ಕೋಲಾರ

ಕಾಂಕ್ರೀಟ್ ರಸ್ತೆ ಗುಣಮಟ್ಟ ಪರೀಕ್ಷೆಗೆ ಗಡಾರಿ ಹಿಡಿದ ಡಿಸಿ

Published On :

ಕನ್ನಡಪ್ರಭ ವಾರ್ತೆ    ಕೋಲಾರ     ಜ.29
ಸರ್ಕಾರ ಕೋಲಾರ ನಗರದ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ನೀಡಿದೆ. ಆದರೆ, ಗುಣಮಟ್ಟದ ಕಾಮಗಾರಿ ನಡೆಸುವ ಬದಲು ಗುತ್ತಿಗೆದಾರರು ಹಣ ಲೂಟಿ ಮಾಡುತ್ತಿದ್ದಾರೆ.
ಈ ರೀತಿ ಆರೋಪ ಮಾಡಿದ್ದು ಬೇರೆ ಯಾರು ಅಲ್ಲ. ಕಳೆದ ಆರೇಳು ತಿಂಗಳ ಹಿಂದೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಜಿಲ್ಲೆಯ ಅಭಿವೃದ್ಧಿ ಸುಧಾರಣೆಗಾಗಿ ಪ್ರಯತ್ನಿಸುತ್ತಿರುವ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು.
ನಗರೋತ್ಥಾನ ಮೊದಲನೇ ಹಂತದ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸದ ಪರಿಣಾಮ ಸರ್ಕಾರ ನೀಡಿದ ಹಣ ಮಣ್ಣುಪಾಲು ಆಗಿದೆ. 2ನೇ ಹಂತದ ಕಾಮಗಾರಿಗಳಿಗಾಗಿ ಜಿಲ್ಲೆಗೆ 65 ಕೋಟಿ ರು. ಬಿಡುಗಡೆ ಆಗಿದ್ದು, ಈ ಪೈಕಿ ಕೋಲಾರ ನಗರಕ್ಕೆ 30 ಕೋಟಿ ರು. ಸಿಕ್ಕಿದ್ದರೂ ರಸ್ತೆಗಳ ಕಾಮಗಾರಿ ತೃಪ್ತಿಕರವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಜಿಲ್ಲಾಧಿಕಾರಿಗಳು 3ನೇ ವಾರ್ಡಿಗೆ ಸೇರಿದ ಕೋಟೆ ಪ್ರದೇಶ ಹಾಗೂ 35ನೇ ವಾರ್ಡಿನ ಬೀಡಿ ಕಾಲೋನಿ, ಮೆಹಬೂಬಬ್ನಗರಕ್ಕೆ ಭೇಟಿ ನೀಡಿ ಕಾಂಕ್ರೀಟಟ್ರಸ್ತೆಗಳ ಕಾಮಗಾರಿ ಪರಿಶೀಲಿಸಿದರು.
ಕೋಟೆ ಪ್ರದೇಶದಲ್ಲಿ ತಾವೇ ಗಡಾರಿ ಹಿಡಿದು ಹೊಸದಾಗಿ ಹಾಕಿರುವ ಹಾಕಿರುವ ಸಿಮೆಂಟ್ ರಸ್ತೆಗಳನ್ನು ಅಗೆದು ಗುಣಮಟ್ಟ ಪರಿಶೀಲಿಸಿದರು. ರಸ್ತೆಯ ಮೇಲ್ಪದರಕ್ಕೆ ಬಳಸಿರುವ ಜಲ್ಲಿ ಕಲ್ಲು, ಮರಳು, ಸಿಮೆಂಟಟ್ನಿಯಮ ಪ್ರಕಾರ ಬಳಕೆ ಮಾಡಿಲ್ಲವೆಂದು ನಗರೋತ್ಥಾನ ಕಾಮಗಾರಿಯ ಗುತ್ತಿಗೆ ಪಡೆದಿರುವ ಬಿ.ಎಸ್.ಆರ್ ಇನ್ಫಾಸ್ಟ್ರಕ್ಚರ್ ಸಂಸ್ಥೆಯ ಪಿಎಂಸಿ ಎಂಜನಿಯರ್ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಗುಣಮಟ್ಟ ಕೆಲಸಕ್ಕೆ ಮಾತ್ರ ಹಣ: ಸಿಸಿ ರಸ್ತೆಗಳು ಕನಿಷ್ಟ 40 ವರ್ಷವಾದರೂ ಬಾಳಿಕೆ ಬರಬೇಕು. ಕೋಟೆ ಪ್ರದೇಶದಲ್ಲಿನ ಕಾಂಕ್ರೀಟ್ ರಸ್ತೆಗಳು ನಿರ್ಮಾಣಗೊಂಡು ಇನ್ನು ತಿಂಗಳಾಗುತ್ತಾ ಬಂದಿಲ್ಲ. ಆಗಲೇ ಮೇಲ್ಪದರ ಕಳಚಿಕೊಳ್ಳುತ್ತಿದೆ, ಚರಂಡಿಗಳ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲವೆಂದು ಸಿಡಿಮಿಡಿಗೊಂಡರು.
ಚನ್ನಾಗಿ ಕೆಲಸ ಮಾಡಬೇಕೆಂಬ ಕಾರಣಕ್ಕೆ ಮುಂಗಡವಾಗಿ 3.35 ಕೋಟಿ ರು.ಮುಂಗಡವಾಗಿ ಹಣ ನೀಡಿದ್ದೇನೆ, ಗುಣಮಟ್ಟದ ಕೆಲಸ ಮಾಡುವಂತೆ ಮೊದಲೇ ಸೂಚಿಸಿದ್ದೇನೆ, ಬಾಕಿ ಬಿಲ್ ಪಾವತಿ ಮಾಡುವಂತೆ ಕೇಳಿದ್ದೀರಾ, ಹಣ ನೀಡುವುದಕ್ಕೆ ನಮ್ಮ ತಕರಾರು ಏನೂ ಇಲ್ಲ. ಆದರೆ, ಗುಣಮಟ್ಟದ ಕೆಲಸ ಆಗದಿರುವುದರಿಂದ ಬಿಲ್ ಪಾವತಿ ಮಾಡಲು ಸಾಧ್ಯವಿಲ್ಲವೆಂದು ಗುತ್ತಿಗೆದಾರರಿಗೆ ಖಡಕ್ಕಾಗಿ ತಿಳಿಸಿದರು.
ರಸ್ತೆ ಕಾಮಗಾರಿಗೆ ಬಳಕೆ ಮಾಡಿರುವ ಮರಳಿನ ಗುಣಮಟ್ಟ ಸರಿಯಿಲ್ಲ, ಫಿಲ್ಟರ್ ಮರಳು ಬಳಕೆ ಮಾಡುವಾಗ ಅದರಲ್ಲಿನ ಮಣ್ಣನ್ನು ಬೇರ್ಪಡಿಸಿ ಕಾಮಗಾರಿಗೆ ಬಳಕೆ ಮಾಡಬೇಕಾಗಿತ್ತು. ಕಳಪೆ ಮರಳು ಬಳಕೆಯಿಂದ ರಸ್ತೆಗಳ ಗುಣಮಟ್ಟ ಹಾಳಾಗಿದೆ ಎಂದು ಅಭಿಪ್ರಾಯಪಟ್ಟರು.
ಡಿಎಂಎನಿಂದ ವರದಿ: ಕಾಮಗಾರಿ ನಡೆಯುವಾಗ ನಗರಸಭೆಯ ಎಂಜನಿಯರ್ಗಳು, ನಗರಾಭಿವೃದ್ಧಿ ಕೋಶದ ನಿರ್ದೇಶಕರು ಗುಣಮಟ್ಟದ ಬಗ್ಗೆ ನಿಗಾ ವಹಿಸಬೇಕಾಗಿತ್ತು. ಗುತ್ತಿಗೆದಾರರ ಜತೆಗೆ ಅಧಿಕಾರಿಗಳು ಸಹ ತಪ್ಪು ಮಾಡಿದ್ದಾರೆ. ಪೌರಾಡಳಿತ ನಿರ್ದೇಶನಾಲಯದ ತಾಂತ್ರಿಕ ಅಧಿಕಾರಿಗಳ ಮೂಲಕ ವರದಿ ತರಿಸಿಕೊಂಡು ಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕೋಟೆ ಪ್ರದೇಶದಲ್ಲಿ ರಸ್ತೆಗಳ ಪರಿಶೀಲನೆ ನಂತರ 35ನೇ ವಾರ್ಡಿಗೆ ತೆರಳಿ ಅಲ್ಲೂ ಕಾಮಗಾರಿಗಳ ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಗಳು, ರಸ್ತೆಗಳಿಗೆ ಬಳಕೆ ಮಾಡುತ್ತಿರುವ ಮರಳು ಪರಿಶೀಲಿಸಿ, ಮಣ್ಣಿನ ಅಂಶ ಹೆಚ್ಚಾಗಿರುವುದಕ್ಕೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾದರು.
ಕಳಪೆ ಕಾಮಗಾರಿಯನ್ನು ಸರಿಪಡಿಸಬೇಕು, ಅಲ್ಲಿಯವರೆಗೆ ತಾವು 1.40 ಕೋಟಿ ರು ಬಿಲಲ್ಪಾವತಿಗಾಗಿ ಸಲ್ಲಿಸಿರುವ ಮನವಿ ಪರಿಗಣಿಸುವುದಿಲ್ಲ. ಮತ್ತೊಮ್ಮೆ ನಾನೇ ಖುದ್ಧಾಗಿ ಕಾಮಗಾರಿ ವೀಕ್ಷಣೆ ಮಾಡಿ ಹಣ ಪಾವತಿ ಮಾಡುವೆ ಎಂದು ಗುತ್ತಿಗೆದಾರ ರೆಡ್ಡಿಯವರಿಗೆ ತಿಳಿಸಿದರು.
 ಈ ಸಂದರ್ಭದಲ್ಲಿ ನಗರಸಭೆ 3ನೇ ವಾರ್ಡಿನ ಸದಸ್ಯ ಮುಬಾರಕ್, ಆಯುಕ್ತ ಜಗದೀಶ್, ಎಇಇ ಕೊಟ್ರೇಶ್, ನಗರಾಭಿವೃದ್ಧಿ ಕೋಶದ ನಿರ್ದೇಶಕ ಮರ್ಚೆಂಟಟ್ಸರ್ವರ್ ಹಾಗೂ ತಾಂತ್ರಿಕ ಸಿಬ್ಬಂದಿ ಇದ್ದರು.



ಚನ್ನಾಗಿ ಕೆಲಸ ಮಾಡಬೇಕೆಂಬ ಕಾರಣಕ್ಕೆ ಮುಂಗಡವಾಗಿ 3.35 ಕೋಟಿ ರು.ಮುಂಗಡವಾಗಿ ಹಣ ನೀಡಿದ್ದೇನೆ, ಗುಣಮಟ್ಟದ ಕೆಲಸ ಮಾಡುವಂತೆ ಮೊದಲೇ ಸೂಚಿಸಿದ್ದೇನೆ, ಬಾಕಿ ಬಿಲ್ ಪಾವತಿ ಮಾಡುವಂತೆ ಕೇಳಿದ್ದೀರಾ, ಹಣ ನೀಡುವುದಕ್ಕೆ ನಮ್ಮ ತಕರಾರು ಏನೂ ಇಲ್ಲ. ಆದರೆ, ಗುಣಮಟ್ಟದ ಕೆಲಸ ಆಗದಿರುವುದರಿಂದ ಬಿಲ್ ಪಾವತಿ ಮಾಡಲು ಸಾಧ್ಯವಿಲ್ಲ
ಟಿ  ಡಿ.ಕೆ. ರವಿ ,ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.