ಗ್ರಾಪಂ ಬಡ್ತಿ ಪ್ರಕ್ರಿಯೆಯಲ್ಲಿ ಲೋಪವಾಗಿದ್ದರೆ ಕ್ರಮ
ಕೋಲಾರ: ಜಿಪಂ ಈ ಹಿಂದಿನ ಸಿಇಒ ಅವರು ಗ್ರಾಪಂ ಬಿಲ್ ಕಲೆಕ್ಟರ್ಗಳು ಮತ್ತು ಕಾರ್ಯದರ್ಶಿಗಳಿಗೆ ಬಡ್ತಿ ನೀಡುವ ವಿಚಾರದಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಡ್ತಿ ವಿಚಾರದಲ್ಲಿ ಲೋಪವಾಗಿರುವ ಬಗ್ಗೆ ನಮಗೆ ಯಾರೊಬ್ಬರು ಲಿಖಿತವಾಗಿ ದೂರು ನೀಡಿಲ್ಲ, ಈಗ ತಾನೇ ವಿಷಯ ತಿಳಿಯಲಾಗುತ್ತಿದ್ದು ನೂತನ ಸಿಇಒ ಅವರ ಜೊತೆ ಚರ್ಚಿಸಿ ಸಂಬಂಧಪಟ್ಟ ಕಡತ ಪರಿಶೀಲಿಸಿ ತಪ್ಪು ಯಾರೇ ಮಾಡಿದ್ದರೂ ಶಿಸ್ತಿನ ಕ್ರಮ ಜರುಗಿಸುವೆ ಎಂದರು.
ಶಾಸಕರ ಜೊತೆ ಭಿನ್ನಮತವಿಲ್ಲ: ಕೋಲಾರ ಕ್ಷೇತ್ರದ ಶಾಸಕ ವರ್ತೂರ್ ಆರ್.ಪ್ರಕಾಶ್ ಮತ್ತು ತಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವ ಅವರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡದಿದ್ದರೆ ಮತದಾರರಿಗೆ ಮೋಸ ಮಾಡಿದಂತಾಗುತ್ತದೆ ಎಂದು ಶಾಸಕರು ಇತ್ತೀಚಿನ ದಿನಗಳಲ್ಲಿ ಯಾವುದೇ ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಭಾಗವಹಿಸದಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜನಪ್ರತಿನಿಧಿಯ ಕರ್ತವ್ಯವನ್ನು ಶಾಸಕರು ಮರೆತಿರುವುದು ಅವರ ಸಂಸ್ಕೃತಿ ಏನೆಂಬುದನ್ನು ಬಿಂಬಿಸುತ್ತದೆ, ಈ ಬಗ್ಗೆ ಅವರನ್ನು ಆಯ್ಕೆ ಮಾಡಿರುವ ಮತದಾರರು ಪ್ರಶ್ನಿಸಿದರೆ ಉತ್ತಮ. ಈ ಪರಿಸ್ಥಿತಿ ಎದುರಾಗುವ ಮುನ್ನವೇ ಶಾಸಕರು ಎಚ್ಚರಗೊಳ್ಳಬೇಕೆಂಬುದು ಅವರಿಗೆ ನನ್ನ ಸಲಹೆ ಎಂದರು.
ಕೋಲಾರದ ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಕೊಂಚ ಬಾಕಿ ಉಳಿದಿದೆ. ಅದಷ್ಟು ಬೇಗನೆ ಉದ್ಘಾಟನೆ ನೆರವೇರಲಿದೆ, ಅದೇ ರೀತಿ ಮಿನಿ ವಿಧಾನಸೌಧದ ಕಾಮಗಾರಿ ತ್ವರಿತವಾಗಿ ಮುಗಿಸಲಾಗುವುದು, ಜಿಲ್ಲಾ ಆಡಳಿತ ಭವನಕ್ಕೆ ಸರ್ಕಾರ 25 ಕೋಟಿ ರು.ಮಂಜೂರು ಮಾಡಿದೆ. ಆದರೆ, 40 ಕೋಟಿ ರು.ಗಳ ಸಮಗ್ರ ಯೋಜನೆ ರೂಪಿಸಿದ್ದು ಸರ್ಕಾರಕ್ಕೆ ಕಳುಹಿಸಲಾಗಿದೆ. ಸಚಿವ ಸಂಪುಟದಲ್ಲಿ ಇದಕ್ಕೆ ಅನುಮತಿ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಉತ್ತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಪಂ ಸಿಇಒ ವಿನೋತ್ ಪ್ರಿಯ, ಜಿಲ್ಲಾ ಎಸ್ಪಿ ಡಾ. ರಾಮ್ನಿವಾಸ್ ಸಪೆಟ್, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

