ಕೋಲಾರ

ಬಾಲ್ಡ್‌ವಿನ್ ವಿರುದ್ಧ ಶಿಕ್ಷಣ ಕಾಯ್ದೆ ಉಲ್ಲಂಘನೆ ಆರೋಪ

Published On :

ಕೋಲಾರ: ಸರ್ಕಾರದ ಅನುಮತಿ ಇಲ್ಲದೆ ಶಾಲೆ ಪ್ರಾರಂಭಿಸಿರುವ ನಗರದ ಬಾಲ್ಡ್‌ವಿನ್ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
 ಕರ್ನಾಟಕ ಶಿಕ್ಷಣ ಕಾಯಿದೆ ಉಲ್ಲಂಘನೆ ಆರೋಪದಡಿ ಶಾಲೆ ಆಡಳಿತ ಮಂಡಳಿ ವಿರುದ್ದ ಬಿಇಒ ಬಿ.ಜಗದೀಶ್ ದೂರು ನೀಡಿದ್ದಾರೆ.
ಶಾಲೆ ಆರಂಭಕ್ಕೆ ಮುಂಚೆ ಶಿಕ್ಷಣ ಇಲಾಖೆಯಲ್ಲಿ ಶಾಲಾ ಆಡಳಿತ ಮಂಡಳಿಯವರು ಅನುಮತಿಗಾಗಿ ನೋಂದಣಿ ಮಾಡಬೇಕಿತ್ತು.
ಆದರೆ, ನಿಯಮಗಳನ್ನು ಗಾಳಿ ತೂರಿ ಏಕಾಏಕಿ ಶಾಲೆ ಆರಂಭಿಸಿರುವ ಹಿನ್ನೆಲೆಯಲ್ಲಿ ಹಲವು ಬಾರಿ ನೋಟಿಸ್ ನೀಡಿ ಎಚ್ಚರಿಕೆ ನೀಡಿದರೂ ಆಡಳಿತ ಮಂಡಳಿಯು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸದಿರುವ ಆರೋಪದಡಿ ದೂರು ನೀಡಿ ಶಾಲೆ ಮುಚ್ಚಲು ಶಿಕ್ಷಣ ಇಲಾಖೆಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.
 ಶಿಕ್ಷಣ ಇಲಾಖೆಗೆ ಸೆಡ್ಡುಹೊಡೆದು ಅನಧಿಕೃತವಾಗಿ ಆರಂಭಿಸಿರುವ ಬಾಲ್ಡ್‌ವಿನ್ ಶಾಲೆ ಮುಚ್ಚಲು ಹೋಗಿ ಹೋಗಿದ್ದ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಮಂಗಳವಾರ ಕೆಲವರು ಪ್ರತಿಭಟಿಸಿ, ಶಾಲೆ ಮುಚ್ಚದಂತೆ ದಮಕಿ ಹಾಕಿದ್ದಾರೆ.
 ಜಿಲ್ಲಾಧಿಕಾರಿ ಅಸಮಾಧಾನ
ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಅಲ್ಲಿನ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸುವ ಮೂಲಕ ಕರ್ತವ್ಯ ನಿರ್ಲಕ್ಷಿಸಿದ್ದಾರೆಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
 ಮಂಗಳವಾರ ನಡೆದ ಘಟನೆಯ ಬಗ್ಗೆ ಚರ್ಚಿಸಲು ಡಿಡಿಪಿಐ ಎಸ್.ವಿ.ಪದ್ಮನಾಭ್, ಬಿಇಒ ಜಗದೀಶ್ ಅವರನ್ನು ಬುಧವಾರ ತಮ್ಮ ಕಚೇರಿಗೆ ಕರೆಸಿಕೊಂಡ ಜಿಲ್ಲಾಧಿಕಾರಿಗಳು ವಿವರ ಪಡೆದ ಬಳಿಕ ದೂರವಾಣಿ ಮೂಲಕ ಎಸ್ಪಿಯೊಂದಿಗೆ ಮಾತನಾಡಿ ತರಾಟೆಗೆ ತೆಗೆದುಕೊಂಡರು.
ಅನಧಿಕೃತವಾಗಿ ಶಾಲೆ ಆರಂಭಿಸಿರುವ ಶಾಲೆಯ ವಿರುದ್ಧ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಲ್ ಪೇಟೆ ಠಾಣೆಗೆ ಎರಡು ಬಾರಿ ದೂರು ನೀಡಲು ತೆರಳಿದಾಗಲೂ ದೂರು ಸ್ವೀಕರಿಸಿರಲಿಲ್ಲವೆಂದು ಡಿಡಿಪಿಐ ಮಾಡಿರುವ ಆರೋಪದ ವಿಚಾರವಾಗಿ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸರ್ಕಾರಕ್ಕೆ ವರದಿ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ.
ಅಕ್ರಮ ಕಟ್ಟಡ ನಿರ್ಮಾಣ
ಬಾಲ್ಡ್‌ವಿನ್ ವಿದ್ಯಾಸಂಸ್ಥೆಯವರು ಶಾಲೆಯ ಆರಂಭಕ್ಕೆ ಮಾತ್ರವಲ್ಲದೆ ಶಾಲಾ ಕಟ್ಟಡ ನಿರ್ಮಾಣಕ್ಕೂ ಅನುಮತಿ ಪಡೆದಿಲ್ಲ. ಅಕ್ರಮ ಕಟ್ಟಡ ನಿರ್ಮಾಣಕ್ಕೆ ಮುಂದಾದಾಗ ಕೋರ್ಟಿನಲ್ಲಿ ತಡೆಯಾಜ್ಞೆ ತರಲಾಗಿದೆ. ಕಟ್ಟಡದ ವಿಚಾರ ಹೊರತು ಪಡಿಸಿದರೆ ಅನಧಿಕೃತ ಶಾಲೆಯ ವಿರುದ್ಧ ದೂರು ದಾಖಲಿಸಿಕೊಳ್ಳುವುದಕ್ಕೆ ಪೊಲೀಸರಿಗೆ ಕಷ್ಟವೇನು ಎಂದು ಡಿಸಿ ಪ್ರಶ್ನಿಸಿದ್ದಾರೆ.
 ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯವರು ಪೋಷಕರ ಜೊತೆ ಚರ್ಚಿಸಿ ಮೂರು ದಿನಗಳ ಕಾಲ ಶಾಲೆಗೆ ರಜೆ ಘೋಷಿಸಿರುವುದು ಅಚ್ಚರಿ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.