ದಲಿತರ ಸಮಸ್ಯೆಗೆ ಕಿವುಡಾದ ಅಧಿಕಾರಿಗಳು!
ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿಂದ ಹಿಡಿದು ಕಿರಿಯ ಅಧಿಕಾರಿಗಳವರೆಗೂ ಜಿಲ್ಲೆಯಲ್ಲಿ ಯಾರೂ ಸಮರ್ಪಕವಾಗಿ ದಲಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದಲಿತ ಮುಖಂಡರು ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಅಶ್ವತ್ಥ್ನಾರಾಯಣ್ ಸಮ್ಮುಖದಲ್ಲಿ ಅಸಮಾಧಾನ ತೋಡಿಕೊಂಡರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಅಶ್ವತ್ಥ್ನಾರಾಯಣ್ ನೇತೃತ್ವದಲ್ಲಿ ಅಹವಾಲುಗಳ ಸ್ವೀಕಾರ ಸಭೆ ನಡೆಯಿತು.
ತಾಲೂಕು ಕಚೇರಿಗಳಲ್ಲಿ ದಲಿತರು ಕೆಲಸ ಕಾರ್ಯಗಳಾಗುತ್ತಿಲ್ಲ. ಆದರೆ, ಎಷ್ಟೇ ಸಮಸ್ಯೆಗಳಿದ್ದರೂ ಉಳ್ಳವರ ಕೆಲಸಗಳು ಮಾತ್ರ ತ್ವರಿತವಾಗಿ ಮಾಡಿಕೊಡಲಾಗುತ್ತಿದೆ. ಇದಕ್ಕೆ ನಿದರ್ಶನ ಎನ್ನುವಂತೆ ಅನೇಕ ವರ್ಷಗಳಿಂದ ಸ್ವಾಧೀನದಲ್ಲಿರುವ ದಲಿತರು ಸೂಕ್ತ ದಾಖಲೆಗಳೊಂದಿಗೆ ಖಾತೆಗಳನ್ನು ಮಾಡಿಸಿಕೊಡಲು ಕೋರುತ್ತಿದ್ದರೂ ಸಹ ಅಲೆದಾಡಿಸಲಾಗುತ್ತಿದೆ ಎಂದರು.
ಅನೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನಕ್ಕಾಗಿ ಭೂಮಿಯೇ ಇಲ್ಲ. ಇತ್ತೀಚೆಗೆ ಚಿಂತಾಮಣಿ ತಾಲೂಕಿನ ಯಲಮನಪಾಡಿಹಳ್ಳಿಯಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಅಂತ್ಯಸಂಸ್ಕಾರ ನೆರವೇರಿಸಲು ಆಕೆಯ ಸಂಬಂಧಿಕರು ಪರದಾಡಬೇಕಾಯಿತು. ಕೊನೆಗೆ ದುಃಖದಲ್ಲಿಯೇ ಹರಸಾಹಸ ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಇಂಥ ಘಟನೆಗಳು ಎಲ್ಲೆಡೆ ನಡೆಯುತ್ತಿವೆಯಾದರೂ ದಲಿತರಿಗೆ ಸ್ಮಶಾನಕ್ಕಾಗಿ ಭೂಮಿಯನ್ನು ಕೊಟ್ಟಿಲ್ಲ ಎಂದು ಆರೋಪಿಸಿದರು.
2010ರಲ್ಲಿ 931 ಮಂದಿ ಜೀತದಾಳು ಜೀತದಿಂದ ಬಿಡುಗಡೆಗೊಳಿಸಿದ್ದರೂ ಸಮರ್ಪಕವಾಗಿ ಪರಿಹಾರವನ್ನು ಮತ್ತು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಲ್ಲ. ಹಲವೆಡೆ ಜೀತಪದ್ಧತಿ ಇನ್ನೂ ಜೀವಂತವಾಗಿದ್ದು ಅನೇಕರು ಶೋಷಣೆಗೆ ಗುರಿಯಾಗುತ್ತಿದ್ದಾರೆ. ಜೀತ ವಿಮುಕ್ತರು ನೆರವು ಸಿಗದೆ, ಜೀವನ ನಡೆಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ ಎಂದು ಜೀವಿಕ ಸಂಘಟನೆಯ ಸಂಚಾಲಕಿ ರತ್ನಮ್ಮ ಆರೋಪಿಸಿದರು.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಮತ್ತು ಜಿಲ್ಲಾಡಳಿತ ಕಚೇರಿಯ ಮುಂಭಾಗ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲಾಯಿತು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಆಯಾ ತಹಸೀಲ್ದಾರ್ ಸಭೆಯನ್ನು ನಡೆಸಿ ಸಮಸ್ಯೆಗಳನ್ನು ಪರಿಹರಿಸಲು ಸೂಚನೆ ನೀಡುವುದಾಗಿ ಭರವಸೆ ನೀಡಿದರು. ಆದರೆ, ಸಭೆಗಳು ನಡೆಯಲಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಪರಿಹಾರವೂ ಕಾಣಲಿಲ್ಲ ಎಂದು ದಸಂಸ ಬಿ.ವಿ.ಆನಂದ್ ಆರೋಪಿಸಿದರು.
ದಲಿತರ ಮೇಲೆ ದೌರ್ಜನ್ಯ, ಅಧಿಕಾರಿಗಳ ನಿರ್ಲಕ್ಷ್ಯ, ಹಕ್ಕುಪತ್ರ ನೀಡಲು ವಿಳಂಬ, ವಿದ್ಯಾರ್ಥಿ ನಿಲಯಗಳಲ್ಲಿ ಅಸಮರ್ಪಕ ಸೌಲಭ್ಯ, ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಸೇರಿದಂತೆ ವಿವಿಧ ರೀತಿಯ ದೂರುಗಳು ಸಭೆಯಲ್ಲಿ ಕೇಳಿ ಬಂದವು.
ಒಡಕು ಬಿಟ್ಟು ಒಗ್ಗಟ್ಟಾಗಿ ಹೋರಾಡಿ
ದಲಿತಪರ ಸಂಘಟನೆಗಳು ಬೇರೆ ಬೇರೆಯಾಗಿ ಒಡಕಿನಿಂದ ಹೋರಾಟವನ್ನು ನಡೆಸಿದರೆ ಪ್ರಯೋಜನವಾಗುವುದಿಲ್ಲ. ಸಂಘಟನೆಗಳು ಬೇರೆ ಬೇರೆಯಾದರೂ ಒಗ್ಗಟ್ಟಿನಿಂದ ದಲಿತರ ಸಮಸ್ಯೆಗಳ ಬಗ್ಗೆ ಒಂದು ಕಡೆ ಚರ್ಚಿಸಿ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕೆಂದು ಆಯೋಗದ ಅಧ್ಯಕ್ಷ ಅಶ್ವತ್ಥ್ ನಾರಾಯಣ್ ಸಲಹೆ ನೀಡಿದರು. ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಮಾಡಲು ನಿರ್ಲಕ್ಷ್ಯವೆಸಗಿದ್ದಲ್ಲಿ, ಲೋಪಗಳು ಕಂಡು ಬಂದಲ್ಲಿ ದಾಖಲೆ ಸಮೇತ ಆಯೋಗಕ್ಕೆ ದೂರು ನೀಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ವಿಶಾಲ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಜಿಲ್ಲಾ ರಕ್ಷಣಾಧಿಕಾರಿ ದಿವ್ಯಗೋಪಿನಾಥ್, ಜಿಪಂ ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ, ಆಯೋಗದ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

