ವೃತ್ತಿ ಧರ್ಮ ಪಾಲಿಸಿ: ಮುನಿಯಪ್ಪ
ಕೋಲಾರ: ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿರುವವರು ವೃತ್ತಿ ಧರ್ಮ ಪಾಲಿಸಿ ಇತರರಿಗೆ ಮಾದರಿ ಆಗಬೇಕೆಂದು ಕೇಂದ್ರ ಮಾಜಿ ಸಚಿವ, ಹಾಲಿ ಸಂಸದ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರಾದವರು ಅಸತ್ಯ ಬರೆದು ನಿಷ್ಠುರಕ್ಕೆ ಸಿಲುಕಬೇಡಿ, ಆದರೆ ಸತ್ಯ ಬರೆದರೆ ಭಗವಂತ ಮೆಚ್ಚುತ್ತಾನೆಂದು ಹೇಳಿದರು.
ಮಾಧ್ಯಮ ಪ್ರತಿನಿಧಿಗಳು ಸ್ವಾಭಿಮಾನದಿಂದ ಬದುಕಲು ಮೂಲ ಸೌಲಭ್ಯ ಅತ್ಯಗತ್ಯ. ರಾಜ್ಯ ಸರ್ಕಾರ ಮಾಸಾಶನ 3 ಸಾವಿರದಿಂದ 6 ಸಾವಿರಕ್ಕೇರಿಸಿದೆ. ಅದಷ್ಟು ಬೇಗನೆ ಮಾಸಾಶನ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನ್ಯಾಯ ದೊರಕಿಸಲು ಪ್ರಯತ್ನಿಸುವುದಾಗಿ ನುಡಿದರು. ಪತ್ರಕರ್ತರ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ದಿನಾಂಕ ನಿಗದಿ ಮಾಡುವುದಾಗಿ ತಿಳಿಸಿದ ಅವರು, ಸಮಸ್ಯೆಗಳ ಪಟ್ಟಿ ನೀಡುವಂತೆ ರಾಜ್ಯ ಸಂಘದ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಪತ್ರಕರ್ತರ ಭವನದ ಆವರಣದಲ್ಲಿ ಈಗಾಗಲೇ ದೈಹಿಕ ಆರೋಗ್ಯಕ್ಕಾಗಿ ಒಳ್ಳೆಯ ಕ್ರೀಡಾಂಗಣ ನಿರ್ಮಿಸಿರುವುದು ಶ್ಲಾಘನೀಯ, ಹಾಗೆಯೇ ಸಂಘದ ಬೇಡಿಕೆಯಾದ ಗ್ರಂಥಾಲಯ ನಿರ್ಮಾಣಕ್ಕೆ ತಮ್ಮ ಸಂಸದರ ನಿಧಿಯಿಂದ 5 ಲಕ್ಷ ರು. ನೀಡುವುದಾಗಿ ಭರವಸೆ ನೀಡಿದರು. ಉಳಿದಂತೆ ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್ 3 ಲಕ್ಷ ರು. ಹಾಗೂ ಉಳಿದ ಹಣವನ್ನು ಶಾಸಕ ವರ್ತೂರು ಪ್ರಕಾಶ್ ನೀಡುವರೆಂದರು. ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ಶಾಸಕ ವರ್ತೂರು ಪ್ರಕಾಶ್, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪತ್ರಕರ್ತರು ತಮ್ಮ ಸಮಸ್ಯೆಗಳನ್ನು ಹೇಳಿದ್ದರೆ ಕ್ಷಣಮಾತ್ರದಲ್ಲಿ ಪರಿಹರಿಸುತ್ತಿದ್ದರು ಎಂದರು.
ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಕ್ಕೂ ಹೈಕಮಾಂಡ್ ಕಡೆ ನೋಡುವಂತಾಗಿದೆ ಎಂದು ತಿಳಿಸಿ ಜಾಹೀರಾತು ನೀತಿ ಮತ್ತಿತರ ಸಮಸ್ಯೆಗಳ ಕುರಿತು ಸಿದ್ದರಾಮಯ್ಯ ಅವರ ಗಮನಕ್ಕೆ ತರುವ ಭರವಸೆ ನೀಡಿದರು. ಪತ್ರಕರ್ತರಿಗಾಗಿ ಜಮೀನು ಹುಡುಕಿ ನಿವೇಶನ ಹಂಚುವಂತೆ ಸಲಹೆ ನೀಡಿ, ರಾಜ್ಯಕ್ಕೆ ಮಾದರಿಯಾಗಿರುವ ಪತ್ರಕರ್ತರ ಸಂಘಕ್ಕೆ ಗ್ರಂಥಾಲಯಕ್ಕೆ ಕೇಳಿದಷ್ಟು ಅನುದಾನ ನೀಡುವ ಭರವಸೆ ನೀಡಿದರು. ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್, ಗ್ರಂಥಾಲಯ ನಿರ್ಮಾಣಕ್ಕೆ ಅನುದಾನದ ಭರವಸೆ ನೀಡಿದರು. ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಪತ್ರಿಕಾ ದಿನಾಚರಣೆ ಚಿಂತನಾ-ಮಂಥನಾದ ವೇದಿಕೆಯಾಗಲಿ, ಮಾಧ್ಯಮ ಬದಲಾಗಿದೆ, ಕ್ಷಣಕ್ಷಣಕ್ಕೂ ಸುದ್ದಿ ನೀಡುವ ಮೂಲಕ ಸಂವಹನಕ್ಕೊಳಗಾಗಿದ್ದೇವೆ ಎಂದರು.
ಅಭಿವೃದ್ಧಿ ಪತ್ರಿಕೋದ್ಯಮದ ಬೇರುಗಳು ಗ್ರಾಮೀಣ ಪ್ರದೇಶದಲ್ಲೇ ಇದ್ದು, ಹೆಚ್ಚಿನ ಒತ್ತು ನೀಡಬೇಕಾಗಿದೆ, ಸಮಾಜ ಸ್ನೇಹಿ ಮನೋಭಾವ ವೃದ್ಧಿಸಿಕೊಳ್ಳಬೇಕೆಂದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಾಜು, ರಾಜ್ಯದ 6 ಸಾವಿರ ಪತ್ರಕರ್ತರಿಗೆ ಆರೋಗ್ಯ ವಿಮೆ ನೀಡಬೇಕು ಎಂದು ಆಗ್ರಹಿಸಿ, ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಕೋರಿದರು. ಜಿಲ್ಲಾಧಿಕಾರಿ ಡಿ.ಕೆ. ರವಿ, ನಗರಸಭಾ ಅಧ್ಯಕ್ಷ ಮುಭಾರಕ್ ಮಾತನಾಡಿದರು. ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮನ್ವಂತರ ಪ್ರಕಾಶನ ಹಾಗೂ ಪತ್ರಕರ್ತರ ಸಂಘದಿಂದ ಹೊರ ತಂದಿರುವ ಹೆಜ್ಜೆಗಳು ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ಕ್ರೀಡಾಂಗಣ ಉದ್ಘಾಟನೆಯ ಅಂಗವಾಗಿ ಯಡಹಳ್ಳಿ ಖ್ಯಾತ ಕುಸ್ತಿಪಟು ಹುಲಿಮರಿ ಯಡಹಳ್ಳಿ ಮುನಿಶಾಮಪ್ಪರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶ್ ನಿರೂಪಿಸಿ, ವಾಸುದೇವ ಹೊಳ್ಳ ಸ್ವಾಗತಿಸಿ, ಎ.ಜಿ. ಸುರೇಶ್ಕುಮಾರ್ ವಂದಿಸಿದರು.
ಏಳು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ
ಪತ್ರಿಕಾರಂಗದಲ್ಲಿನ ಸಾಧನೆಗಾಗಿ ಜಿಲ್ಲೆಯ ಏಳು ಮಂದಿ ಪತ್ರಕರ್ತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಜಿ. ನಾರಾಯಣಸ್ವಾಮಿ ನೆನಪಿನಲ್ಲಿ ಬಿ.ಸುರೇಶ್, ಕೆ.ಆರ್. ಕೃಷ್ಣಸ್ವಾಮಿ ನೆನಪಿನಲ್ಲಿ ಮಹಮದ್ ಯೂನಸ್, ಬಿ.ವಿ. ನರಸಿಂಹ ಮೂರ್ತಿ ನೆನಪಿನಲ್ಲಿ ಜಿ.ವಿ. ಪುರುಷೋತ್ತಮ್, ಎಂ. ಮಲ್ಲೇಶೆ ನೆನಪಿನಲ್ಲಿ ಪಿ.ಎನ್. ದಾಸ್, ಬಿ.ಎನ್. ಗುರುಪ್ರಸಾದ್ ನೆನಪಿನಲ್ಲಿ ವಿ. ಶಿವಾರೆಡ್ಡಿ, ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ ಕೆ.ಎಂ. ಚೌಡಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ವರ್ತೂರು ಪ್ರಕಾಶ್, ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್, ನಗರಸಭಾಧ್ಯಕ್ಷ ಮುಬಾರಕ್, ಜಿಲ್ಲಾಧಿಕಾರಿ ಡಿ.ಕೆ.ರವಿ, ಪತ್ರಕತ್ರರ ಸಂಘದ ರಾಜ್ಯಾಧ್ಯಕ್ಷ ಗಂಗಾಧರ್ ಮೊದಲಿಯಾರ್, ಪ್ರ. ಕಾರ್ಯದರ್ಶಿ ಎನ್.ರಾಜು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಕುಸ್ತಿಪಟು ಹುಲಿಮರಿ ಮುನಿಸ್ವಾಮಿ ಅವರನ್ನು ಸಹ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

