ಕೋಲಾರ

ನೀರಿನ ವಿಷಯದಲ್ಲೂ ರಾಜಕೀಯ ಮಾಡುವಷ್ಟು ಮುಠ್ಠಾಳನಲ್ಲ

Published On :

ಕೋಲಾರ: ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನ ವಿಳಂಬವಾಗುತ್ತಿರುವುದಕ್ಕೆ ನನಗೂ ಬೇಸರವಿದೆ. ಹಾಗಂತ ನೀರಿನ ವಿಚಾರದಲ್ಲಿ ರಾಜಕಾರಣ ಮಾಡುವಷ್ಟು ಮುಠ್ಠಾಳ ನಾನಲ್ಲ. ಕೊಟ್ಟ ಮಾತು ಉಳಿಸಿಕೊಳ್ಳಲು ಆಗದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶಕುಮಾರ್ ಪುನರುಚ್ಚರಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎತ್ತಿನಹೊಳೆ ಡಾ.ಪರಮಶಿವಯ್ಯ ವರದಿ ಆಧಾರಿತ ಯೋಜನೆಯಲ್ಲಿ ಒಂದಾಗಿದೆ. ಈ ಯೋಜನೆಗೆ ಜ.31ರಂದು ಶಂಕುಸ್ಥಾಪನೆ ನೆರವೇರಿಸಲು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಉತ್ಸುಕರಾಗಿದ್ದಾರೆ. ಆದರೆ, ಟೆಂಡರ್ ಕರೆಯದೆ ಶಂಕುಸ್ಥಾಪನೆ ಮಾಡುವುದು ಸೂಕ್ತವಲ್ಲವೆಂದು ಜಲ ಸಂಪನ್ಮೂಲ ಸಚಿವ ಹಾಗೂ ಇನ್ನಿತರರು ನಿರ್ಧರಿಸಿರುವುದರಿಂದ ಕೊಂಚ ವಿಳಂಬವಾಗಬಹುದೇ ವಿನಃ ಯೋಜನೆ ಜಾರಿ ಬಗ್ಗೆ ಯಾರಲ್ಲೂ ಜಿಜ್ಞಾಸೆ ಬೇಡವೆಂದರು.
ಪರಮಶಿವಯ್ಯ ವರದಿ ಅನುಷ್ಠಾನ ಸಾಧ್ಯವಿಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಪರ್ಯಾಯ ಯೋಜನೆಯಾದ ಎತ್ತಿನಹೊಳೆ ಯೋಜನೆಯ ಮೂಲಕ ಸಿಗುವ 24 ಟಿಸಿಎಂ ನೀರಿನಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ 8 ಟಿಸಿಎಂ ನೀರು ಕುಡಿಯುವುದಕ್ಕೆ ಉಪಯೋಗಿಸಲು ನಿರ್ಧರಿಸಲಾಗಿದ್ದು, ಟೆಂಡರ್ ಕರೆದ ಮೇಲೆ ಕೂಡಲೇ ಕಾಮಗಾರಿ ಆರಂಭಿಸಬೇಕಾಗುತ್ತದೆ. ಆದರೆ, ಈ ಕೆಲಸ ಇನ್ನೂ ಮುಗಿದಿಲ್ಲ. ಜ.31ರಂದು ಶಂಕುಸ್ಥಾಪನೆ ಆಗುವ ಸಂಬಂಧ ಕೆಲವರಿಂದ ಟೀಕೆಗಳು ಕೇಳಿ ಬಂದಿರುವುದರಿಂದ ಮುಖ್ಯಮಂತ್ರಿಗಳು ಮತ್ತೊಮ್ಮೆ ಶಾಸಕರ ಸಭೆಯನ್ನು ಕರೆದು ಗೊಂದಲ ನಿವಾರಿಸಬೇಕಾಗಿರುವ ಹಿನ್ನೆಲೆಯಲ್ಲಿ ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಈ ಸಂಬಂಧ ಚರ್ಚಿಸುವುದಾಗಿ ಹೇಳಿದರು.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಮೂರು ತಿಂಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರುವುದಾಗಿ ತಿಳಿಸಲಾಗಿತ್ತು. ಈಗ ಯೋಜನೆ ವಿಳಂಬವಾಗುತ್ತಿರುವುದು ಜನತೆಗೆ ಕೊಟ್ಟ ಮಾತು ಹುಸಿಯಾದಂತಾಗಿಲ್ಲವೇ ಎಂದಾಗ, ನಾವೇನು ಯೋಜನೆ ಕೈಬಿಟ್ಟಿಲ್ಲ, ತಾಂತ್ರಿಕ ಕಾರಣಗಳಿಂದ ಕೊಂಚ ವಿಳಂಬವಾಗುತ್ತಿದೆ. ಶಂಕುಸ್ಥಾಪನೆ ಮಾಡಿ ಕಾಮಗಾರಿ ಆರಂಭಿಸದಿದ್ದರೆ ಅಭಾಸವಾಗುತ್ತದೆ. ಹಾಗಾಗಿ ಟೆಂಡರ್ ಪ್ರಕ್ರಿಯೆ ಬೇಗನೆ ಮುಗಿಸಿ ಫೆಬ್ರವರಿ ತಿಂಗಳಲ್ಲಿ ಶಂಕುಸ್ಥಾಪನೆ ಮಾಡಿದ ತಕ್ಷಣ ಕೆಲಸ ಆರಂಭಿಸಿದಲ್ಲಿ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲು ಮುಂದಾಗಿರುವುದರಿಂದ ಹುಸಿ ಎಂಬ ಮಾತು ಪ್ರಸ್ತುತವಾಗಲಾರದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.