ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಕೋಲಾರ/ಮಾಲೂರು/ಟೇಕಲ್,ಜು.2
ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಗ್ರಾಮದ ಕೆರೆ ಅಂಗಳಲ್ಲಿನ ನೀಲಿಗಿರಿ ತೋಪಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಾಲೂರು ತಾಲೂಕಿನ ಕುಪ್ಪೂರಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಬಾಲಕಿಯ ತಾಯಿ ತಾಲೂಕಿನ ಮಾಸ್ತಿ ಠಾಣೆಯಲ್ಲಿ ಕುಪ್ಪೂರು ಗ್ರಾಮದ ನಾರಾಯಣಸ್ವಾಮಿ, ಕೃಷ್ಣ, ಮುನಿಕೃಷ್ಣ ಹಾಗೂ ಅನಿಲ್ ಕುಮಾರ್ ಎಂಬುವರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಆರೋಪಿಗಳು ನಾಪತ್ತೆಯಾಗಿದ್ದು ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಸಾಂಡಹಳ್ಳಿಯ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ, ಓದಿನಲ್ಲಿ ಮುಂದಿರುವುದಲ್ಲದೆ ಶಾಲೆಯ ಲೀಡರ್ ಸಹ ಆಗಿದ್ದಾಳೆ.
ಹಿಂಬಾಲಿಸಿದ ದುಷ್ಕರ್ಮಿಗಳು: ಜೂ.28ರಂದು ಶಾಲೆಗೆ ಹೋಗಿದ್ದ ಬಾಲಕಿ ತರಗತಿಗಳು ಮುಗಿದ ಬಳಿಕ ಸಹಪಾಠಿಗಳ ಜೊತೆ ಸ್ವಲ್ವ ಹೊತ್ತು ಆಟವಾಡಿದ ಬಳಿಕ ತನ್ನೂರಿಗೆ ಒಬ್ಬಳೆ ನಡೆದುಕೊಂಡು ಬರುತ್ತಿದ್ದಾಗ ಬಾಲಕಿಯನ್ನು ನಾರಾಯಣಸ್ವಾಮಿ, ಕೃಷ್ಣ, ಮುನಿಕೃಷ್ಣ ಹಾಗೂ ಅನಿಲ್ ಕುಮಾರ್ ಹಿಂಬಾಲಿಸಿದ್ದಾರೆ. ಕೆರೆ ಅಂಗಳದ ಮೂಲಕ ನಡೆದು ಹೋದರೆ ಮನೆಗೆ ಬೇಗನೆ ತಲುಪಬಹುದೆಂದು ನಂಬಿಸಿ ಬಾಲಕಿಗೆ ಯಾವುದೇ ಅನುಮಾನ ಬರದ ರೀತಿಯಲ್ಲಿ ವರ್ತಿಸಿ ಜೊತೆಗೆ ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರವೆಸಗಿದ ದುರಾತ್ಮರು ಬಾಲಕಿಗೆ ಚಾಕು ತೋರಿಸಿ ನಡೆದ ಘಟನೆಯನ್ನು ಯಾರಿಗಾರೂ ಹೇಳಿದಲ್ಲಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಬಾಲಕಿ ಭಯದಿಂದ ವಿಷಯ ಯಾರಿಗೂ ಹೇಳಿರಲಿಲ್ಲ.
ಆತ್ಮಹತ್ಯೆಗೆ ಯತ್ನ
ಘಟನೆಯ ನಂತರ ಮನೆಗೆ ಬಂದ ಬಾಲಕಿ ಜ್ವರದಿಂದ ಬಳಲಿದ್ದಳು. ತಾಯಿಗೆ ವಿಷಯ ಹೇಳಲು ಆಂಜಿದ್ದಳು. ಆದರೆ, ತನಗಾದ ಅನ್ಯಾಯವನ್ನು ಸಹಿಸಿಕೊಳ್ಳಲಾಗದೆ ಮಂಗಳವಾರ ಮಧ್ಯಾಹ್ನ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಕ್ಕ ಪಕ್ಕದವರು ಇದನ್ನು ಗಮನಿಸಿ ಬಾಲಕಿಯನ್ನು ಪಾರು ಮಾಡಿದ್ದರು. ಸಂಜೆ ಕೂಲಿ ಕೆಲಸ ಮುಗಿಸಿ ಬಂದ ತಾಯಿ ತಿಮ್ಮಕ್ಕನಿಗೆ ಮಗಳು ಜೂ.28ರಂದು ನಡೆದ ಎಲ್ಲಾ ವಿಷಯವನ್ನು ತಿಳಿಸಿದ್ದಾಳೆ.
ಪೊಲೀಸರಿಗೆ ದೂರು
ಮಗಳಿಗೆ ಆದ ಅನ್ಯಾಯದ ಬಗ್ಗೆ ತಾಯಿ ತಿಮ್ಮಕ್ಕ ಮಾಸ್ತಿ ಪೊಲೀಸರಿಗೆ ದೂರು ನೀಡಲು ಮುಂದಾದಗ ಗ್ರಾಮದ ಕೆಲ ಮುಖಂಡರು ರಾಜಿ ಪಂಚಾಯ್ತಿಯ ಮೂಲಕ ಘಟನೆ ಇತ್ಯರ್ಥಕ್ಕೆ ಮುಂದಾದರಾದರೂ ಅದಕ್ಕೆ ತಿಮ್ಮಕ್ಕ ಒಪ್ಪದೆ ಪೊಲೀಸರಿಗೆ ದೂರು ನೀಡಿದ್ದಾರೆ. ಜ್ವರರಿಂದ ಬಳಲಿದ್ದ ಮಗಳನ್ನು ಬುಧವಾರ ಬೆಳಿಗ್ಗೆ ವೈದ್ಯರ ಬಳಿ ಕರೆದೊಯ್ಯುತ್ತಿದ್ದಾಗ ಬಸ್ಸು ನಿಲ್ದಾಣದಲ್ಲಿ ಬಾಲಕಿ ಕುಸಿದು ಬಿದ್ದಿದ್ದಳು. ತಕ್ಷಣ ಅಲ್ಲಿದ್ದ ಕೆಲ ಮುಖಂಡರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲು ನೆರವು ನೀಡಿದರಲ್ಲದೆ, ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ವಿಷಯ ತಿಳಿದು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಸುದ್ದಿ ತಿಳಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್, ಡಿವೈಎಸ್ಪಿ ಅಶೋಕ್ ಕುಮಾರ್, ಸಿಪಿಐ ಶಿವಕುಮಾರ್, ಪಿಎಸ್ಐ ದಯಾನಂದ್, ಸಿದ್ದಪ್ಪ ಅವರುಗಳು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಹೇಳಿಕೆ ಪಡೆದುಕೊಂಡಿದ್ದಾರೆ.
ತಲೆಮರಿಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

