ಸುಭಾಷ್ಚಂದ್ರ ಬೋಸ್ ಜನ್ಮದಿನಾಚರಣೆ
ಮಾಲೂರು: ಇಂದಿನ ಮೌಲ್ಯರಹಿತ ರಾಜಕೀಯದಿಂದ ಪ್ರಜಾಪ್ರಭುತ್ವಕ್ಕಿಂತ ಸರ್ವಾಧಿಕಾರದ ಆಡಳಿತವೇ ಲೇಸು ಎನಿಸುತ್ತಿದೆ ಎಂದು ಮೈಸೂರಿನ ಸಿಆರ್ಡಿಐಟಿ ಮ್ಯಾನೇಂಜಿಗ್ ಟ್ರಸ್ಟಿ ಡಾ.ಎಂ.ಪಿ. ವರ್ಷ ಅಭಿಪ್ರಾಯ ಪಟ್ಟರು. ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಸ್ಥಳೀಯ ಹಸಿರು ಕ್ರಾಂತಿ ಬಳಗ ಸುಭಾಷ್ಚಂದ್ರ ಬೋಸ್ ಅವರ 117 ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಗೋಪಾಲ್ಗೌಡ ಮಾತನಾಡಿ, ನಮ್ಮ ಸಂಸ್ಕೃತಿ-ದೇಶವನ್ನು ಉಳಿಸಲು ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿ ಮಾಡಿದ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟುಹಬ್ಬವನ್ನು ಹಸಿರು ಕ್ರಾಂತಿ ಮಾಡುವ ಮೂಲಕ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಬಿಜೆಪಿ ಹಿರಿಯ ಮುಖಂಡ ತಬಲ ನಾರಾಯಣಸ್ವಾಮಿ, ಸುಬ್ರಮಣ್ಯ ರೆಡ್ಡಿ, ರಾಜರಾಂ, ಮುನಿಸ್ವಾಮಿ, ವಕೀಲ ನಾರಾಯಣಪ್ಪ ಮಾತನಾಡಿದರು.
'ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಸಜ್ಜಾಗಿ'
ಕೋಲಾರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ನೇತಾಜಿ ಸುಭಾಷ್ ಚಂದ್ರಬೋಸ್ ಆದರ್ಶಗಳನ್ನು ಮೈಗೂಡಿಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಯುವಕರು ಸಜ್ಜಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಜಗದೀಶ್ ತಿಳಿಸಿದರು. ಜಿಲ್ಲಾ ಭಾರತ ಸೇವಾದಳ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರಬೋಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಭಾಷ್ಚಂದ್ರಬೋಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ರೋಟರಿ ಸೆಂಟ್ರಲ್ ಅಧ್ಯಕ್ಷ ಗೋಪಾಲಕೃಷ್ಣಗೌಡ ಮಾತನಾಡಿ, ಆಧುನಿಕ ಸಮಾಜ ಕಟ್ಟುವ, ಪ್ರತಿಯೊಬ್ಬರಿಗೂ ಸಮಾನಹಕ್ಕು, ಸಾಮಾಜಿಕ ನ್ಯಾಯ ಒದಗಿಸುವ ಧ್ಯೇಯ ಹೊಂದಿದ್ದು, ಬೋಸರ ಜೀವನ ಎಲ್ಲರಿಗೂ ಆದರ್ಶ ಎಂದರು.
ಅಪರೂಪದ ಕುಂಬಳ ಕಾಯಿ ಬೆಳೆ
ಟೇಕಲ್: ಸಮೀಪದ ಲಕ್ಷ್ಮೀಸಾಗರ ಗ್ರಾಮದಲ್ಲಿ ಪಿ.ಎಸ್. ಮಂಜುಳಾಬಾಬುಗೆ ಸೇರಿದ ಜಮೀನಿನಲ್ಲಿ ರೈತ ಕುಂಟನಹಳ್ಳಿ ಕೃಷ್ಣೇಗೌಡ ಬೆಳೆಸಿದ ಕುಂಬಳಕಾಯಿ ಅಪರೂಪದ್ದಾಗಿದ್ದು ಇದರ ಒಂದು ಕಾಯಿಯ ತೂಕ 30 ರಿಂದ 35 ಕೆ.ಜಿ. ಇದೆ. 5 ಎಕರೆಯಲ್ಲಿ ಕುಂಬಳಕಾಯಿ ನೆಟ್ಟಿದ್ದು ಕೃಷ್ಣೇಗೌಡ ಮಾದರಿ ರೈತರೆನಿಸಿಕೊಂಡಿದ್ದಾರೆ. ಕುಂಬಳಕಾಯಿ ಬೆಳೆ ನೋಡಲು ಸುತ್ತಮುತ್ತಲ ಜನತೆ ಬರುತ್ತಿದ್ದು ಮಾಲೂರು ತಾಲೂಕಿನ ತೋಟಗಾರಿಕೆ ಇಲಾಖೆಯವರಿಗೆ ಮಾತ್ರ ಈ ರೈತ ಮತ್ತು ಈತ ಬೆಳೆದಿರುವ ಕುಂಬಳಕಾಯಿ ಬಗ್ಗೆ ಮಾಹಿತಿ ಇಲ್ಲದಿರುವುದು ಶೋಚನೀಯ. ಇದರ ಜೊತೆಗೆ ಉತ್ತಮ ಫಸಲು ಕೈ ಸೇರಿದ್ದರೂ ಕುಂಬಳಕಾಯಿಗೆ ಸರಿಯಾದ ಬೆಲೆ ಮಾರುಕಟ್ಟೆಯಲ್ಲಿ ಇದೀಗ ಇಲ್ಲದಾಗಿದೆ.
ಉತ್ತಮ ಕುಡಿವ
ನೀರಿನ ವ್ಯವಸ್ಥೆ
ಚಿಂತಾಮಣಿ: ಸಹಕಾರ ಸಂಘಗಳ ಮೂಲಕ ಮನೆ ಮನೆಗೆ ಕುಡಿಯುವ ನೀರನ್ನು ತಲುಪಿಸುವ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ ಎಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸತ್ಯನಾರಾಯಣಮಹೇಶ್ ಹೇಳಿದರು. ತಾಲೂಕಿನ ಮುರುಗಮಲ್ಲ ಹೋಬಳಿ ವೇಂಪಲ್ಲಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಪೆದ್ದೂರು ವ್ಯವಸಾಯ ಸಹಕಾರ ಸಂಘ ಉದ್ಘಾಟನೆ ಮಾಡಿ ಮಾತನಾಡಿ, ಗ್ರಾಮೀಣ ಜನಸಾಮಾನ್ಯರ ಅನುಕೂಲಕ್ಕಾಗಿ ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಸುಲಭ ಸಾಲದ ಯೋಜನೆ ಸೇರಿದಂತೆ ವಿವಿಧ ಉಪಯೋಗಗಳನ್ನು ಪಡೆಯಲು ವ್ಯವಸಾಯ ಸಹಕಾರ ಸಂಘಗಳ ಅವಶ್ಯಕತೆ ಇರುವುದರಿಂದ ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

