ಕೋಲಾರ

'ಅಸಡ್ಡೆ ತೋರಿದರೆ ಸುಮ್ಮನಿರಲ್ಲ'

Published On :

ಕೋಲಾರ: ನೀರಿನ ಬವಣೆ ಹೆಚ್ಚಾಗುತ್ತಿದೆ. ಸಬೂಬು ಹೇಳಿಕೊಂಡು ಕಾಲ ಕಳೆದರೆ ಸುಮ್ಮನೆ ಇರಲಾರೆ. ನೀರಿನ ವಿಚಾರದಲ್ಲಿ ಅಸಡ್ಡೆ ಬಿಟ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶಕುಮಾರ್ ತಾಕೀತು ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಶ್ರೀನಿವಾಸಪುರ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರಿನ ವಿಚಾರದಲ್ಲಿ ಅಧಿಕಾರಿಗಳು ಯಾವುದೇ ರೀತಿಯ ಸಬೂಬುಗಳನ್ನು ಹೇಳದೆ ಸಮಸ್ಯೆ ಕಂಡು ಬಂದ ತಕ್ಷಣ ಬಗೆಹರಿಸುವ ಕೆಲಸ ಮಾಡಬೇಕಾಗಿದೆ ಎಂದು ಸೂಚನೆ ನೀಡಿದರು.
ಶ್ರೀನಿವಾಸಪುರ ತಾಲೂಕಿಗೆ ಕುಡಿಯುವ ನೀರಿಗಾಗಿ ವಿಶೇಷವಾಗಿ 1.10 ಕೋಟಿ ಬಿಡುಗಡೆ ಮಾಡಿಸಿದ್ದೇನೆ.ಈ ಹಣವನ್ನು ಸಮರ್ಪಕವಾಗಿ ಬಳಕೆ ಮಾಡದಿದ್ದರೆ ಏನು ಪ್ರಯೋಜನ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡದೆ ಕೂಡಲೇ ಪಂಪ್, ಮೋಟಾರ್, ಪೈಪ್ಲೈನ್, ವಿದ್ಯುತ್ ಸಂಪರ್ಕ ಕಾಮಗಾರಿಗಳನ್ನು ಮುಗಿಸಿ ಜನತೆಗೆ ಅನುಕೂಲ ಮಾಡಿಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ತಿಂಗಳಿಗೆ ನಾಲ್ಕು ಸಭೆಗಳನ್ನು ನಡೆಸಿ ನೀರಿನ ಬಗ್ಗೆ ಚರ್ಚಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಸಭೆಗಳಿಗೆ ತಪ್ಪು ಮಾಹಿತಿ ನೀಡುವ ಮೂಲಕ ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದೀರಾ ಎಂದು ಜೂನಿಯರ್ ಎಂಜನಿಯರ್ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಪಂಪ್-ಮೋಟಾರ್, ಪೈಪ್ಲೈನ್ ಅಳವಡಿಕೆ ಮಾಡಲು ಟೆಂಡರ್ ಪಡೆದಿರುವ ಗುತ್ತಿಗೆದಾರರು ಸರಿಯಾಗಿ ತಮ್ಮ ಕೆಲಸವನ್ನು ಮಾಡುತ್ತಿಲ್ಲ. ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸೂಚಿಸಿದರು.
ನಾನು ಯಾವುದೇ ಗುತ್ತಿಗೆದಾರರ ವಿರೋಧಿ ಅಲ್ಲ. ಕಾನೂನಿನಡಿಯಲ್ಲಿ ಟೆಂಡರ್ ಹಾಕಿ ಗುತ್ತಿಗೆ ಪಡೆದಿರುವ ಇವರು ಸಾರ್ವಜನಿಕರ ಕೆಲಸವನ್ನು ಮಾಡದೆ ಹೋದರೆ ಜನ ನಮ್ಮ ಮೇಲೆ ಅನುಮಾನ ಪಡುತ್ತಾರೆ. ತಪ್ಪು ತಿದ್ದಿಕೊಂಡು ಕೆಲಸ ಮಾಡದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಜೆಇ ಶಿವಕುಮಾರ್ ಅವರಿಗೆ ತಿಳಿಸಿದರು.
ವಿದ್ಯುತ್ ಸರಬರಾಜು ನೀಡದೆ ಇರುವ ಹೊಸ ಮತ್ತು ಹಳೇ ಕೊಳವೆ ಬಾವಿಗಳಿಗೆ ಒಂದು ವಾರದಲ್ಲಿ ವಿದ್ಯುತ್ ಸಂಪರ್ಕ, ಟಿಸಿಗಳನ್ನು ಒದಗಿಸಬೇಕು ಎಂದು ಇದೇ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿ ಶಿವರಾಂಗೆ ಸೂಚನೆ ನೀಡಿದ ಶಾಸಕ ರಮೇಶಕುಮಾರ್, ಮತ್ತೊಂದು ಸಭೆಯ ಸಂದರ್ಭದಲ್ಲಿ ವೈಫಲ್ಯಗಳು ಕಂಡು ಬಂದಲ್ಲಿ ಪರಿಣಾಮ ನೆಟ್ಟಗೆ ಇರಲ್ಲವೆಂದು ಎಚ್ಚರಿಕೆ ನೀಡಿದರು.
ಜಿಪಂ ಕಾರ್ಯಪಾಲಕ ಅಭಿಯಂತರ ದೇವರಾಜ್, ಎಇ ಮಂಜುನಾಥ್, ಕೋಲಾರ ತಾಪಂ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್, ಶ್ರೀನಿವಾಸಪುರ ತಾಪಂ ಇಒ ಶಂಕರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.