ಕೋಲಾರ

ಶಾಶ್ವತ ನೀರಾವರಿ: ಜಿಲ್ಲಾ ಬಂದ್ ಸಂಪೂರ್ಣ

Published On :

ಗೌರಿಬಿದನೂರು: ಬಯಲುಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕಾರಣ ಮಾಡುತ್ತಿಲ್ಲ. ಬದಲಿಗೆ ಎತ್ತಿನಹೊಳೆ ಯೋಜನೆಯ ಮೂಲಕ ನೀರನ್ನು ಒದಗಿಸಲು ಮುಂದಾಗಿದೆ. ಆದರೆ, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಶಾಶ್ವತ ನೀರಾವರಿ ಯೋಜನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಹೊರಟಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಅವರು ಗೌರಿಬದನೂರು ತಾಲೂಕಿನ ಸುಮಾರು 87 ಕೋಟಿ ರು.ಗಳ ಕಾಮಗಾರಿಗಳ ಉದ್ಘಾಟನೆ ಹಾಗೂ 27 ಕೋಟಿ ರು.ಗಳ ಶಂಕುಸ್ಥಾಪನೆ ನೆರವೇರಿಸಿದ ನಂತರ ಸಭೆಯಲ್ಲಿ ಮಾತನಾಡಿ, 22 ಟಿಎಂಸಿ ಕುಡಿಯುವ ನೀರನ್ನು ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸುವ ಎತ್ತಿನಹೊಳೆ ಯೋಜನೆ ಯೋಗ್ಯ ಕುಡಿಯುವ ನೀರಿನ ಯೋಜನೆಯಾಗಿದೆ. ಇದನ್ನು ಜಾರಿಗೆಗೆ ತರಲು ಕೇಂದ್ರ ಪರಿಸರ ಇಲಾಖೆಯಿಂದ ಮೊಯ್ಲಿಯವರು ಅನುಮತಿ ಕೊಡಿಸಿದ್ದಾರೆ ಎಂದರು.
ಎತ್ತಿನಹೊಳೆ ಯೋಜನೆಯಿಂದ ಸಿಗುವ ನೀರನ್ನು ಕೆರೆಗಳಿಗೆ ಹರಿಸಿ ಅದರ ಮೂಲಕ ಕುಡಿಯಲು ಉಪಯೋಗಿಸಿಕೊಳ್ಳಬಹುದು. ಇಂತಹ ಯೋಜನೆಗೆ ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರವೇ ಆಡಳಿತಾತ್ಮಕ ಅನುಮೋದನೆಯನ್ನು ನೀಡಿತ್ತು. ಟೆಂಡರ್ ಕರೆಯಲಾಗಿತ್ತು. ಆದರೆ, ಟೆಂಡರ್ ಎಸ್‌ಆರ್ ಬೆಲೆಗಿಂತ ಅತಿಹೆಚ್ಚು ಇದ್ದುದರಿಂದ ಮರುಟೆಂಡರ್ ಕರೆಯಲಾಗಿದ್ದು ಮುಂದಿನ ತಿಂಗಳು ಚಿಕ್ಕಬಳ್ಳಾಪುರದಲ್ಲಿಯೇ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ಈ ನಡುವೆ ಬಿಜೆಪಿ ಮುಖಂಡ ಮಾಜಿ ಮಂತ್ರಿ ಬಿ.ಎನ್.ಬಚ್ಚೇಗೌಡರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಎತ್ತಿನಹೊಳೆಯನ್ನು ವಿರೋಧಿಸುತ್ತಿದ್ದಾರೆ ಎಂದರು. ನೀರಾವರಿ ಯೋಜನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಜೆಡಿಎಸ್ ಮತ್ತು ಬಿಜೆಪಿ ಪ್ರಯತ್ನಿಸಿ, ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲಾ ಬಂದ್ ಗೆ ಕರೆನೀಡಿವೆ.ಆದರೂ ಗೌರಿಬಿದನೂರು ತಾಲೂಕಿನ ಜನರು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದು ಬೆಂಬಲಿಸಿರುವುದು ಶ್ಲಾಘನೀಯ ಎಂದ ಅವರು,ಎಲ್ಲಾ ವರ್ರ್ಗದ ಜನರ ಪರವಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ನೀರಾವರಿಗೆ ವಿರೋಧವಿಲ್ಲ; ಜಿ.ಎಸ್. ಪರಮಶಿವಯ್ಯನವರ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆಯನ್ನು ರಾಜ್ಯ ಸರ್ರ್ಕಾರ ವಿರೋಧಿಸಿಲ್ಲ ಹಾಗೂ ತಿರಸ್ಕರಿಸಿಯೂ ಇಲ್ಲ. ಈಗಾಗಲೇ ಇದರ ಸವಿಸ್ತಾರ ಯೋಜನಾ ವರದಿ ಡಿಪಿಆರ್ ಗಾಗಿ 50ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗಿದೆ. ಆ ವರದಿ ಬಂದನಂತರ ತಜ್ಞ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ಸಲಹೆ ಪಡೆದು ನಂತರ ಒಂದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಮಾತನಾಡಿ, ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ನೀರಾವರಿ ಕ್ಷೇತ್ರದಲ್ಲೂ ಅಭೂತಪೂರ್ವ ಕೊಡುಗೆ ನೀಡಿರುವುದನ್ನು ಗಮನಿಸಿ ಅವರ ಜನ್ಮಸ್ಥಳವಾದ ಮುದ್ದೇನಹಳ್ಳಿಯಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಉದ್ದೇಶಿಸಲಾಗಿದೆ. ಆದರೆ, ಇದಕ್ಕೆ ಕೆಲವರು ರಾಜಕೀಯ ಮಾಡಲು ವಿರೋಧಿಸುತ್ತಿದ್ದಾರೆ ಎಂದರು.
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ರೈತರಿಗೆ ನೀಡುತ್ತಿರುವ ವಿದ್ಯುತ್ತನ್ನು 5 ಗಂಟೆಯಿಂದ 7ಗಂಟೆಗೆ ನೀಡಲು ನಿರ್ಧರಿಸಲಾಗಿದೆ. ಕೇಂದ್ರಸರ್ಕಾರದ ಆರ್ಥಿಕ ಸಹಾಯದಿಂದ ಹೆಚ್ಚಿನ ವಿದ್ಯುತ್ತನ್ನು ಪಡೆಯಲು ತೀರ್ಮಾನಿಸಲಾಗಿದೆ ಎಂದರು.
ಗೌರಿಬಿದನೂರು ಶಾಸಕ ಹಾಗೂ ವಿಧಾಸಭಾ ಉಪಸಭಾಧ್ಯಕ್ಷ ಶಿವಶಂಕರರೆಡ್ಡಿ ದೂರದೃಷ್ಟಿಯಿರುವ ವ್ಯಕ್ತಿ ಅವರು ಗೌರಿಬಿದನೂರು ತಾಲೂಕಿನಲ್ಲಿ ಮಾಡುತ್ತಿರುವ ಅಭಿವೃದ್ಧಿಕಾರ್ಯಗಳನ್ನು ಗಮನಿಸಿದರೆ ಅವರೆಂತಹ ಕಳಕಳಿಯಿರುವ ರಾಜಕಾರಣಿ ಎಂಬುದು ಅರಿವಾಗುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ತಾಲೂಕಿನಲ್ಲಿ ಇನ್ನೂ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನಸೆಳೆದರು. ಶಾಸಕರಾದ ಡಾ.ಕೆ. ಸುಧಾಕರ್, ಎಂ. ರಾಜಣ್ಣ, ಜಿಪಂ ಅಧ್ಯಕ್ಷ ಚಿನ್ನಪ್ಪಯ್ಯ, ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಜಿಲ್ಲಾಧಿಕಾರಿ ಡಾ. ವಿಶಾಲ್, ಜಿಪಂ ಸಿಇಒ ನೀಲಾ ಮಂಜುನಾಥ್ ಉಪಸ್ಥಿತರಿದ್ದರು.
ಶಿಡ್ಲಘಟ್ಟದಲ್ಲಿ...
ಶಿಡ್ಲಘಟ್ಟ: ಡಾ.ಪರಮಶಿವಯ್ಯವರ ವರದಿ ಜಾರಿಗೆ ಒತ್ತಾಯಿಸಿ ಕರೆ ನೀಡಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಬಂದ್ ಸಂಪೂರ್ಣ ಯಶಸ್ವಿಯಾಗಿ ನೇರವೇರಿತು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಪರಮಶಿವಯ್ಯನವರ ವರದಿ ಜಾರಿಗೆ ಒತ್ತಾಯಿಸಿ ಕರೆ ನೀಡಿದ್ದ ಬಂದ್‌ಗೆ ಪಕ್ಷಾತೀತವಾಗಿ ಸೇರಿದ ಸಾರ್ವಜನಿಕರು ಸಹಕರಿಸಿದರು. ಬಂದ್ ಶಾಂತಿಯುತವಾಗಿ ನಡೆದು ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಬಂದ್ ಪ್ರಯುಕ್ತ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಚಿತ್ರಮಂದಿರಗಳು, ಅಂಗಡಿ ಮುಂಗಟ್ಟುಗಳನ್ನು ಸ್ಥಗಿತಗೊಳಿಸಲಾಗಿತ್ತು. ಬಸ್ ಸೌಲಭ್ಯವಿಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಎಲ್ಲ ಪಕ್ಷದ ನಾಯಕರು, ಸಾರ್ವಜನಿಕರು ಬೈಕ್‌ಗಳಲ್ಲಿ ಪರಮಶಿವಯ್ಯವನರ ವರದಿ ಜಾರಿಯಾಗಲಿ ಎಂದು ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಸುರೇಂದ್ರ ಗೌಡ ಮಾತನಾಡಿ, ಚುನಾವಣಾ ಸಮಯದಲ್ಲಿ ಕೆ.ಎಚ್. ಮುನಿಯಪ್ಪ, ವೀರಪ್ಪ ಮೊಯ್ಲಿ ಶಾಶ್ವತ ನೀರಾವರಿ ಬಗ್ಗೆ ಕೊಟ್ಟ ಮಾತನ್ನು ತಪ್ಪಿ ವಚನಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು. ರೈತ ಮುಂಖಡರಾದ ಬೈರೇಗೌಡ, ಹರೀಶ್, ಶ್ರೀನಿವಾಸ್, ಕೆಂಪರೆಡ್ಡಿ, ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ಎ. ರಾಮಚಂದ್ರಪ್ಪ, ಮಿಲ್ಟ್ರಿ ವೆಂಕಟರೋಣಪ್ಪ, ಶ್ರೀಧರ್, ರಮೇಶ್ ಬಾಯರಿ, ಜಿ.ಚಂದ್ರಶೇಖರ್, ಮುನಿವೆಂಕಟಪ್ಪ, ದಾಮೋದರ್, ಸದಾಶಿವ, ಸುಜಾತಮ್ಮ, ರತ್ನಯ್ಯ ಇದ್ದರು.
ಚಿಂತಾಮಣಿಯಲ್ಲಿ..
ಚಿಂತಾಮಣಿ: ಶಾಶ್ವತ ನೀರಾವರಿ ಯೋಜನೆ ಜಾರಿಗೆ ಹಾಗೂ ಜಿ.ಎಸ್. ಪರಮಶಿವಯ್ಯನವರ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲೆ ಬಂದ್‌ಹಿನ್ನೆಲೆಯಲ್ಲಿ ಚಿಂತಾಮಣಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.  ಬೆಳಗಿನಿಂದಲೇ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಪ್ರವಾಸಿ ಮಂದಿರದಿಂದ ಜೋಡಿರಸ್ತೆ ಮುಖಾಂತರ ಪ್ರಮುಖ ರಸ್ತೆಗಳಲ್ಲಿ ನೂರಾರು ಪ್ರತಿಭಟನಾಗಾರರು ಬಂದ್‌ಗೆ ಸಹಕರಿಸುವಂತೆ ಕೋರಿ, ಶಾಶ್ವತ ನೀರಾವರಿಗೆ ಆಗ್ರಹಿಸಿ  ಘೋಷಣೆ ಕೂಗಿದರು.
ಗುಡಿಬಂಡೆಯಲ್ಲಿ
ಗುಡಿಬಂಡೆ: ಪರಮಶಿವಯ್ಯನವರ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕರೆ ನೀಡಿದ್ದ ಬಂದ್ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಪಟ್ಟಣದ ಅಂಗಡಿ ಮುಂಗಟುಗಳು ಮುಂಜಾನೆ 6 ಗಂಟೆಯಿಂದಲೇ ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು. ಸರ್ಕಾರಿ ಕಚೇರಿಗಳು ಶಾಲಾ ಕಾಲೇಜುಗಳು, ಬ್ಯಾಂಕ್‌ಗಳು ಮುಚ್ಚಿದ್ದವು. ಪ್ರತಿಭಟನಾಕಾರರು ಎತ್ತಿನಹೊಳೆ ಜಾರಿ ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಈ ವೇಳೆ ಮಾತನಾಡಿ, ಸಾವಿರಾರು ಅಡಿ ಕೊರೆದರೂ ನೀರು ದೊರೆಯುತ್ತಿಲ್ಲ. ತಜ್ಞ ಪರಮಶಿವಯ್ಯ ಪಶ್ಚಿಮ ಘಟ್ಟಗಳಲ್ಲಿ ಬೀಳುವ ಮಳೆ ನೀರಿನಲ್ಲಿ ಸ್ವಲ್ಪ ಭಾಗ ಕೆನಾಲ್‌ಗಳ ಮೂಲಕ ಬಯಲು ಸೀಮೆ ಜಿಲ್ಲೆಗಳ ಕಡೆ ಹರಿಸಿದರೆ ಶಾಶ್ವತ ನೀರಾವರಿ ಒದಗಿಸಬಹುದೆಂದುತಿಳಿಸಿದ್ದಾರೆ. ಆದರೆ  ಸರ್ಕಾರ ಈ ಯೋಜನೆಯನ್ನು ಜಾರಿ ಮಾಡಲು ಮೀನಮೇಷ ಎಣಿಸುತ್ತಿದ್ದು, ಶಾಶ್ವತ ನೀರಾವರಿ ಯೋಜನೆ ಮೂಲೆಗುಂಪು ಮಾಡುವ ಹುನ್ನಾರ ಹೂಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸಚಿವ ವೀರಪ್ಪ ಮೊಯ್ಲಿ ತಮ್ಮ ರಾಜಕೀಯ ಜೀವನಕ್ಕಾಗಿ ಎತ್ತಿನಹೊಳೆ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ಈ ಯೋಜನೆಯಿಂದ ಬಯಲು ಸೀಮೆ ಜಿಲ್ಲೆಗಳಿಗೆ ತಾತ್ಕಾಲಿಕವಾಗಿ ಸ್ವಲ್ಪ ನೀರು ಸಿಗಬಹುದು, ಶಾಶ್ವತವಾಗಿ ಸಿಗುವುದಿಲ್ಲ. ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪ್ರಯೋಜನಕ್ಕೆ ಬಾರದ ಯೋಜನೆಗಳನ್ನು ಜಾರಿ ಮಾಡುವದನ್ನು ಬಿಟ್ಟು ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಲಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವದಿ ಮುಷ್ಕರ ನಡೆಸಲಾಗುವುದೆಂದು ಸರ್ಕಾರಕ್ಕೆ ಎಚ್ಚರ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.