ಕೋಲಾರ

ಜನಪ್ರತಿನಿಧಿಗಳ ಪ್ರತಿಕೃತಿ ದಹನ

Published On :

ಕೋಲಾರ: ಬಯಲು ಸೀಮೆ ಜಿಲ್ಲೆಗಳಿಗೆ ಡಾ. ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ನಗರದಲ್ಲಿ ಜನಪ್ರತಿನಿಧಿಗಳ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಲಾಯಿತು.
ರೈತ ಸಂಘದ ಕಾರ್ಯಕರ್ತರು ಇಲ್ಲಿನ ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸದೆ ಜನಪ್ರತಿನಿಧಿಗಳು ದಿನಕ್ಕೊಂದು ಸುಳ್ಳು ಹೇಳಿಕೆ, ಭರವಸೆ ನೀಡಿ ಜನರನ್ನು ಯಾಮಾರಿಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಪ್ರಬಲವಾದ ಒತ್ತಡ ತಂದು ಜನರಿಗೆ ಶುದ್ಧವಾದ ಕುಡಿಯುವ ನೀರು ಪೂರೈಸಲು ಮತ್ತು ಕೃಷಿಗೆ ನೀರುಣಿಸಲು ವಿಫಲರಾಗಿದ್ದಾರೆಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ ಮಾತನಾಡಿ, ದಶಕದಿಂದ ನಿರಂತರ ಹೋರಾಟಗಳು, ಪಾದಯಾತ್ರೆಗಳು, ನಡೆಸಿ ಸರ್ಕಾರದ ಗಮನ ಸೆಳೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಚುನಾವಣೆ ಸಂದರ್ಭದಲ್ಲಿ ವೀರಾವೇಶದಿಂದ ಮಾತನಾಡಿ ಓಟು ಗಿಟ್ಟಿಸಿಕೊಂಡಿರುವ ಶಾಸಕರು, ಕೇಂದ್ರ ಸಚಿವರು ವಿಧಾನಸಭೆಯಲ್ಲಿ ನೀರಿನ ಬಗ್ಗೆ ಚಕಾರ ಎತ್ತದೆ ಮತದಾರರಿಗೆ ವಂಚಿಸಿದ್ದಾರೆಂದು ದೂರಿದರು.
ಎತ್ತಿನ ಹೊಳೆ ಯೋಜನೆಯಿಂದ ಕೋಲಾರಕ್ಕೆ ಉಪಯೋಗವಿಲ್ಲ, ಪರಮಶಿವಯ್ಯ ವರದಿಯ ಬಗ್ಗೆ ತಾಂತ್ರಿಕ ವರದಿ ನೀಡುವಂತೆ ಸರ್ಕಾರ ನೇಮಿಸಿರುವ ಕೆ.ಸಿ. ರೆಡ್ಡಿ ಮತ್ತು ದೇಸಾಯಿಯವರು ಯೋಜನೆ ಅನುಷ್ಠಾನಕ್ಕೆ ಬರದಂತೆ ಕುತಂತ್ರ ನಡೆಸುತ್ತಿದ್ದು ಕೂಡಲೇ ಇವರಿಬ್ಬರನ್ನು ಸಮಿತಿಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪನವರು ನೀರಿಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿಲ್ಲ, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ಕುರಿತು ಹೆಚ್ಚಿನ ಮುತುವರ್ಜಿ ತೋರುತ್ತಿದ್ದಾರೆ. ಶಾಸಕರು ಹಾಗೂ ವಿಧಾನಪರಿಷತ್ಸ್‌ದಸ್ಯರು ಸಹ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದರಿಂದ ಕೂಡಲೇ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕು ಹಾಗೂ ಹೋರಾಟದಲ್ಲಿ ಭಾಗವಹಿಸಬೇಕೆಂದು ಆಗ್ರಹಿಸಿದರು.
ಜನಪ್ರತಿನಿಧಿಗಳ ಭಾವಚಿತ್ರವಿರುವ ಫ್ಲೆಕ್ಸ್‌ಗಳ ಅಣಕು ಶವಯಾತ್ರೆ ನಂತರ ದಹನ ಮಾಡಲಾಯಿತು. ಮಾನವ ಸರಪಳಿಯಿಂದಾಗಿ ಮೆಕ್ಕೆ ವೃತ್ತದಲ್ಲಿ ಕೆಲ ನಿಮಿಷ ಸಂಚಾರಕ್ಕೆ ಅಡಚಣೆ ಉಂಟಾಯಿತು. ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಪ್ರಧಾನ ಕಾರ್ಯದರ್ಶಿ ಮೂರಾಂಡಹಳ್ಳಿ ಶಿವಾರೆಡ್ಡಿ, ಹಸಿರು ಸೇನೆ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ರಂಜಿತ್ ಕುಮಾರ್, ಶೆಟ್ಟಿಗಾನಹಳ್ಳಿ ರಾಜೇಶ್, ಹೂಹಳ್ಳಿ ನಾಗರಾಜ್, ಮಾಸ್ತಿ ಬಾಬು, ಮರಗಲ ಶ್ರೀನಿವಾಸ್, ತೆರ್ನಹಳ್ಳಿ ಆಂಜಿನಪ್ಪ, ಗೊಟ್ಟುಕುಂಟೆ ಕೃಷ್ಣ, ಬಂಗಾರಿ ಮಂಜು, ಕೆಂಬೋಡಿ ಕೃಷ್ಣೇಗೌಡ, ಸಾಗರ್, ವಿಕ್ರಮ್, ನರಸಾಪುರ ಪುರುಷೋತ್ತಮ್, ಕ್ಯಾಸಂಬಳ್ಳಿ ಪ್ರತಾಪ್, ಕಾರಿ ವಿಶ್ವನಾಥ್, ಆಚಂಪಲ್ಲಿ ಗಂಗಾಧರ್, ಭಕ್ತನ್, ರಾಮು, ರಂಜಿತ್, ಅಮರನಾರಾಯಣಸ್ವಾಮಿ, ನೀಲಕಂಠಪುರ ಮುನೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.