ಕೋಲಾರ

ಸುದ್ದಿ ಸಂಕ್ಷೇಪ

Published On :

ರಸ್ತೆ ಸುರಕ್ಷಾ ಸಪ್ತಾಹ
ಚಿಂತಾಮಣಿ: ಸಾರ್ವಜನಿಕರು ರಸ್ತೆ ನಿಯಮ ಪಾಲಿಸಿ ಅಪಘಾತಗಳನ್ನು ತಪ್ಪಿಸಬೇಕೆಂದು ನಗರದ ನಗರದ ಸರ್ಕಲ್ ಇನ್ಸ್‌ಪೆಕ್ಟರ್ ನಂಜಪ್ಪ ಕಿವಿ ಮಾತು ಹೇಳಿದರು. ನಗರದ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಾ ಸಪ್ತಾಹದಲ್ಲಿ ಅವರು ಮಾತನಾಡಿದರು. ಸಬ್‌ಇನ್ಸ್‌ಪೆಕ್ಟರ್ ಬಸವರಾಜು ಮಾತನಾಡಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡಬಾರದು, ಕಾನೂನು ಬಾಹಿರವಾಗಿ ವಾಹನ ಚಾಲನೆ ಮಾಡಿದರೆ ದಂಡ ತೆರಬೇಕಾಗುತ್ತದೆ ಎಂದು ಹೇಳಿದರು. ಮುಖ್ಯಶಿಕ್ಷಕ ರಮಣಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹ ಶಿಕ್ಷಕ ರಾಮಕೃಷ್ಣ, ನಾಗರಾಜ್, ನಂಜುಂಡಪ್ಪ ಇದ್ದರು.
ರಾಯರ ವಿಶೇಷ ಸೇವಾ ಕಾರ್ಯಗಳು
ಮಾಲೂರು: ಇಲ್ಲಿನ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಬ್ರಾಹ್ಮಣರ ಸಂಘದಿಂದ ಗುರುವಾರ ರಾಯರ ವಿಶೇಷ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಧಾನ ಆರ್ಚಕ ಅಂಜನ್ ಕುಮಾರ್‌ಶರ್ಮ ನೇತೃತ್ವದಲ್ಲಿ ರಾಯರಿಗೆ ಪ್ರಾಕರೋತ್ಸವ, ತೊಟ್ಟಿಲು ಸೇವೆ, ಶಯನೋತ್ಸವ ಹಾಗೂ ಅಷ್ಟವತಾರ ಸೇವೆಗಳು ನಡೆದವು. ಬ್ರಾಹ್ಮಣರ ಸಂಘದ ಅಧ್ಯಕ್ಷ ನಾಗರಾಜ್ ರಾವ್, ಚಂದ್ರಶೇಖರ್ ರಾವ್, ಶ್ರೀಧರ್ ಮೂರ್ತಿ, ಕಮಲೇಶ್, ಭದ್ರಿನಾಥ್, ರಾಘವೇಂದ್ರ ವೈದ್ಯ, ಲಕ್ಷ್ಮಿನಾರಾಯಣ್, ಸೀತಾರಾಮ ಮೂರ್ತಿ, ಅನಂತಪದ್ಮನಾಭ್, ಸಂತೋಷ್ ಕುಮಾರ್ ಶರ್ಮ, ಮಾಧವ ರಾವ್, ಮಂಜುನಾಥ್, ಮಹೇಂದ್ರ ಶರ್ಮ, ರಘುನಾಥ್, ಉಮೇಶ್, ಕಬೀರ್ ಇದ್ದರು.
ಹಿರಿಯ ನಾಗರಿಕರ ಜನ್ಮ ದಿನಾಚರಣೆ
ಚಿಂತಾಮಣಿ: ಹಿರಿಯ ನಾಗರಿಕರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಎಪಿಎಂಸಿ ವರ್ತಕ ಎಸ್.ಜಿ. ನಿರಂಜನ್ ಹೇಳಿದರು. ಹಿರಿಯ ನಾಗರಿಕ ವೇದಿಕೆ ತಾಲೂಕು ಅಧ್ಯಕ್ಷ ಅಪ್ಪೋಜಿರೆಡ್ಡಿ 78 ನೇ ಜನ್ಮ ದಿನಾಚರಣೆ ಅಂಗವಾಗಿ ಕಾಗತಿ ಗ್ರಾಮದ ಸ್ವಗೃಹದಲ್ಲಿ ಸ್ನೇಹಿತರು ಹಾಗೂ ಹಿತೈಷಿಗಳು ಸರಳವಾಗಿ ಜನ್ಮ ದಿನ ಆಚರಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಒಂದು ದಶಕದ ಕಾಲ ಉತ್ತಮ ಆಡಳಿತ ನಡೆಸಿ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅಪ್ಪೋಜಿರೆಡ್ಡಿಯವರ ಸಮಾಜ ಸೇವೆಯನ್ನು ಎಪಿಎಂಸಿ ವರ್ತಕ ಎಸ್.ಜಿ. ನಿರಂಜನ್ ಶ್ಲಾಘಿಸಿದರು. ನಂತರ ಅಪ್ಪೋಜಿರೆಡ್ಡಿಯವರಿಗೆ ಜನ್ಮ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು. ಪ್ರಭುದೇವ್, ವೇಣುಗೋಪಾಲ್, ಅಪ್ಪಯ್ಯ, ನವೀನ್ ಕುಮಾರ್, ಪ್ರದೀಪ್ ಕುಮಾರ್ ಇದ್ದರು.
ಮ್ಯಾರಥಾನ್ ಸ್ಪರ್ಧೆ
ಕೆಜಿಎಫ್: ಪೊಲೀಸ್ ಇಲಾಖೆ ವತಿಯಿಂದ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಾಪ್ತಾಹ ಅಂಗವಾಗಿ ಪೊಲೀಸ್ ಸಿಬ್ಬಂದಿಗೆ 5 ಕಿಮೀ ಮ್ಯಾರಥಾನ್ ಓಟದ ಸ್ಪರ್ಧೆಗೆ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸೆಫಟ್ ಅವರು ಹಸಿರು ನಿಶಾನೆ ತೋರಿಸಿದರು.  ಈ ವೇಳೆ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದ್ದು ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು. ಮ್ಯಾರಾಥನ್ ಓಟದ ಸ್ಪರ್ಧೆಯಲ್ಲಿ ಪೊಲೀಸ್ ಉಪರಕ್ಷಣಾಧಿಕಾರಿ ಎ.ಕೆ. ವಿವೇಕಾನಂದ, ಇಸ್ಪೆಕ್ಟರ್‌ಗಳಾದ ಲಕ್ಷ್ಮೀನಾರಾಯಣ, ಪವನ್‌ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿ ರಸ್ತೆ ಸಪರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಹಾವು ಕಚ್ಚಿ ರೈತ ಸಾವು
ಚಿಂತಾಮಣಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ಹಾವು ಕಡಿದ ಪರಿಣಾಮ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತಾಲೂಕಿನ ಚೇಳೂರು ಠಾಣೆ ವ್ಯಾಪ್ತಿಯ ಪುಲಿಗಿಂಟವಾರಪಲ್ಲಿ ಗ್ರಾಮದಲ್ಲಿ ರೈತ ಜಯಪ್ಪ(33) ಎಂಬಾತನಿಗೆ ಹಾವು ಕಡಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದು, ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಚೇಳೂರು ಪೊಲೀಸರು ಪ್ರಕರಣಕ್ಕೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬೈಕ್‌ಗಳ ಡಿಕ್ಕಿ; ಗಾಯ
ಟೇಕಲ್: ಬೈಕ್ ಸವಾರರು ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಚಿಕ್ಕನಾಯಕನಹಳ್ಳಿ ಕೃಷ್ಣಪ್ಪ ಎಂಬಾತ ತೀವ್ರ ಗಾಯಗೊಂಡು ಬೆಂಗಳೂರಿನ ನಿಮಾನ್ಸ್‌ಗೆ ದಾಖಲಿಸಲಾಗಿದ್ದು ಇನ್ನೊಬ್ಬ ಸವಾರ ಚಿಕ್ಕಕುಂತೂರಿನ ಆನಂದ್ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ; ವ್ಯಕ್ತಿ ಸಾವು
ಚಿಂತಾಮಣಿ: ರಸ್ತೆ ಬದಿ ಪಾದಾಚಾರಿಯೊಬ್ಬರು ಹೋಗುತ್ತಿರುವಾಗ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕಿ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ಚಿನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ಚಿನ್ನಸಂದ್ರ ಗ್ರಾಮದ ಸಿದ್ದಿಕ್ ಪಾಷಾ(25) ತೀವ್ರ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರುವುದಾಗಿ ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾಠಿ ಚಾರ್ಜ್ ವಿರೋಧಿಸಿ ಪ್ರತಿಭಟನೆ
ಮಾಲೂರು: ಬೆಂಗಳೂರಿನಲ್ಲಿ ಅತಿಥಿ ಉಪನ್ಯಾಸಕರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ ಕ್ರಮ ಖಂಡಿಸಿ ಎಸ್‌ಎಫ್‌ಐ ಕಾರ್ಯಕರ್ತರು ಇಲ್ಲಿನ ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಧರಣಿ ನೆಡೆಸುತ್ತಿದ್ದ ಅತಿಥಿ ಉಪಾನ್ಯಾಸಕರು ರಾಜ್ಯ ಸರ್ಕಾರವು ಬಂಧಿಸಿರುವುದು ಖಂಡನೀಯ. ಉಪಾನ್ಯಾಸಕ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬಹುದೆಂಬ ಆಶಯ ಹೊಂದಿದ್ದ ಅತಿಥಿ ಉಪನ್ಯಾಸಕರನ್ನು ಬಂಧಿಸಿರುವ ರಾಜ್ಯ ಸರ್ಕಾರ ಕೂಡಲೇ ಉಪಾನ್ಯಾಸಕರನ್ನು ಬಿಡುಗಡೆ ಮಾಡಿ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಗ್ರಹಿಸಿದರು. ಅಧ್ಯಕ್ಷ ಗೋಪಿ, ಅರುಣ್ ಕುಮಾರ್, ಶರತ್, ದಾಕ್ಷಯಿಣಿ, ದಿವ್ಯ, ಮುನಿರಾಜು, ಸುರೇಶ್, ಶಿವರಾಜ್, ಉಮೇಶ್, ನಟರಾಜ್ ಇದ್ದರು.
5 ಅಕ್ರಮ ಮರಳು ಲಾರಿ ವಶ
ಮುಳಬಾಗಲು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಲ್ಯಾಂಕೋ ಚೆಕ್ ಪೋಸ್ಟ್ ಬಳಿ  ಸೋಮವಾರ ರಾತ್ರಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 5 ಲಾರಿಗಳನ್ನು ನಂಗಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲ್ಯಾಂಕೋ ಚೆಕ್ ಪೋಸ್ಟ್ ಬಳಿ ಪೊಲೀಸು, ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಕಾವಲು ಇರುವ ಕಾರಣ ಬೇರೆ ಮಾರ್ಗಗಳಲ್ಲಿ ಸದರೀ ಅಕ್ರಮ ಮರಳು ಲಾರಿಗಳು ಹೋಗುತ್ತಿದ್ದು, ಡಿವೈಎಸ್ಪಿ ಟಿ. ಸಿದ್ದಯ್ಯನವರಿಗೆ ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿ ಲಾರಿಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.