ಕೋಲಾರ

ಬೆಂಗಳೂರಿನಿಂದ ಕೋಲಾರಕ್ಕೆ ನೀರು!

Published On :

ಆತ್ಮಭೂಷಣ್
ಮಂಗಳೂರು: ಪಶ್ಚಿಮ ಘಟ್ಟದಿಂದ ಬಯಲು ಸೀಮೆಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ಜ.31ರಂದು ಶಿಲಾನ್ಯಾಸ ಮಾಡುವುದಾಗಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಪ್ರಕಟಿಸಿದ್ದಾರೆ. ಇದೇ ವೇಳೆ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಉಭಯ ಪ್ರದೇಶದ ಜನಪ್ರತಿನಿಧಿಗಳು, ಸಚಿವರು ಹೇಳಿಕೆಗಳ ಸಮರವನ್ನೇ ನಡೆಸುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಗಳ ನಡುವೆ ಜಲವಿವಾದಕ್ಕೆ ಆಸ್ಪದ ನೀಡದಂತೆ ಬೆಂಗಳೂರಿನಿಂದ ಕೋಲಾರಕ್ಕೆ ನೀರು ಹರಿಸುವ ಯೋಜನೆಯೊಂದು ಸದ್ದಿಲ್ಲದೆ ಜಾರಿಗೊಳ್ಳುತ್ತಿದೆ!
ಅದುವೇ ಎಲೆಮಲ್ಲಪ್ಪ ಜಲಾಶಯದಿಂದ-ಪಾಲಾರ್ ಮೂಲಕ್ಕೆ ನೀರು ಪೂರೈಸುವ ಯೋಜನೆ. ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮುಂದಿನ ವರ್ಷವೇ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ತುಂಬಿ ಕುಡಿವ ನೀರಿಗೆ ತತ್ವಾರ ತಲೆದೋರದು.
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಈ ಯೋಜನೆಗೆ ಉತ್ಸಾಹ ತೋರಿದ್ದಾರೆ. ಅವರ ತವರು ಜಿಲ್ಲೆ ದ.ಕ. ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಇತ್ತ ಕೋಲಾರದಲ್ಲೂ ನೀರಿಗಾಗಿ ಕೂಗು ಕೇಳಿಬರುತ್ತಿದೆ. ಇವೆರಡನ್ನೂ ನಿಭಾಯಿಸಬೇಕಾಗಿರುವ ಖಾದರ್ ಕಂಡುಕೊಂಡ ಪರಿಹಾರ ಬೆಂಗಳೂರಿನಿಂದ ಕೋಲಾರಕ್ಕೆ ನೀರು ಹರಿಸುವುದು.
ಏನಿದು ಯೋಜನೆ?: ಬೆಂಗಳೂರಿನ ಒಳಚರಂಡಿ ನಿರ್ವಹಣಾ ಮಂಡಳಿ ಪ್ರತಿನಿತ್ಯ 30 ಎಂಎಲ್ಡಿ ಕೊಳಚೆ ನೀರನ್ನು ಶುದ್ಧೀಕರಿಸಿ ಕೆ.ಆರ್.ಪುರ ಜಲಾಯಶಯಕ್ಕೆ ಬಿಡುತ್ತಿದೆ. ಅಲ್ಲಿರುವ ಎಲೆಮಲ್ಲಪ್ಪ ಜಲಾಶಯದಲ್ಲಿ ವ್ಯರ್ಥ ಪೋಲಾಗುವ ನೀರನ್ನು ಕೋಲಾರದ ಪಾಲಾರ್ ನದಿಗೆ ಸಾಗಿಸುವುದೇ ಈ ಯೋಜನೆ.
ಚಿನ್ನದ ಗಣಿ ನಾಡು ಕೋಲಾರದಲ್ಲಿ ಕೆರೆ- ಬಾವಿಗಳಲ್ಲಿ ನೀರಿಲ್ಲ. ಕೊಳವೆಬಾವಿಗಳಲ್ಲಿಯೂ ಅಂತರ್ಜಲ ಕುಸಿತಗೊಂಡಿದೆ. ಕೃಷಿ ಹಾಗೂ ಕುಡಿವ ನೀರಿಗೆ ಹಾಹಾಕಾರ ತಪ್ಪುತ್ತಿಲ್ಲ. ಇದನ್ನು ನಿವಾರಿಸಲು ಈ ಯೋಜನೆ ಪ್ರಶಸ್ತ ಎನ್ನುವುದು ಕೋಲಾರ ಜಿಲ್ಲಾಡಳಿತದ ಲೆಕ್ಕಾಚಾರ.
ಈ ಯೋಜನೆಯಡಿಯಲ್ಲಿ ಬೆಂಗಳೂರಿನಿಂದ ಹೊಸಕೋಟೆ, ದಾಸರಹಳ್ಳಿ ಮೂಲಕ ಬಂಗಾರಪೇಟೆಗೆ ಸುಮಾರು 32 ಕಿ.ಮೀ. ದೂರಕ್ಕೆ ಪೈಪ್ಲೈನ್ ಅಳವಡಿಸಲಾಗುವುದು. ಮುಖ್ಯರಸ್ತೆ ಬಳಿಯೇ ಪೈಪ್ಲೈನ್ ಅಳವಡಿಸಿದರೆ ಭೂಸ್ವಾಧೀನದಂಥ ತೊಂದರೆಯೂ ಬಾಧಿಸದು. ಅಲ್ಲದೆ ತಾಂತ್ರಿಕತೆಯ ತೊಡಕೂ ಇರುವುದಿಲ್ಲ. ಸುಮಾರು 230 ಕೋಟಿ ವೆಚ್ಚದ ಈ ಯೋಜನೆಯ ಪೈಪ್ಲೈನ್ ಹಾದುಹೋಗುವ ರೂಪುರೇಷೆ ಸಿದ್ಧವಾಗಿದೆ.


ಕುಡಿಯುವ ನೀರಿಗೂ ಸೈ
ಪಾಲಾರ್ ನದಿಯನ್ನು ಸಂಪರ್ಕಿಸುವ ಎಲೆಮಲ್ಲಪ್ಪ ಜಲಾಶಯದ ನೀರು ಅಂತರ್ಜಲ ವೃದ್ಧಿಸಲು ಸಹಕಾರಿ. ಕೋಲಾರದ ಸುತ್ತಲಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೂ ಬಳಸಬಹುದು. ಪಾಲಾರ್ನಲ್ಲಿ ಈಗಾಗಲೇ ನೀರು ಶುದ್ಧೀಕರಿಸಿ ಕೆಜಿಎಫ್ಗೆ ಪೂರೈಸಲಾಗುತ್ತಿದೆ. ಇದನ್ನು ಇನ್ನಷ್ಟು ಶುದ್ಧೀಕರಿಸಿ ಕುಡಿಯಲು ಬಳಸಿಕೊಳ್ಳಬಹುದು ಎನ್ನುವುದು ಸಚಿವ ಖಾದರ್ ಆಲೋಚನೆ.
ಕೋಲಾರದಲ್ಲಿ ಕೃಷಿ ಹಾಗೂ ಕುಡಿಯುವ ಉದ್ದೇಶಕ್ಕೆ ದಿನಂಪ್ರತಿ 2 ಟಿಎಂಸಿ ನೀರು ಬೇಕಾಗುತ್ತದೆ. ಎಲೆಮಲ್ಲಪ್ಪ ಜಲಾಶಯದಲ್ಲಿ ಅಗತ್ಯ ಪ್ರಮಾಣದ ನೀರಿರುವುದರಿಂದ ಕೋಲಾರದ ನೀರಿನ ಸಂಕಷ್ಟ ನಿವಾರಿಸಬಹುದು ಎನ್ನುತ್ತಾರೆ ಖಾದರ್.



ಕೋಲಾರಕ್ಕೆ ಬೆಂಗಳೂರಿನಿಂದ ನೀರು ಪೂರೈಸುವ ಈ ಯೋಜನೆಗೆ ಶೀಘ್ರ ಮಂಜೂರಾತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲಾಡಳಿತ ಯೋಜನೆಯ ರೂಪುರೇಷೆ ಸಿದ್ಧಪಡಿಸಿದ್ದು, ಶಾಸಕರ ಜತೆ ಜಿಲ್ಲಾ ಮಟ್ಟದಲ್ಲಿ ಸಭೆ ಕರೆದು ಬಳಿಕ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಟಿ  ಯು.ಟಿ.ಖಾದರ್, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.