ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ
ಕ.ಪ್ರ.ವಾರ್ತೆ ಕೋಲಾರ ಜ.26
ರಾಜಧಾನಿಗೆ ಹತ್ತಿರವಿರುವ ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಜನತೆಯ ಆಶಯಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.
ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಸಚಿವರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದಿಂದ ಕೋಟ್ಯಂತರ ರುಪಾಯಿ ಅನುದಾನ ಹರಿದು ಬರುತ್ತಿರುವುದರಿಂದ ಮುಂದಿನ ವರ್ಷಗಳಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ ಕೋಲಾರ ಜಿಲ್ಲೆ ವಿಶೇಷವಾಗಿ ಕೋಲಾರ ನಗರ ಪ್ರಗತಿ ಪಥದತ್ತ ಸಾಗುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದರು.
ಜಿಲ್ಲೆಯ ಜನರು ಕಷ್ಟ ಜೀವಿಗಳು, ಮೇಧಾವಿಗಳಿದ್ದಾರೆ. ನಿರಂತರವಾಗಿ ಹರಿಯುವ ನದಿ ನಾಲೆಗಳು ಇಲ್ಲದಿದ್ದರೂ ರೈತರು ಕೊಳವೆಬಾವಿಗಲ್ಲಿ ಸಿಗುವ ಅಲ್ಪ ಪ್ರಮಾಣದ ಅಂತರ್ಜವನ್ನು ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆಗೆ ಉಪಯೋಗಿಸಿ ಜೀವನ ಮಾಡುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರ್ಕಾರ ಜನರ ಕಷ್ಟ ಅರಿತು ಜಿಲ್ಲೆಗೆ ಶಾಶ್ವತ ನೀರನ್ನು ತರಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಯರಗೋಳ್ ಯೋಜನೆ ಅನುಷ್ಠಾನದಿಂದ ಕೋಲಾರ ನಗರ ಸೇರಿದಂತೆ, 162 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಜೊತೆಗೆ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಟೆಂಡರ್ ಕರೆದು ಫೆಬ್ರವರಿ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದೆಂದು ತಿಳಿಸಿದರು.
ಕುಡಿಯುವ ನೀರು: ಜಿಲ್ಲೆಯ ಜನರಿಗೆ ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರ ಬದ್ಧವಾಗಿದೆ, ಈಗಾಗಲೇ ಕೆಲವು ಕಡೆ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹಾಗೂ ಕೆನರಾ ಬ್ಯಾಂಕಿನ ಸಹಾಯದಿಂದ ಶುದ್ಧ ನೀರು ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರು ಪೂರೈಕೆಗಾಗಿ 2013-14ನೇ ಸಾಲಿಗೆ ನೂರು ಕೋಟಿ ರುಪಾಯಿಗಳ ವೆಚ್ಚದಿಂದ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗಳ ಕ್ರಿಯಾ ಯೋಜನೆ ಅನುಮೋದನೆಗಾಗಿ ಕೋರಿದೆ.
1498 ಕಾಮಗಾರಿ: ಈವರೆವಿಗೂ ಐದು ಕೋಟಿ ಮೂವತ್ತು ಲಕ್ಷ ರು.ಗಳನ್ನು ವೆಚ್ಚ ಮಾಡಲಾಗಿದೆ. ಇದರಿಂದ ಒಟ್ಟು 3258 ಕಾಮಗಾರಿಗಳು ಪ್ರಾರಂಭವಾಗಿದ್ದು, ಇದರಲ್ಲಿ 1498 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಚಿವರು ಮಾಹಿತಿ ನೀಡಿದರು.
ಮುಂಬರುವ ಬೇಸಿಗೆ ಕಾಲದ ಮೂರು ತಿಂಗಳಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆ ನಿವಾರಣೆಗಾಗಿ ತುರ್ತು ಕ್ರಿಯಾ ಯೋಜನೆಯನ್ನು ತಯಾರಿಸಿ 352 ಕಾಮಗಾರಿಗಳಿಗಾಗಿ 25 ಕೋಟಿ 43 ಲಕ್ಷ ಕ್ರಿಯಾ ಯೋಜನೆಯನ್ನು ಅನುಮೋದನೆಗಾಗಿ ಸಲ್ಲಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾ ಆಡಳಿತ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ ಎಂದರು.
ಮೆಚ್ಚುಗೆ ಪಡೆದ ಕಂದಾಯ ಅದಾಲತ್; ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಕಂದಾಯ ಅದಾಲತ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ರೀತಿ ಎಲ್ಲಾ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಕೇಂದಗಳಲ್ಲಿ ಪಿಂಚಣಿ ಅದಾಲತ್ಗಳನ್ನು ಏರ್ಪಡಿಸಲಾಗುತ್ತಿದೆ. ಈಗಾಗಲೇ ಪಿಂಚಣಿ ಅದಾಲತ್ಗಳಲ್ಲಿ 1817 ಜನರಿಗೆ ವೃದ್ಧಾಪ್ಯ ವೇತನ, 1697 ಜನರಿಗೆ ವಿಧವಾ ವೇತನ, 838 ಜನರಿಗೆ ಅಂಗವಿಕಲ ವೇತನ, 6475 ಜನರಿಗೆ ಸಂಧ್ಯಾ ಸುರಕ್ಷತಾ ವೇತನ ನೀಡಲಾಗಿದೆ. ಅದೇ ರೀತಿಯಲ್ಲಿ ನೂತನ ಕಾರ್ಯಕ್ರಮಗಳಾದ ಮನಸ್ವಿನಿ ಮತ್ತು ಮೈತ್ರಿ ಮಾಶಾಸನ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ ಪಡಿತರ ಚೀಟಿದಾರರಿಗೆ ಸಮರ್ಪಕವಾಗಿ ಆಹಾರಧಾನ್ಯಗಳನ್ನು ದುರುಪಯೋಗವಾಗದಂತೆ ವಿತರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶ್ರೀನಿವಾಸಪುರ ತಾಲೂಕಿನಲ್ಲಿ ರೈಲು ಕೋಚ್ ಫ್ಯಾಕ್ಟರಿ ಸ್ಥಾಪಿಸಲು ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಪ್ರಾರಂಭವಾಗಿದೆ. ಇದರಿಂದ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯಲಿದೆ. ಕೆಜಿಎಫ್ ಚಿನ್ನದ ಗಣಿ ಮತ್ತೆ ಆರಂಭಿಸಲು ಬಿಜಿಎಂಎಲ್ ಹಾಗೂ ಕೇಂದ್ರ ಸರ್ಕಾರದೊಂದಿಗೆ ಒಡಂಬಡಿಕೆಗೆ ಆಗಿದೆ. ಚಿನ್ನದ ಗಣಿಗಳು ಪ್ರಾರಂಭದಿಂದ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರಕಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯ ವೇಮಗಲ್ ಹಾಗೂ ನರಸಾಪುರ ಸಮೀಪ ಕೈಗಾರಿಕಾ ವಲಯಗಳನ್ನು ಸ್ಥಾಪಿಸುತ್ತಿದ್ದು, ಈಗಾಗಲೇ ಪ್ರತಿಷ್ಠಿತ ಕಂಪನಿಗಳು ಪ್ರಾರಂಭವಾಗುತ್ತಿವೆ. ಇದರ ಜೊತೆಗೆ ಹಲವಾರು ಕೈಗಾರಿಕೆಗಳನ್ನು ಪ್ರಾರಂಭಿಸಲು ಮುಂದೆ ಬಂದಿದ್ದು ಸಾವಿರಾರು ಕೋಟಿ ಬಂಡವಾಳ ಹೂಡುತ್ತಿರುವುದರಿಂದ ಜಿಲ್ಲೆಯ ಜನರಿಗೆ ಉದ್ಯೋಗಾವಕಾಶ ಲಭಿಸಲಿದೆ ಎಂದು ಜಿಲ್ಲೆಯ ಪ್ರಗತಿಯ ಬಗ್ಗೆ ವಿವರಿಸಿದರು. ವಸತಿ, ಶೌಚಾಲಯ, ರಸ್ತೆ, ಕೆರೆಗಳ ಕಾಯಕಲ್ಪ, ಕಲ್ಯಾಣಿಗಳ ಪುನಶ್ಚೇತನದ ಕೆಲಸ ವೇಗವಾಗಿ ಸಾಗಿದ್ದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜನತೆ ಹೆಚ್ಚಿನ ಸಹಕಾರ ನೀಡುವ ಮೂಲಕ ರಾಜ್ಯಕ್ಕೆ ಮಾದರಿ ಆಗಬೇಕೆಂದು ಕರೆ ನೀಡಿದರು.
ಮಾದರಿ ಸಂವಿಧಾನ: ಇಡೀ ಜಗತ್ತಿನಲ್ಲಿಯೇ ಮಾದರಿ ಸಂವಿಧಾನ ನಮ್ಮದು. ಅಂತಹ ಸಂವಿಧಾನ ಹೊಂದಿರುವ ಸಂತೋಷದ ಜೊತೆಯಲ್ಲಿ ಜೀವಮಾನವಿಡೀ ಅದನ್ನು ಗೌರವಿಸುವ, ಸಂರಕ್ಷಿಸುವ ಪ್ರತಿಜ್ಞೆ ಮಾಡುವುದನ್ನು ಪ್ರತಿವರ್ಷ ನೆನಪಿಸುವ ಗಣರಾಜ್ಯ ದಿನಾಚರಣೆಯ ದಿನದಂದು ಭಾರತ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು 2020 ರ ವೇಳೆಗೆ ಭಾರತ ವಿಶ್ವದಲ್ಲಿ ಪ್ರಥಮ ಸ್ಥಾನಕ್ಕೇರಲು ಜನತೆಯ ಶ್ರಮ ಮತ್ತು ಸರ್ಕಾರದ ಕಾರ್ಯಕ್ರಮಗಳಿಗೆ ಹೆಚ್ಚಿನ ಉತ್ತೇಜನ ಅಗತ್ಯವೆಂದರು.
ಸಚಿವ ಖಾದರ್ ಅವರು ಸಂದೇಶ ನೀಡುವ ಮುನ್ನ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು, ಪೊಲೀಸ್, ಗೃಹರಕ್ಷಕ ದಳ, ಶಾಲಾ ಮಕ್ಕಳು, ಸ್ಕೌಟ್ಸ್ ಅಂಡ್ ಗೈಡ್ಸ್, ಎನ್.ಸಿ.ಸಿ ಮುಂತಾದ ತಂಡಗಳಿಂದ ವಂದನೆ ಸ್ವೀಕರಿಸಿ, ಕವಾಯತ್ತು ಪ್ರದರ್ಶನ ವೀಕ್ಷಿಸಿದರು.
ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ, ನಗರಸಭೆ ಸದಸ್ಯ ಪ್ರಸಾದ್ ಬಾಬು, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲಾ ಎಸ್ಪಿ ಡಾ. ರಾಮ್ನಿವಾಸ್ ಸಪೆಟ್, ಜಿಪಂ ಸಿಇಒ ವಿನೋತ್ ಪ್ರಿಯ, ಎಎಸ್ಪಿ ಜಮೀಲ್, ಉಪವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ನಾಗರಾಜ್, ಗೃಹ ರಕ್ಷಕ ದಳದ ಕಮಾಂಟೆಂಟ್ ಮರಿಸ್ವಾಮಿ, ಜಿಪಂ ಉಪಕಾರ್ಯದರ್ಶಿ ಬದನೂರು, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್, ರೇಲ್ವೆ ಸಲಹಾ ಸಮಿತಿ ಸದಸ್ಯ ಜಯದೇವ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

