ದಯಾಮರಣಕ್ಕೆ ಅನುಮತಿ ಕೋರಿದ ದಲಿತ ಕುಟುಂಬ
ಕ.ಪ್ರ.ವಾರ್ತೆ ಕೋಲಾರ ಜ. 27
ತಾಲೂಕಿನ ಶ್ಯಾನುಭೋಗನಹಳ್ಳಿಯ ದಲಿತ ಶಂಕರಪ್ಪ ಮತ್ತವನ ಕುಟುಂಬ ಸದಸ್ಯರು ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಅಟ್ರಾಸಿಟಿ ಸಭೆಯಲ್ಲಿ ಊರಿನ ಜನ ಕಿರುಕುಳ ನೀಡುತ್ತಿರುವುದರಿಂದ ದಯಾ ಮರಣಕ್ಕೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರಲ್ಲಿ ಮನವಿ ಮಾಡಿಕೊಂಡ ವಿಲಕ್ಷಣ ಪ್ರಸಂಗ ನಡೆಯಿತು.
ಗ್ರಾಮದ ಮುಜರಾಯಿ ದೇವಾಲಯಕ್ಕೆ ಸೇರಿದ ಜಾಗದಲ್ಲಿ ಅರ್ಧ ಅಡಿಯಷ್ಟು ಜಾಗವನ್ನು ಶಂಕರಪ್ಪ ಒತ್ತುವರಿ ಮಾಡಿಕೊಂಡು ಮನೆಗೆ ಕಾಂಪೌಂಡ್ ಹಾಕಿಕೊಂಡಿದ್ದಾರೆಂಬ ಕಾರಣಕ್ಕೆ ಗ್ರಾಮಸ್ಥರು ಶಂಕರಪ್ಪ ಹಾಗೂ ಕುಟುಂಬ ವರ್ಗದವರ ಮೇಲೆ ತಹಸೀಲ್ದಾರ್ ಹಾಗೂ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ದಲಿತ ಶಂಕರಪ್ಪ ಸಹ ತಮಗೆ ಗ್ರಾಮದ ಸವರ್ಣೀಯರು ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆಂದು ಅಟ್ರಾಸಿಟಿ ಕೇಸ್ ದಾಖಲು ಮಾಡಿದ್ದರು.
ಇದರಿಂದಾಗಿ ಗ್ರಾಮಸ್ಥರು ಮತ್ತು ಶಂಕರಪ್ಪ ನಡುವೆ ವೈಷಮ್ಯ ಉಂಟಾಗಿತ್ತು. ಶಂಕರಪ್ಪ ಶ್ಯಾನುಭೋಗನಹಳ್ಳಿಯ ಹೊರ ಭಾಗದಲ್ಲಿ ವಾಸ ಮಾಡುತ್ತಿದ್ದಾರಲ್ಲದೆ, ತಮಗೆ ಜೀವ ಭಯ ಇದೆ, ಮನೆಯಲ್ಲಿನ ವಸ್ತುಗಳನ್ನು ಊರಿನವರು ಕಿತ್ತುಕೊಂಡಿದ್ದಾರೆ. ನೆಮ್ಮದಿಯಿಂದ ಜೀವನ ಮಾಡುವುದಕ್ಕೆ ಬಿಡುತ್ತಿಲ್ಲವಾದ್ದರಿಂದ ದಯಾ ಮರಣಕ್ಕೆ ಅವಕಾಶ ನೀಡುವಂತೆ ಅಟ್ರಾಸಿಟಿಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಂದೆ ಕುಟುಂಬ ಸಮೇತ ಧರಣಿ ನಡೆಸಿದರು.
ಸಮಸ್ಯೆಯನ್ನು ರಾಜಿ ಮೂಲಕ ಇತ್ಯರ್ಥ ಮಾಡಬಹುದಿತ್ತು. ಆದರೆ, ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ, ಇದರಿಂದ ತಮ್ಮ ಕುಟುಂಬಕ್ಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಯಾಗಿರುವುದರಿಂದ ಸಾಯಲು ಅವಕಾಶ ನೀಡಿ ಎಂದು ಕೈಮುಗಿದು ಕೇಳಿಕೊಂಡರು.
ಶಂಕರಪ್ಪ ಮತ್ತವರ ಮನೆಯವರ ಮನವಿ ಆಲಿಸಿದ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು, ಕೂಡಲೇ ಶಂಕರಪ್ಪಅವರಿಂದ ವಶಪಡಿಸಿಕೊಂಡಿರುವ ವಸ್ತುಗಳನ್ನು ಹಿಂದಕ್ಕೆ ನೀಡುವಂತೆ ಮತ್ತು ಸೂಕ್ತ ರಕ್ಷಣೆ ನೀಡುವಂತೆ ತಹಸೀಲ್ದಾರ್ ಅವರಿಗೆ ತಿಳಿಸಿದ ನಂತರ ಶಂಕರಪ್ಪ ಮತ್ತವರ ಮನೆಯವರು ಪ್ರತಿಭಟನೆ ನಿಲ್ಲಿಸಿದರು.
ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚನೆ: ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಲ್ಲಿ ಸರ್ಕಾರದ ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ತುಂಡು ಗುತ್ತಿಗೆ ಪಡೆಯಲು ಅವಕಾಶ ನೀಡುತ್ತಿಲ್ಲ, ಸಾಮಾನ್ಯ ವರ್ಗಕ್ಕೆ ಹೆಚ್ಚಿನ ಗುತ್ತಿಗೆ ನೀಡಲಾಗುತ್ತಿದೆ ಎಂದು ದಲಿತ ಮುಖಂಡರು ದೂರಿದರು.
ನಿಯಮಗಳ ಪ್ರಕಾರ ತುಂಡು ಗುತ್ತಿಗೆ ಕಾಮಗಾರಿಗಳನ್ನು ಸಾಮಾನ್ಯ ವರ್ಗಕ್ಕೆ ಮಾತ್ರವಲ್ಲದೆ, ಶೇಕಡ 22.75 ಮೀಸಲಾತಿ ಅಡಿಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಜಿ.ಪಂ. ಎಂಜಿನಿಯರಿಂಗ್ ವಿಭಾಗದಲ್ಲಿ ತುಂಡು ಗುತ್ತಿಗೆ ನೀಡದೆ ಅಧಿಕಾರಿಗಳು ದಲಿತ ಹಿತ ಕಡೆಗಣಿಸುತ್ತಿದ್ದಾರೆ, ಗುತ್ತಿಗೆ ನೀಡುವಿಕೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ದಲಿತ ಮುಖಂಡ ಹನುಮಂತು ಆರೋಪಿಸಿದರು.
ಜಿಲ್ಲೆಯಲ್ಲಿ ಕಳೆದ 3 ವರ್ಷದಿಂದ ಸುಮಾರು 94 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿವೆ. ಸರ್ಕಾರ ನಿಗದಿಪಡಿಸುವ ಹಣಕ್ಕೆ ಗುತ್ತಿಗೆ ಪಡೆಯುವಂತಹವರು ಲೇಸ್ ಹಣವನ್ನು ಕಟ್ಟದೆ ಅಧಿಕಾರಿಗಳು ಮತ್ತು ಬ್ಯಾಂಕಿನವರ ಜತೆ ಹೊಂದಾಣಿಕೆ ಮಾಡಿಕೊಂಡು ಸಾಕಷ್ಟು ಅವ್ಯವಹಾರ ನಡೆಸುತ್ತಿದ್ದಾರೆಂದು ದೂರಿದರು.
ಜಿಲ್ಲಾಧಿಕಾರಿಗಳು ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪರನ್ನು ಪ್ರಶ್ನಿಸಿದಾಗ ಬ್ಯಾಂಕಿನ ಹೆಸರಿನಲ್ಲಿ ಕೆಲವು ಗುತ್ತಿಗೆದಾರರು ನಕಲಿ ಎನ್.ಓ.ಸಿ.ಗಳನ್ನು ತಯಾರು ಮಾಡಿ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸಿ ಸರ್ಕಾರಕ್ಕೆ ವಂಚನೆ ಮಾಡಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಣೆ ಮಾಡಿ ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಅದಿಕಾರಿಗಳಿಗೆ ವರದಿ ಸಲ್ಲಿಸಿರುವುದಾಗಿ ತಿಳಿಸಿದರು.
ಗುತ್ತಿಗೆ ಪಡೆಯುವ ಸಲುವಾಗಿ ನಕಲಿ ದಾಖಲೆಗಳನ್ನು ನೀಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

