ಕೋಲಾರ

ಸುದ್ದಿ ಸಂಕ್ಷೇಪ

Published On :

ಶಿಕ್ಷಣಕ್ಕೆ ಹೆಚ್ಚಿನ ಅನುದಾನ: ಕಿಮ್ಮನೆ
ಮುಳಬಾಗಲು; ಸರ್ಕಾರ ಶಿಕ್ಷಣಕ್ಕೆ ಕೋಟ್ಯಂತರ ರು.ಗಳನ್ನು ವೆಚ್ಚಮಾಡುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಪಟ್ಟಣದ ಶಾರದ ವಿದ್ಯಾಪೀಠ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಬೆಳ್ಳಿಹಬ್ಬದ ಉದ್ಪಾಟನೆ ನೆರವೇರಿಸಿ ಮಾತನಾಡಿ, ಶಿಕ್ಷಕರ ಸಂಬಳ, ಸಾರಿಗೆ ಹಾಗೂ ನಿರ್ವಹಣೆಗೆ ವೆಚ್ಚವಾಗುತ್ತಿದೆ.  ಹಿಂದಿನ ದಿನಗಳಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇದ್ದಾಗ ಶಿಕ್ಷಣದಲ್ಲಿ ಮೌಲ್ಯಗಳಿತ್ತು, ಸಾಕ್ಷರತೆ ಪ್ರಮಾಣ ಜಾಸ್ತಿಯಾದಂತೆ ಮೌಲ್ಯಗಳು ಕಡಿಮೆಯಾಗಿದೆ ಎಂದರು.
ಶಾಸಕ ಕೊತ್ತೂರು ಜಿ. ಮಂಜುನಾಥ್ ಮಾತನಾಡಿ, ತಾಲೂಕನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಮಾದರಿ ತಾಲೂಕಾಗಿ ತಿದ್ದಲು ಎಲ್ಲ ಶಾಲೆಗಳಿಗೂ ಮೂಲ ಸೌಕರ್ಯ ಒದಗಿಸಲು ಕೋರಿದರು. ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿದರು. ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ, ಅಲಂಗೂರು ಶಿವಣ್ಣ, ಪದವಿಪೂರ್ವ ಶಿಕ್ಷಣ ಉಪನಿರ್ದೇಶಕ ಎಂ.ಬಿ. ದೊರೆಸ್ವಾಮಿ, ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ಎಸ್.ವಿ. ಪದ್ಮನಾಭ್, ಜೆ.ಜೆ. ನಾಗರಾಜ್, ಎಂ.ಸಿ. ದೇವರಾಜ್, ಲಕ್ಷ್ಮಿಪತಿ, ತಾಯಲೂರು ರಮೇಶ್,  ಪ್ರಾಂಶುಪಾಲ ಜೆ. ಪ್ರಕಾಶ್ ಇದ್ದರು.

ಹಾಲು ಉತ್ಪಾದಕರ ಸಂಘದ ಚುನಾವಣೆ
ಗುಡಿಬಂಡೆ: ತಾಲೂಕಿನ ವರ್ಲಕೊಂಡ ಹಾಗೂ ಭತ್ತಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕ ಮಂಡಳಿ ಸದಸ್ಯರ ಚುನಾವಣೆಗೆ ನಾಮಪತ್ರ ಫೆ.1 ರಂದು ವಿತರಿಸಲಾಗುವುದು.
ನಾಮಪತ್ರ ಸಲ್ಲಿಸಲು ಫೆ.8 ಕೊನೆಯ ದಿನವಾಗಿದೆ. ಚುನಾವಣೆ ಫೆ.16ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ಸಿ.ಎಚ್. ನಾಗಲಿಂಗಪ್ಪ ಹಾಗೂ ಭತ್ತಲಹಳ್ಳಿ ಚುನಾವಣಾಧಿಕಾರಿ ರಾಮಚಂದ್ರಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಭಗವತಿ ಜಾತ್ರಾ ಮಹೋತ್ಸವ
ಕೆಜಿಎಫ್: ನಗರದ ಶ್ರೀ ಭಗವತಿ ಕ್ಷೇತ್ರದ 11 ನೇ ವರ್ಷಿಕ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವ ಭಗವತು ಕ್ಷೇತ್ರದ ಸಂಸ್ಥಾಪಕ ಚಂದ್ರಶೇಖರ ಸ್ವಾಮೀಜಿ ಅವರು ವಿವಿಧ ರಾಜ್ಯಗಳಿಂದ ಬರುವ ಭಕ್ತಾಧಿಗಳ ಸಂಕಷ್ಟಗಳನ್ನು ಪರಿಹರಿಸಲು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಎಸ್. ರಾಜೇಂದ್ರನ್ ಮತ್ತು ಎಂ.ಭಕ್ತಾವತ್ಸಲಂ ಹೇಳಿದರು.
ಶ್ರೀ ಕ್ಷೇತ್ರದಲ್ಲಿ ಚಂದ್ರಶೇಖರ್ ಸ್ವಾಮೀಜಿ ಅವರು ಉತ್ತಮ ಸಮಾಜ ಸೇವೆ ನಿರ್ವಹಿಸುತ್ತಿದ್ದಾರೆ. ಶ್ರೀ ಭಗವತಿ ಅಮ್ಮನ್ ದೇವಾಲಯಕ್ಕೆ ಕಾಂಪೌಂಡ್ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಕಳೆದ 3 ದಿನಗಳ ಕಾಲ ನಡೆದ ಶ್ರೀ ಭಗವತಿ ಕ್ಷೇತ್ರದ ಜಾತ್ರಾ ಮಹೋತ್ಸವದಲ್ಲಿ ಕೇರಳ ರಾಜ್ಯದಿಂದ ಆಗಮಿಸಿದ ಅರ್ಚಕರಿಂದ ವಿಶೇಷ ಹೋಮ, ಹವನ ನಡೆಸಿದರು. ಭಗವತಿ ದೇವಿಯ ವಿಗ್ರಹ ವೇದ ಘೋಷೆಗಳ ನಡುವೆ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಕೆಜಿಎಫ್ ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಜಿಪಂ ಸದಸ್ಯರಾದ ಆ.ಮು. ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ಮುಖಂಡರಾದ ವಳ್ಳಲ್ ಮುನಿಸ್ವಾಮಿ, ನಗರಸಭಾ ಪೌರಾಯುಕ್ತ ವಿ.ಬಾಲಚಂದ್ರ, ನಗರಸಭಾ ಸದಸ್ಯರಾದ ಕೆ.ಸಿ.ಮುರಳಿ, ಮುರಗೇಶನ್, ಜಯಂತಿ ಶ್ರೀನಿವಾಸನ್, ರಮೇಶ್, ಮಾಣಿಕ್ಯಂ, ಕಾರ್ಯದರ್ಶಿ ನಂದಕುಮಾರ್ ಇದ್ದರು.
ಪ್ರತಿಭಟನೆ
ಬಂಗಾರಪೇಟೆ: ಕೂಡಲೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಅಂತರ್ಜಲ ಮಟ್ಟ ಕುಸಿದು ರೈತರ ಬದುಕು ಮೂರಾಬಟ್ಟೆಯಾಗಿದೆ. ರೈತರ ಸ್ಥಿತಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಗೊತ್ತಿದ್ದರೂ ಸುಳ್ಳು ಭರವಸೆ ನೀಡಿ ಜನರನ್ನು ಮರುಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ತೊರಗನದೊಡ್ಡಿ ಮಂಜುನಾಥ್, ಗೌರವ ಅಧ್ಯಕ್ಷ ಬಿ. ವೆಂಕಟೇಶ್, ರಾಮಚಂದ್ರ, ಲಕ್ಷ್ಮಣಗೌಡ, ನಾಗೇಶಗೌಡ, ಜಗದೀಶ್ ಇದ್ದರು.

'ರಕ್ತದಾನ ಮಾಡಿ ಪ್ರಾಣದಾತರಾಗಿ'

ಚಿಂತಾಮಣಿ: ರಕ್ತದಾನ ಮಾಡಿ ಪ್ರಾಣದಾತರಾಗಿ ಎಂದು ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ ಹೇಳಿದರು. ನಗರದ ರಾಯಲ್ ಡಿಗ್ರಿ ಕಾಲೇಜ್ ಹಾಗೂ ಚಿಕ್ಕಬಳ್ಳಾಪುರ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 51ನೇ ಜನ್ಮದಿನಾಚರಣೆ ಅಂಗವಾಗಿ ಪದವಿ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಕೃಷ್ಣಸ್ವಾಮಿ, ಎಲ್ಲ ಧಾನಗಳಿಗಿಂತಲೂ ರಕ್ತದಾನ ಶ್ರೇಷ್ಠ. ಸ್ವಾಮಿ ವಿವೇಕಾನಂದರ ಆದರ್ಶ ಮೈಗೂಡಿಸಿಕೊಂಡು ರಕ್ತದಾನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ವೃತ್ತ ನಿರೀಕ್ಷಕ ನಂಜಪ್ಪ ಮಾತನಾಡಿ, ಒಂದು ಹನಿ ರಕ್ತ ಒಂದು ಜೀವ ಉಳಿಸುತ್ತೆ, ಅದನ್ನು ದಾನ ಮಾಡಲು ಯಾರೂ ಹಿಂಜರಿಯಬಾರದೆಂದು ಯುವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಿನಿ ವಿಧಾನಸೌಧಕ್ಕೆ ಕಚೇರಿಗಳು ಸ್ಥಳಾಂತರಿಸಲು ಆಗ್ರಹಿಸಿ ಮನವಿ
ಬಂಗಾರಪೇಟೆ: ಕ್ಷೇತ್ರದ ಜನರ ಬಹುದಿನಗಳ ಕನಸಾಗಿದ್ದ ಮಿನಿ ವಿಧಾನಸೌಧ ಕಟ್ಟಡವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ ಮೂರು ತಿಂಗಳಾದರೂ ಕಚೇರಿಗಳು ಕಟ್ಟಡಕ್ಕೆ ಸ್ಥಳಾಂತರಗೊಳ್ಳದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಕೂಡಲೆ ಕಚೇರಿಗಳನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಆತ್ಮ ವಿಶ್ವಾಸ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ದೂರದ ಗ್ರಾಮಗಳಿಂದ ಕೆಲಸಗಳಿಗೆ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೆ ಹಾಲಿ ತಾಲೂಕು ಕಚೇರಿ ಬಸ್ ನಿಲ್ದಾಣದಿಂದ ಎರಡು ಕಿ.ಮೀ ದೂರವಿರುವುದರಿಂದ ತೊಂದರೆಯಾಗಿದೆ. ಒಂದೇ ಕಡೆ ಎಲ್ಲಾ ಕಚೇರಿಗಳು ಲಭ್ಯವಾದರೆ ಜನರಿಗೆ ಅನುಕೂಲವಾಗಲಿದೆ ಆದ್ದರಿಂದ ಕೂಡಲೆ ಮಿನಿ ವಿಧಾನಸೌಧ ಕಟ್ಟಡಕ್ಕೆ ತಾಲೂಕು ಆಡಳಿತ ಸ್ಥಳಾಂತರಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದರೆ ತಾಲೂಕು ಕಚೇರಿ ಮುಂದೆ ಹೋರಾಟ ಮಾಡುವುದಾಗಿ ಸಂಘಟನೆ ರಾಜ್ಯಧ್ಯಕ್ಷ ಸೀಸಂದ್ರ ಎಂ.ಎನ್. ಭಾರದ್ವಜ್ ತಹಸೀಲ್ದಾರ್‌ಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.


ಬಲಾತ್ಕಾರ ಯತ್ನ
ಟೇಕಲ್: ಶಾಲೆಗೆ ಹೊರಟಿದ್ದ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಬಲಾತ್ಕಾರಕ್ಕೆ ಪ್ರಯತ್ನಪಟ್ಟ ಘಟನೆ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕ್ಷೇತ್ರೇನ ಹಳ್ಳಿಯಲ್ಲಿ ನಡೆದಿದೆ.  ಗ್ರಾಮದ ಸುಕನ್ಯಾ(15)(ಹೆಸರು ಬದಲಾಯಿಸಲಾಗಿದೆ) ಎಂದಿನಂತೆ ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಪ್ರೌಢಶಾಲೆಗೆ ಹೋಗಲು ಬಸ್ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದಾಗ ಕ್ಷೇತ್ರೇನಹಳ್ಳಿಯ ಮಹೆಂದ್ರ(24) ಆಕೆಯನ್ನು ಅಡ್ಡಗಟ್ಟಿ ಪಕ್ಕದಲ್ಲೇ ಇದ್ದ ತಮ್ಮಣ್ಣನ ನೀಲಗಿರಿ ತೋಪಿನಲ್ಲಿ ಎಳೆದೊಯ್ದು ಬಲಾತ್ಕಾರ ಮಾಡಲು ಪ್ರಯತ್ನ ಪಟ್ಟಾಗ ಆಕೆ ಕಿರುಚಿಕೊಂಡಿದ್ದಾಳೆ. ಇದರಿಂದ ನೆರವಿಗೆ ಬಂದ ಶ್ರೀನಿವಾಸ್ ಮತ್ತು ಗಣೇಶ್ ಎಂಬವರು ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.  ವಿದ್ಯಾರ್ಥಿನಿಗೆ ಸಣ್ಣಪುಟ್ಟ ಗಾಯವಾಗಿದ್ದು ಮಹೇಂದ್ರ ತಲೆಮರೆಸಿಕೊಂಡಿದ್ದಾನೆ. ಮಾಸ್ತಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೆ.3ರಿಂದ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ
ಕೋಲಾರ: ಜಿಲ್ಲೆಯಾದ್ಯಂತ ಎಸ್‌ಎಸ್‌ಎಲ್‌ಸಿ 2ನೇ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಫೆ.3 ರಿಂದ ಇಲಾಖೆ ಸೂಚಿಸಿರುವ ನಿಗಧಿತ ವೇಳಾಪಟ್ಟಿಯಂತೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವಿ. ಪದ್ಮನಾಭ್ ಸೂಚಿಸಿದ್ದಾರೆ. ಫೆ.3ರಂದು ಪ್ರಥಮ ಭಾಷೆ-ಬೆಳಗ್ಗೆ 9.30ರಿಂದ 12.45 ಗಂಟೆವರೆಗೂ,  ಫೆ.4ರಂದು ಗಣಿತ 9.30 ರಿಂದ ಮಧ್ಯಾಹ್ನ 12.45ರವರೆಗೂ, ಫೆ.5 ರಂದು ದ್ವಿತೀಯ ಭಾಷೆ 9.30ರಿಂದ 12.15ರವರೆಗೂ,  ಫೆ.6 ರಂದು ಸಮಾಜ ವಿಜ್ಞಾನ 9.30ರಿಂದ12.45ರವರೆಗೂ, ಫೆ.7ರಂದು ತೃತೀಯ ಭಾಷೆ ಬೆಳಗ್ಗೆ 9.30 ರಿಂದ 12.15ರವರೆಗೂ ಹಾಗೂ ಫೆ.8 ರಂದು ವಿಜ್ಞಾನ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.45ರವರೆಗೂ ಪರೀಕ್ಷೆಗಳನ್ನು ನಡೆಸಲು ತಿಳಿಸಿದ್ದಾರೆ. ಫಲಿತಾಂಶವನ್ನು ಕ್ರೋಢೀಕರಿಸಿ ಫೆ.12ರೊಳಗೆ ಅಂಕಿ ಅಂಶಗಳ ಸಾಫ್ಟ್ ಮತ್ತು ಹಾರ್ಡ್ ಕಾಪಿಗಳನ್ನು ಉಪನಿರ್ದೇಶಕರ ಕಚೇರಿಗೆ ತಲುಪಿಸಲು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.