪತ್ನಿಗೆ ಗ್ಯಾಸ್ ಏಜೆನ್ಸಿ ಮಾಡಿಕೊಟ್ಟ, ಎರಡು ಬಾರಿ ಸಚಿವರೂ ಆಗಿರುವ ಕೆ.ಎಚ್. ಮುನಿಯಪ್ಪ 7ನೇ ಬಾರಿ ಮೀಸಲಾತಿ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲ್ಲಬೇಕೆಂದು ಆಸೆ ಪಟ್ಟಿರುವುದು ಮೀಸಲಾತಿಯ ದುರುಪಯೋಗವಲ್ಲದೆ ಮತ್ತೇನು ಎಂದು ಕಿಡಿಕಾರಿದರು.
ಕೇಂದ್ರದ ಮತ್ತೊಬ್ಬ ಸಚಿವ ಮಲ್ಲಿಕಾರ್ಜುನ ಖರ್ಗೆಯವರು 8 ಬಾರಿ ಶಾಸಕರಾಗಿ ನಂತರ ಲೋಕಸಭೆಗೆ ಆಯ್ಕೆಯಾಗಿ ಸಚಿವರಾಗಿದ್ದಾರೆ, ತಮ್ಮ ಮಗನನ್ನು ಶಾಸಕರನ್ನಾಗಿ ಮಾಡಲು ತಮ್ಮ ಈ ಹಿಂದಿನ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಆದರೆ, ಚಿತ್ತಾಪುರ ಮೀಸಲಾತಿ ಕ್ಷೇತ್ರವಾಗಿದ್ದರಿಂದ ಅಲ್ಲಿಗೆ ಡೈ ಹೊಡೆದು ಅಂಬೇಡ್ಕರ್ ಅವರು ಯಾತಕ್ಕಾಗಿ ಮೀಸಲಾತಿ ಜಾರಿಗೆ ತಂದರೋ ಅದರ ಆಶಯಗಳಿಗೆ ತಿಲಾಂಜಲಿ ಹೇಳಿದ್ದಾರೆಂದು ಟೀಕಿಸಿದರು.
ಬಡ ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಗತಿ ಸಾಧಿಸಲು 30 ವರ್ಷ ಮೀಸಲಾತಿ ಸಾಕು, ನಂತರ ಬಲಿತವರು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂದು ಅಂಬೇಡ್ಕರ್ ಹೇಳಿದ್ದರು. ಆದರೆ, ಕೆ.ಎಚ್. ಮುನಿಯಪ್ಪನಂತಹ ಬಲಾಢ್ಯರು ಮೀಸಲಾತಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದು ಜಿಲ್ಲೆಯ ಬಡ ಹಾಗೂ ಮುಗ್ಧ ದಲಿತರಲ್ಲಿ ಅರಿವು ಮೂಡಿಸುವುದು ಎಸ್ಸಿ ಮೋರ್ಚಾದ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕಿ ವೈ. ರಾಮಕ್ಕ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಮಾಜಿ ಶಾಸಕರಾದ ವೈ. ಸಂಪಂಗಿ, ಎಂ. ನಾರಾಯಣಸ್ವಾಮಿ, ಬಿಜೆಪಿಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿಬಿಎಂಪಿ ಸದಸ್ಯ ಶಿವಕುಮಾರ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಮಂಗಸಂದ್ರ ನಾಗರಾಜ್, ಜಯಂತಿಲಾಲ್, ಗಾಂಧಿನಗರ ವೆಂಕಟೇಶ್, ಹಾರೋಹಳ್ಳಿ ನಾರಾಯಣಸ್ವಾಮಿ, ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಮೀಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

