ಕೋಲಾರ

ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ

Published On :

ಗೌರಿಬಿದನೂರು: ಡಾ.ಎಚ್. ನರಸಿಂಹಯ್ಯನವರ ತತ್ವ ಸಿದ್ಧಾಂತಗಳನ್ನು ಯುವ ಪೀಳಿಗೆ ಅಳವಡಿಸಿಕೊಂಡು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಹೊಸೂರಿನ ಡಾ.ಎಚ್‌ಎನ್ ಹೈಸ್ಕೂಲ್‌ನಲ್ಲಿ ಡಾ.ಎಚ್. ನರಸಿಂಹಯ್ಯನವರ 9ನೇ ಪುಣ್ಯಸ್ಮರಣೆ, ಗಾಂಧಿ ನೆಹರು ಎಚ್. ನರಸಿಂಹಯ್ಯ ಗ್ರಾಮೀಣಾಭಿವೃದ್ಧಿ ಕೇಂದ್ರದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗೌರಿಬಿದನೂರಿನ ವಿ.ವಿ. ಪುರಂನಲ್ಲಿ ಸುಮಾರು 6 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಡಾ.ಎಚ್. ನರಸಿಂಹಯ್ಯ ಕಲಾಭವನ ಉದ್ಘಾಟಿಸಿ ಮಾತನಾಡಿದರು.
ಬದುಕಿನಲ್ಲಿ ನಂಬಿಕೆ ಇರಬೇಕು ಆದರೆ ಮೂಢನಂಬಿಕೆ ಕಂದಾಚಾರ ಇರಬಾರದು. ವಿದ್ಯಾವಂತರೂ ಮೂಢನಂಬಿಕೆ ಕಂದಾಚಾರವನ್ನು ಜೀವಂತವಾಗಿಸಿದ್ದಾರೆ. ಡಾ.ಎಚ್. ನರಸಿಂಹನವರು ಮೂಢನಂಬಿಕೆ ಒಪ್ಪುತ್ತಿರಲಿಲ್ಲ ಕಾಯಕವೇ ಕೈಲಾಸ ಎಂದು ಅರಿತಿದ್ದರು. ಶಿಕ್ಷಣಕ್ಕಾಗಿ ಬೆಂಗಳೂರಿಗೆ ನಡೆದು ಹೋಗಿ ಗಾಂಧಿತತ್ವ ಆದರ್ಶ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡವರು ಎಂದರು.
ಕಾಳಿದಾಸ ಹಾಸ್ಟೆಲ್‌ಗೆ ಭೇಟಿ: ತಾಲೂಕು ಕುರುಬರ ಸಂಘದ ಹಾಸ್ಟೆಲ್‌ಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ, ಶಾಸಕರ ನಿಧಿಯಿಂದ ಹಾಗೂ ಸಂಸದರ ನಿಧಿಯಿಂದ 10ಲಕ್ಷರು.ಗಳನ್ನು ಸಮುದಾಯ ಭವನ ನಿರ್ಮಾಣಕ್ಕೆ ನೀಡವುದಾಗಿ ತಿಳಿಸಿದರು.
ಸಂಗೊಳ್ಳಿರಾಯಣ್ಣ ಪುತ್ತಳಿ ಅನಾವರಣ: ಪಟ್ಟಣದ ಬೆಂಗಳೂರು ಮತ್ತು ಹಿಂದೂಪುರ ರಸ್ತೆಯ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ನಿರ್ಮಿಸಿದ್ದ ಸಂಗೊಳ್ಳಿರಾಯಣ್ಣ ಪುತ್ತಳಿಯನ್ನು ಇದೇ ಸಂದರ್ಭದಲ್ಲಿ ಅನಾವಣಗೊಳಿಸಿದರು.
ಕೇಂದ್ರ ಸಚಿವ ಡಾ.ಎಂ. ವೀರಪ್ಪಮೊಯ್ಲಿ ಮಾತನಾಡಿ, ಡಾ.ಎಚ್. ನರಸಿಂಹಯ್ಯನವರು ಗಾಂಧಿ ಅನುಯಾಯಿ. ಅವರು ಶಿಕ್ಷಣ ಕ್ರಾಂತಿಯ ಜೊತೆಗೆ ಸಾಹಿತ್ಯ, ಕಲೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಿದ್ದರು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರು 4ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂದು ವರದಿ ನೀಡಿದ್ದರು. ಅದರಂತೆ ನಾನು ಜಾರಿಗೆ ತಂದೆ ಎಂದು ತಿಳಿಸಿದರು.
ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತ ಮಾಡಿದರು. ಸಚಿವೆ ಉಮಾಶ್ರಿ ಮಾತನಾಡಿದರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಿಡ್ಲಘಟ್ಟ ಶಾಸಕ ರಾಜಣ್ಣ, ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್, ಎ.ಎಚ್. ರಾಮರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.