ರಾಜ್ಯಪಾಲ, ಸಿಎಂ ಆಗಮನಕ್ಕೆ ಬಂದ್ ಸ್ವಾಗತ
ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನಲ್ಲಿ ಸುಮಾರು 90 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲು ಜಿಲ್ಲೆಗೆ ಜ.31 ರಂದು ಆಗಮಿಸುತ್ತಿರುವ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಜನರು ಬಂದ್ ಬಿಸಿ ಮುಟ್ಟಿಸುತ್ತಿದ್ದಾರೆ.
ಅಂತರ್ಜಲ ಮಟ್ಟ ಕುಸಿದು ತೀವ್ರ ನೀರಿನ ಸಮಸ್ಯೆ ಅನುಭವಿಸುತ್ತಿರುವ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಇಲ್ಲಿನ ಜನರ ಆಶಯದಂತೆ ಡಾ. ಪರಮಶಿವಯ್ಯನವರ ವರದಿ ಅನುಷ್ಠಾನಗೊಳಿಸುವುದರ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ಭರವಸೆ ನೀಡಬೇಕೆಂದು ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಜ.31 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಬಂದ್ಗೆ ಕರೆ ನೀಡಿದೆ.
ಪಕ್ಷಾತೀತ, ಜಾತ್ಯತೀತವಾಗಿ ರೈತ, ದಲಿತ, ಮಹಿಳಾ, ವಿದ್ಯಾರ್ಥಿ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಈ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದು ಈಗಾಗಲೇ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಂದ್ ಯಶಸ್ವಿಯಾಗಿ ನಡೆಸಬೇಕೆಂಬ ನಿರ್ಣಯಕ್ಕೆ ಅನುಗುಣವಾಗಿ ಸಿದ್ಧತೆ ಕೈಗೊಳ್ಳಲಾಗಿದೆ. ಈ ನಡುವೆ ಜಿಲ್ಲಾಡಳಿತ ಹಾಗೂ ಜಿಪಂ ಸಹಯೋಗದೊಂದಿಗೆ ಗೌರಿಬಿದನೂರು ಪಟ್ಟಣದಲ್ಲಿ 6 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಎಚ್. ನರಸಿಂಹಯ್ಯ ಕಲಾ ಭವನ ಉದ್ಘಾಟನೆ ಸೇರಿದಂತೆ ಸುಮಾರು 27 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಸುಮಾರು 67 ಕೋಟಿ ರು. ವೆಚ್ಚದ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು, ಇದರಲ್ಲಿ ರಾಜ್ಯಪಾಲ ಡಾ. ಹಂಸರಾಜ್ ಭಾರದ್ವಾಜ್, ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಯಿಲಿ, ಕೆ.ಎಚ್. ಮುನಿಯಪ್ಪ, ವಿಧಾನಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ರಾಜ್ಯ ಸಚಿವರು, ಜಿಲ್ಲೆಯ ಶಾಸಕರು ಭಾಗವಹಿಸಲಿದ್ದಾರೆ.
ಕಲಾಭವನ ಉದ್ಘಾಟನೆ, ಕುಡುಮಲಗುಂಟೆ ಕೈಗಾರಿಕೆ ಪ್ರದೇಶ ಸುಮಾರು 40 ಎಕರೆ ಜಾಗದಲ್ಲಿ ಎರಡನೇ ಹಂತದ ಕಾಮಗಾರಿ ಉದ್ಘಾಟನೆ, ಸುಮಾರು 1 ಕೋಟಿ 68 ಲಕ್ಷ ರು. ವೆಚ್ಚದ ಸ್ಟೇಡಿಯಂ, ಅಲಕಾಪುರದ ಕಸ್ತೂರಿಬಾ ಗಾಂಧಿ ಬಾಲಕಿಯರ ವಸತಿ ನಿಲಯ, ತಾಪಂ ಸಭಾಂಗಣ, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯುತ್ತಿರುವುದು ಜನರು ಸಂಭ್ರಮಪಡುವ ವಿಷಯವಾಗಿದ್ದರೂ ಅದೇ ದಿನ ಬಂದ್ ಮೂಲಕ ಇಲ್ಲಿನ ಜನರ ಅಳಲನ್ನು ತೋಡಿಕೊಳ್ಳಬೇಕಾಗಿ ಬಂದಿರುವುದು ವಿಷಾದವೇ ಸರಿ.
ಸ್ಪಷ್ಟತೆ ನೀಡಲು ಆಗ್ರಹ: ಪ್ರಾರಂಭದಲ್ಲಿ ಜನರ ಬೇಡಿಕೆಯಂತೆ ಡಾ. ಪರಮಶಿವಯ್ಯನವರ ವರದಿ ಅನುಷ್ಠಾನಗೊಳಿಸುವ ಭರವಸೆ ನೀಡಿದ್ದರೂ ಕೆಲಸದಲ್ಲಿ ಸಮರ್ಪಕ ರೀತಿಯ ಬೆಳವಣಿಗೆಗಳು ಕಂಡು ಬರುತ್ತಿಲ್ಲ. ಇದೀಗ 8,323 ಕೋಟಿ ರು. ವೆಚ್ಚದ ಎತ್ತಿನಹೊಳೆ ಯೋಜನೆ ಜಾರಿಗೆ ತಂದು ನೀರಾವರಿ ಸೌಲಭ್ಯ ಒದಗಿಸಲು ಮುಂದಾಗುತ್ತಿರುವುದರ ಬಗ್ಗೆ ಹೇಳುವುದರಲ್ಲೂ ಗೊಂದಲ ಮೂಡಿಸಲಾಗುತ್ತಿದೆ.
ಮನವಿಗೆ ಬೆಲೆಯಿಲ್ಲ: ಡಿಪಿಆರ್ ಇಲ್ಲದೇ, ಟೆಂಡರ್ಗೆ ಅನುಮೋದನೆ ಪಡೆಯದೇ, ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆಯದೇ ಕೇವಲ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿರವರ ಒತ್ತಡಕ್ಕೆ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದನ್ನು ವಿರೋಧಿಸಿ ಕರೆ ನೀಡಿರುವ ಬಂದ್ನ್ನು ಹಿಂಪಡೆಯಬೇಕೆಂದು ವಿಧಾನಸಭೆ ಉಪಾಧ್ಯಕ್ಷ, ಜಿಲ್ಲೆಯ ಶಾಸಕರು ಮನವಿ ಮಾಡಿಕೊಂಡರೂ ಶಾಶ್ವತ ನೀರಾವರಿ ಹೋರಾಟ ಸಮಿತಿ ಕಿಮ್ಮತ್ತು ನೀಡಿಲ್ಲ.
ಪ್ರತಿ ಸಲ ಸ್ವಾರ್ಥ ರಾಜಕಾರಣ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿರುವ ಮುಖಂಡರು, ಜ.31 ರಂದು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರ ಗಮನ ಸೆಳೆಯಲು ಬಂದ್ಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

