ಕೋಲಾರ

ರು. 63 ಕೋಟಿ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರ ಪ್ರತಿಭಟನೆ

Published On :

ಕೋಲಾರ: ಲೋಕೋಪಯೋಗಿ, ಸಣ್ಣ ನೀರಾವರಿ, ಜಿಪಂ ಹಾಗೂ ನಗರಸಭೆಯಿಂದ ಬಾಕಿ ಬರಬೇಕಾದ 63 ಕೋಟಿ ರು.ಗಳನ್ನು ಕೂಡಲೇ ಪಾವತಿಗೆ ಒತ್ತಾಯಿಸಿ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ ನಡೆಯಿತು.
ಗುತ್ತಿಗೆದಾರರು ಸಂಘದ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದು ಲೋಕೋಪಯೋಗಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ. ಕೃಷ್ಣಾರೆಡ್ಡಿ, ಲೋಕೋಪಯೋಗಿ ಇಲಾಖೆಯಿಂದ 35 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ 6 ಕೋಟಿ, ಪಿ.ಎಂ.ಜಿ.ಎಸ್.ವೈ ವಿಭಾಗದಿಂದ 10 ಕೋಟಿ, ಜಿಪಂ ಎಂಜನಿಯರಿಂಗ್ ವಿಭಾಗದಿಂದ 10 ಕೋಟಿ ಹಾಗೂ ನಗರಸಭೆಯಿಂದ 2 ಕೋಟಿ ರು.ಬಾಕಿ ಬರಬೇಕಾಗಿದೆ ಎಂದು ವಿವರಿಸಿದರು.
ಅನೇಕ ಬಾರಿ ಅಧಿಕಾರಿಗಳಿಗೆ ಗುತ್ತಿಗೆದಾರರ ಸಂಕಷ್ಟ ಹೇಳಿಕೊಂಡರು ಪ್ರಯೋಜನವಾಗಿಲ್ಲ. ಸಾಲ ಮಾಡಿ ಕಾಮಗಾರಿಗಳನ್ನು ಮುಗಿಸಿಕೊಟ್ಟಿದ್ದರೂ ಬಾಕಿ ಹಣ ಪಾವತಿಗೆ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದು ದೂರಿದರು.
ಪ್ರತಿಭಟನಾಕಾರರು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ನುಗ್ಗಲು ಯತ್ನಿಸಿದಾಗ, ಪರಿಸ್ಥಿತಿ ಅರಿತ ಇಇ ಮುನಿ ಆಂಜನಪ್ಪ ಪ್ರತಿಭಟನಾಕಾರರ ಬಳಿಗೆ ಬಂದು ಸರ್ಕಾರಕ್ಕೆ ಈಗಾಗಲೇ ಬಾಕಿ ಬಿಲಲ್ಗಳ ಬಗ್ಗೆ ವರದಿ ಸಲ್ಲಿಸಲಾಗಿದೆ,
 ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ಬಾಕಿ ಬಿಲ್ ಪಾವತಿ ಮಾಡುವುದಾಗಿ ಭರವಸೆ ನೀಡಿದರು.
ಇದರಿಂದ ತೃಪ್ತಿಗೊಳ್ಳದ ಗುತ್ತಿಗೆದಾರರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ತಿಳಿಸುವಂತೆ ಪಟ್ಟು ಹಿಡಿದರು.
 ಇದಕ್ಕೆ ಮಣಿದ ಇಇ ದೂರವಾಣಿ ಮುಖೇನ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಗುತ್ತಿಗೆದಾರರ ಪ್ರತಿಭಟನೆ ವಿಷಯ ತಿಳಿಸಿದಾಗ, ಕೂಡಲೇ ಮತ್ತೊಂದು ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದರು.
ಪ್ರತಿಭಟನೆಯಲ್ಲಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಕೆ.ವಿ. ಸತ್ಯನಾರಾಯಣರೆಡ್ಡಿ, ಕಾರ್ಯದರ್ಶಿ ಬಸವರಾಜ್, ಜಂಟಿ ಕಾರ್ಯದರ್ಶಿ ಎತ್.ಎಸ್. ಸೋಮೇಶ್, ಖಜಾಂಚಿ ಪ್ರಸನ್ನಕುಮಾರ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವಕ್ಕಲೇರಿ ರಾಮು, ಬಣಕನಹಳ್ಳಿ ನಟರಾಜು, ವಾನರಾಶಿ ಬಾಲಕೃಷ್ಣಪ್ಪ, ಮೆಹಬೂಬ್ ಖಾನ್, ಗುಂಡಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.