ಪರಮಶಿವಯ್ಯ ವರದಿ ಜಾರಿಗೆ ಆಗ್ರಹಿಸಿ ಹೋರಾಟ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಜ. 28
ಬಯಲು ಸೀಮೆ ಜಿಲ್ಲೆಗಳಿಗೆ ಡಾ.ಪರಮಶಿವಯ್ಯ ವರದಿಯಾಧಾರಿತ ನೀರಾವರಿ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿ ಎರಡನೇ ಹಂತದ ಹೋರಾಟ ಪ್ರಾರಂಭವಾಗಿದೆ ಎಂದು ಅವಿಭಜಿತ ಕೋಲಾರ ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟ ಸಮಿತಿ ಘೋಷಿಸಿದೆ.
ನಗರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ನೀರಾವರಿ ಹೋರಾಟಗಾರರ ನೇತೃತ್ವದಲ್ಲಿ ಮಂಗಳವಾರ ನಡೆದ ಬೃಹತ್ ರ್ಯಾಲಿ ಮತ್ತು ಬಹಿರಂಗ ಸಭೆಯಲ್ಲಿ, ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವುದನ್ನು ಈವರೆಗೂ ರಾಜಕಾರಣಕ್ಕೆ ಬಳಸಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದವರು ಮತ್ತು ಸರ್ಕಾರಗಳು ಜನರ ದಿಕ್ಕು ತಪ್ಪಿಸುತ್ತ ಈ ಭಾಗಕ್ಕೆ ಅನ್ಯಾಯ ಮಾಡುತ್ತಿದ್ದು, ಪ್ರಮುಖವಾಗಿ ನೀರಾವರಿ ವಿಷಯದಲ್ಲಿ ರಾಜಕಾರಣ ಮಾಡಬೇಡಿ ಎಂದು ಹೇಳುತ್ತಿರುವ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿರವರೇ ಸ್ವತಃ ನೀರಾವರಿ ಹೆಸರಿನಲ್ಲಿ ಅಧಿಕಾರ ಪಡೆದು ಈಗ ಮತ್ತೆ ಅದೇ ರಾಜಕಾರಣ ಮುಂದುವರೆಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿ ಬಂದವು.
2002 ರಲ್ಲಿ ಮೊದಲ ಬಾರಿಗೆ ಡಾ. ಪರಮಶಿವಯ್ಯನವರ ವರದಿ ಜಾರಿಗೊಳಿಸಿ ಈ ಭಾಗಕ್ಕೆ ನೀರನ್ನು ಹರಿಸಲು ಒತ್ತಾಯಿಸಲು ನಿರ್ಧಾರ ಕೈಗೊಂಡಿದ್ದು ಮೊದಲ ಹಂತದ ಹೋರಾಟದ ಭಾಗವಾಗಿ ಅವಿಭಜಿತ ಕೋಲಾರ ಜಿಲ್ಲೆಯ 15 ಸಾವಿರಕ್ಕೂ ಹೆಚ್ಚು ಜನರನ್ನೊಳಗೊಂಡ ಪಾದಯಾತ್ರೆ ಕೈಗೊಂಡು ವಿಧಾನಸೌಧಗೆ ಮುತ್ತಿಗೆ ಹಾಕಲಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣರವರು ಬೇಡಿಕೆಗೆ ಮನ್ನಿಸಿ ಸಮೀಕ್ಷಾ ವರದಿ ತಯಾರಿಸಲು ಇಸ್ರೋ ಅಂಗ ಸಂಸ್ಥೆಗೆ ಸೂಚಿಸಿದರು. ಆ ಹಿನ್ನೆಲೆಯಲ್ಲಿ ಕೆಲ ಕಾಲ ಹೋರಾಟ ನಿಲ್ಲಿಸಲಾಗಿತ್ತು. ನಂತರ ಸರ್ಕಾರ ಸಂಸ್ಥೆಗೆ ಅಗತ್ಯವಿರುವ ಹಣ ನೀಡಿ ವರದಿ ತರಿಸಿಕೊಳ್ಳುವಂತೆ ಒತ್ತಾಯಿಸಿದ್ದು ಈ ನಡುವೆ ಇಲ್ಲಿ ರಾಜಕೀಯ ಮರುಜನ್ಮ ಪಡೆದ ವೀರಪ್ಪ ಮೊಯ್ಲಿ ಪರಮಶಿವಯ್ಯನವರ ವರದಿಯನ್ನು ಮೂಲೆಗುಂಪು ಮಾಡಲು ಎತ್ತಿನಹೊಳೆ ಯೋಜನೆ ಬಳಕೆ ಮಾಡಿಕೊಂಡು ಈಗಲೂ ನೀರಾವರಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಪಿಎಂ ರಾಜ್ಯ ಮುಖಂಡ, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಟೀಕಿಸಿದರು. ಅಲ್ಲದೇ ಎತ್ತಿನಹೊಳೆ ಯೋಜನೆಯಿಂದ ಅವಿಭಜಿತ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನಗರ ಪ್ರದೇಶಗಳಿಗೆ ಮಾತ್ರ ನೀರು ಪೂರೈಕೆಯಾಗುತ್ತದೆಯೇ ಹೊರತು ಹಳ್ಳಿಗಳಿಗೆ ಸಿಗುವುದಿಲ್ಲ. ಈ ಮೂಲಕ ಯೋಜನೆಯ ಹಿಂದೆ ಕಾರ್ಖಾನೆಗಳಿಗೆ ನೀರು ಪೂರೈಸುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ಈಗ ಜಪ ಮಾಡುತ್ತಿದ್ದಾರೆ: ಈ ಹಿಂದೆ ಪರಮಶಿವಯ್ಯನವರ ವರದಿಯ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಡಿವೈಎಫ್ಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ಶಾಸಕ ಮತ್ತು ಮಾಜಿ ಸ್ಪೀಕರ್ ಆಗಿರುವಂತಹವರು ಪಶ್ಚಿಮಘಟ್ಟಗಳು ಇರುವುದೆಲ್ಲಿ,ಬಯಲು ಸೀಮೆ ಇರುವುದೆಲ್ಲಿ, ಪರಮಶಿವಯ್ಯನವರಿಗೆ ಅರಳೋ ಮರುಳೋ ಆಗಿರಬೇಕೆಂದು ವ್ಯಂಗ್ಯವಾಡಿದ್ದರು. ಇನ್ನೂ ನಾಡಿನ ಮಣ್ಣಿನ ಮಕ್ಕಳು ಪರಮಶಿವಯ್ಯನವರ ವರದಿ ಅವೈಜ್ಞಾನಿಕ ಎಂದು ಭದ್ರ ಮೇಲ್ದಂಡೆ ಯೋಜನೆಯ ಜಪ ಮಾಡಿದರು. ಚಿನ್ನದ ಮಕ್ಕಳು, ಜೊತೆಗೆ ಇಲ್ಲಿ ಸತತವಾಗಿ ಸಂಸದರಾಗಿ ಆಯ್ಕೆಯಾಗುತ್ತ ಬಂದವರು ಒಂದು ದಿನವು ಪಾರ್ಲಿಮೆಂಟ್ನಲ್ಲಿ ನೀರಾವರಿ ಯೋಜನೆಯ ಬಗ್ಗೆ ಪ್ರಸ್ತಾಪಿಸಲಿಲ್ಲ ಎಂದು ಟೀಕಿಸಿದ ಅವರು, ಮೊಯ್ಲಿ ದಕ್ಷಿಣ ಕನ್ನಡ ಜಿಲ್ಲೆ ಭಾಗಕ್ಕೆ ಹೋದಾಗ ಯೋಜನೆಯ ಬಗ್ಗೆ ಮಾತನಾಡುವುದಿಲ್ಲ. ಬದಲಿಗೆ ಕೇವಲ ಇಲ್ಲಿಗೆ ಬಂದಾಗ ಎತ್ತಿನಹೊಳೆ ಮತ್ತು ಪರಮಶಿವಯ್ಯ ವರದಿ ಜಾರಿ ಎನ್ನುತ್ತಾರೆ. ಇಲ್ಲಿ ತಮ್ಮ ಸ್ವಾರ್ಥರಾಜಕಾರಣಕ್ಕಾಗಿ ಜನರನ್ನು ಮರುಳು ಮಾಡುತ್ತ ನೀರಾವರಿ ವಿಷಯದಲ್ಲಿ ರಾಜಕಾರಣ ಮಾಡಬೇಡಿ ಎಂದು ಬೇರೆಯವರಿಗೆ ಬುದ್ದಿಮಾತು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಮುಖ ಘೋಷಣೆಗಳು: ಪರಮಶಿವಯ್ಯನವರ ಯೋಜನೆಗಾಗಿ ತಾಂತ್ರಿಕ ವರದಿ ನೀಡಲು ರಚಿಸಲಾಗಿರುವ ಸಮಿತಿಯಲ್ಲಿ ಸದಸ್ಯರಾಗಿರುವ ಕೆ.ಸಿ. ರೆಡ್ಡಿ, ದೇಸಾಯಿರನ್ನು ತೆಗೆಯಬೇಕು. ಪರಮಶಿವಯ್ಯ ಯೋಜನೆಗೆ ಸಂಬಂಧಿಸಿದಂತಿರುವ ರಾಜಕೀಯ,ಪರಿಸರ, ತಪ್ಪು ಗ್ರಹಿಕೆ ಸಮಸ್ಯೆಗಳನ್ನು ದೂರ ಮಾಡಿ, ಯೋಜನೆ ಅನುಷ್ಠಾನಕ್ಕೆ ಸರ್ಕಾರ ರಾಜಕೀಯ ಇಚ್ಚಾಶಕ್ತಿ ತೋರಬೇಕು. ನೀರಾವರಿ ಹೋರಾಟ ನಾಯಕರ ಹೋರಾಟಗವಾಗದೇ ಪ್ರತಿ ಹಳ್ಳಿಯಲ್ಲೂ ಜಾಗೃತಿ ಮೂಡಿಸಿ ನಾವು ಜನರ ಹೋರಾಟವನ್ನಾಗಿಸಬೇಕು. ಯಾವುದೇ ವೈಜ್ಞಾನಿಕ ಮೂಲಗಳಿಂದಲಾದರೂ ನೀರು ಸಿಗುವುದಾದರೆ ಜಾರಿಗೆ ತರಲಿ, ಪ್ರಮುಖವಾಗಿ ಪರಮಶಿವಯ್ಯನವರ ವರದಿ ಕೈ ಬಿಡಬಾರದು ಎಂದು ಜಿ.ವಿ.ಶ್ರೀರಾಮರೆಡ್ಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನೀರಾವರಿ ಹೋರಾಟಗಾರರಾದ ಮಳ್ಳೂರು ಶಿವಣ್ಣ, ಎಸ್.ಎಸ್. ರೆಡ್ಡಿ, ನಂದಿರೆಡ್ಡಿ, ರಾಮಕೃಷ್ಣಾರೆಡ್ಡಿ, ಚಂದ್ರತೇಜಸ್ವಿ, ನಾಗಭೂಷಣ್, ಪರಿಸರವಾದಿ ಚೌಡಪ್ಪ, ಗೋವಿಂದರಾಜು, ಹನುಮಂತರಾಯಪ್ಪ, ಪ್ರಭುದೇವ್, ಸಿ. ಗೋಪಿನಾಥ್, ಕಲ್ಯಾಣ್ ಕುಮಾರ್, ಡಾ. ಅನಿಲ್ ಕುಮಾರ್, ಸಾವಿತ್ರಮ್ಮ, ಚನ್ನರಾಯಪ್ಪ, ಮುನಿವೆಂಕಟಪ್ಪ, ಲಕ್ಷ್ಮೀನಾರಾಯಣ್, ಮಂಜುನಾಥ್ ರೆಡ್ಡಿ, ಮುನಿರತ್ನಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

