ಕೋಲಾರ

ಅಧ್ಯಕ್ಷರಿಗೆ ಅಹವಾಲುಗಳ ಸುರಿಮಳೆ

Published On :

ಕೋಲಾರ: ಜಿಲ್ಲೆಗೆ ಮಂಗಳವಾರ ಭೇಟಿ ನೀಡಿದ್ದ ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಇ. ಅಶ್ವತ್ಥನಾರಾಯಣ ಅವರ ಮುಂದೆ ದಲಿತ ಸಂಘಟನೆಗಳ ಮುಖಂಡರು ಸಮಸ್ಯೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಸಲ್ಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮುಖಂಡ ವಿಜಯಕುಮಾರ್, ಮುಜರಾಯಿ ಇಲಾಖೆಯಲ್ಲಿ ಮೀಸಲಾತಿ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿದರು, ದೇವಾಲಯಗಳಲ್ಲಿ ಆರ್ಚಕರು ಕನ್ನಡದಲ್ಲಿ ಮಂತ್ರಗಳನ್ನು ಪಠಿಸಬೇಕು. ಅದಕ್ಕಾಗಿ ವಿಶೇಷ ತರಬೇತಿ ನೀಡಬೇಕೆಂದರು.
ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಹಾರೋಹಳ್ಳಿ ನಾರಾಯಸ್ವಾಮಿ, ಕೋಲಾರ ಹಿಂದುಳಿದ ಜಿಲ್ಲೆಯಾಗಿದ್ದು ಶೇ.30 ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡ ಜನರಿದ್ದಾರೆ. ಇತ್ತೀಚೆಗೆ ದಲಿತರ ಮೇಲೆ ದೌರ್ಜನ್ಯಗಳು ಕಡಿಮೆಯಾಗಿವೆ. ಶ್ಯಾನುಭೋಗನಹಳ್ಳಿ, ಜಕ್ಕನಹಳ್ಳಿ ಗ್ರಾಮಗಳಲ್ಲಿ ನಡೆದ ಘಟನೆಗಳನ್ನು ಪೊಲೀಸ್ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಿದೆ. ಸವಲತ್ತುಗಳು ಸವರ್ಣೀಯರ ಪರವಾಗಿವೆ. ಗುತ್ತಿಗೆ ಟೆಂಡರ್‌ಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಬೇಕು. ಶೇ.22.75 ಹಣವನ್ನು ಪರಿಶಿಷ್ಟ ಜಾತಿಯವರಿಗೆ ಮೀಸಲಿಡಬೇಕು ಎಂದು ತಿಳಿಸಿದರು.
ಅರ್ಚಕರ ಕೆಲಸದಲ್ಲೂ ಮೀಸಲಾತಿ ನೀಡಬೇಕು, ವೇದಗಳನ್ನು ದಲಿತರು ಕಲಿತು ದೇವಾಲಯಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಲು ದಲಿತರಿಗೆ ವೇದಪಾಠ ಶಾಲೆ ತೆರೆಯಬೇಕೆಂದು ಅಭಿಪ್ರಾಯಪಟ್ಟರು. ಹಿರಿಯ ದಲಿತ ಮುಖಂಡ ಡಾ. ಚಂದ್ರಶೇಖರ್, ಆಸ್ತಿಗಳನ್ನು ಇನಾಂತಿ ರದ್ದತಿ ಕಾಯ್ದೆಯಡಿ ಭೂಮಿ ಕಳೆದು ಕೊಂಡಿರುವ ಚಾಕರಿದಾರರಿಗೆ ಮಾಸಾಶನ ನೀಡಬೇಕು ಎಂದು ತಿಳಿಸಿದರು.
ದಲಿತ ಸಮಾಜ ಸೇವೆ ಸಮಿತಿಯ ಸುಲಿಕುಂಟೆ ಆನಂದ್, ದಲಿತ ದೌರ್ಜನ್ಯ ತಡೆ ಸಭೆಗಳನ್ನು ತಾಲೂಕು ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಏರ್ಪಡಿಸಬೇಕೆಂದರು. ವಕೀಲ ಜಿ. ವೆಂಕಟಾಚಲಪತಿ, ನಗರಸಭೆಗಳಲ್ಲಿ ಪ್ರಚಾರದ ಕೊರತೆಯಿಂದ ಅಲ್ಲಿನ ಸೌಲಭ್ಯಗಳು ಬಡವರಿಗೆ ತಲುಪುತ್ತಿಲ್ಲ ಎಂದರು. ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಆರ್.ಎನ್. ಹನುಮಂತಪ್ಪ ಮಾತನಾಡಿ, ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಆಗಿರುವ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ನಾಗನಾಳ ಮುನಿಯಪ್ಪ, ಇತರೆ ಜಾತಿಗಳನ್ನು ಎಸ್ಸಿ,ಎಸ್ಟಿ ಗುಂಪಿಗೆ ಸೇರಿಸಬಾರದು ಎಂದರು. ವಿದ್ಯಾರ್ಥಿ ದಲಿತ ಕ್ರಿಯಾ ಸಮಿತಿ ಮುಖಂಡ ವೆಂಕಟೇಶ್, ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯಗಲಿಲ್ಲ, ಕೆಲ ಶಾಲೆಗಳಲ್ಲಿ ಹಣಕ್ಕಾಗಿ ಪೀಡಿಸುತ್ತಾರೆಂದು ದೂರಿದರು. ಅಸ್ಪೃಶ್ಯ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಮುನಿವೆಂಕಟಪ್ಪ, 4000 ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವುದಾಗಿ  ಮುಖ್ಯಮಂತ್ರಿಗಳು ತಿಳಿಸಿದರೂ ಇನ್ನೂ ಭರವಸೆ ಈಡೇರಿಲ್ಲ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.