ಪಂಪ್ಹೌಸ್ ನಿರ್ಮಾಣಕ್ಕೆ ಅಡ್ಡಿ
ಕೋಲಾರ: ರಾಜ ಕಾಲುವೆ ಆವರಣದಲ್ಲಿ ಪಂಪ್ಹೌಸ್ ನಿರ್ಮಾಣ ಮಾಡುತ್ತಿದ್ದ ಕಟ್ಟಡ ಕಾರ್ಮಿಕರನ್ನು ವ್ಯಕ್ತಿಯೊಬ್ಬರು ಬೆದರಿಸಿ ಈ ಜಾಗ ತನ್ನದು ಎಂದು ಕಾರ್ಮಿಕರನ್ನು ಅಲ್ಲಿಂದ ಓಡಿಸಿರುವ ಘಟನೆ ನಡೆದಿದೆ.
ನಗರದ 32 ಮತ್ತು 33ನೇ ವಾರ್ಡ್ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳಲ್ಲಿನ ತ್ಯಾಜ್ಯಗಳನ್ನು ಮತ್ತು ಒತ್ತುವರಿಯನ್ನು ತೆರವುಗೊಳಿಸಿ ದುರಸ್ತಿ ಮಾಡಲಾಗುತ್ತಿದೆ. ಈ ಜಾಗದಲ್ಲಿ ಕೊಳವೆ ಬಾವಿಯನ್ನು ಕೊರೆಸಿ ಪಂಪ್ಹೌಸ್ ನಿರ್ಮಾಣಕ್ಕೆ ಕಳೆದ ತಿಂಗಳು ಜಿಲ್ಲಾಧಿಕಾರಿಗಳು, ನಗರಸಭೆ ಆಯುಕ್ತರು, ಅಧ್ಯಕ್ಷರು ಹಾಗೂ ವಾರ್ಡ್ನ ಸದಸ್ಯರು ಜೊತೆಗೂಡಿ ಗುದ್ದಲಿ ಪೂಜೆ ನೆರವೇರಿಸಿದ್ದರು.
ಆರೋಪ: ಪೂಜೆ ಸಂದರ್ಭದಲ್ಲಿ ಭಾಗವಹಿಸಿದ್ದ ಗದ್ದ ಭಾಷಾ ಸಾಬ್ ಎಂಬಾತನೇ ಕಟ್ಟಡ ಕಾರ್ಮಿಕರನ್ನು ಓಡಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆಂದು ಸ್ಥಳೀಯರು ದೂರಿದ್ದಾರೆ.
ಯಾವುದೇ ಅಧಿಕೃತ ದಾಖಲೆಗಳಿಲ್ಲದಿದ್ದರೂ ಗದ್ದ ಬಾಷಾ ಸಾಬ್ ಅಕ್ರಮವಾಗಿ ಈ ಜಾಗವನ್ನು ನಿವೇಶನಗಳನ್ನಾಗಿ ವಿಂಗಡಿಸಿದ್ದಾನೆಂದು ದೂರಿದ್ದಾರೆ.
ಕ್ರಮಕ್ಕೆ ಮನವಿ: ರಾಜಾನಗರ್, ಬೀಡಿನಗರ್, ಶಾಂತಿ ನಗರ್, ನೂರ್ನಗರ ಮುಂತಾದ ಪ್ರದೇಶಗಳಿಗೆ ಪಂಪ್ಹೌಸ್ ನಿರ್ಮಾಣದಿಂದ ನೀರಿನ ಸಮಸ್ಯೆ ನಿವಾರಣೆಯಾಗುವುದು. ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ವ್ಯಕ್ತಿ ವಿರುದ್ಧ ಜಿಲ್ಲಾಧಿಕಾರಿ ಅವರು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಟಿಪ್ಪು ಸೆಕುಲರ್ ಸೇನೆ ಅಧ್ಯಕ್ಷ ಸಯ್ಯದ್ ಆಸೀಫ್ ಉಲ್ಲಾ ಮನವಿ ಮಾಡಿದ್ದಾರೆ.
ಹಿಂದಿ ಹೇರಿಕೆ ಕೈಬಿಡಲು ಆಗ್ರಹ
ಕೋಲಾರ: ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಿದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವಿವಿಧ ಸಂಘಟನೆಗಳು ಎಚ್ಚರಿಕೆ ನೀಡಿವೆ.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಕರವೇಯಿಂದ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಪ್ರಸ್ತಾವನೆ ಖಂಡಿಸಲಾಯಿತು. ಕನ್ನಡ ಪರ ಚಿಂತಕ ಕೆ. ರಾಜಕುಮಾರ್ ಮಾತನಾಡಿ, ಕರ್ನಾಟಕದ ಕೊರಳ ಧ್ವನಿಯಾಗಿರುವ ಕನ್ನಡ ಭಾಷೆಯನ್ನು ಕಡೆಗಣಿಸಿ ಬಲವಂತವಾಗಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿರುವುದರ ವಿರುದ್ಧ ಕನ್ನಡಿಗರು ಜಾಗೃತರಾಗದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲವೆಂದು ಅಭಿಪ್ರಾಯಪಟ್ಟರು.
ಭಾರತದಲ್ಲಿ ಒಟ್ಟು 1,635 ಭಾಷೆಗಳಿದ್ದು 10 ಸಾವಿರ ಜನಸಾಂದ್ರತೆಯ ನಡುವೆ 122 ಭಾಷೆಗಳು ಹಾಗೂ 10 ಸಾವಿರಕ್ಕಿಂತ ಕಡಿಮೆ ಇರುವ ಕಡೆ 1,500 ರೀತಿಯ ಭಾಷೆಗಳ ಬಳಕೆಯಿದ್ದು, ಇದರ ನಡುವೆ 29 ಭಾಷಾವಾರು ರಾಜ್ಯಗಳ ಆಡಳಿತದಲ್ಲಿ ಹಿಂದಿಯನ್ನು ಬಲವಂತವಾಗಿ ಜನರ ಮೇಲೆ ಹೇರಲಾಗುತ್ತಿದೆ ಎಂದು ಹೇಳಿದರು.
ಹಿಂದಿ ಕಡ್ಡಾಯಕ್ಕೆ ವಿರೋಧವಾದ ಹಿನ್ನಲೆಯಲ್ಲಿ ಎಚ್ಚೆತ್ತ ಕೇಂದ್ರ ಸರ್ಕಾರ ಹೇರಿಕೆ ಇಲ್ಲ ಎಂದು ಬಾಯಿಮಾತಿನಲ್ಲಿ ಹೇಳುತ್ತಿದೆ ಆದರೆ ಇದು ಗೆಜೆಟ್ನಲ್ಲಿ ಪ್ರಕಟವಾಗಬೇಕು ಎಂದು ಆಗ್ರಹಿಸಿದರು. ಕರವೇ ರಾಜ್ಯ ಉಪಾಧ್ಯಕ್ಷ ದಾ.ಪಿ. ಆಂಜನಪ್ಪ ಮಾತನಾಡಿದರು.
ಐದು ನಿರ್ಣಯ: ಹಿಂದಿ ಭಾಷೆ ಹೇರಿಕೆಯ ವಿರುದ್ಧ ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಅಧ್ಯಕ್ಷತೆಯಲ್ಲಿ ನಡೆದ ದುಂಡು ಮೇಜಿನ ಸಭೆ ಐದು ನಿರ್ಣಯ ಕೈಗೊಂಡಿತು. ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್, ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಮಾಲೂರಿನ ಸಾಹಿತಿಗಳಾದ ತಮ್ಮಯ್ಯ, ವೇಣುಗೋಪಾಲ್ ವಹಿನಿ, ಕುಂತೂರು ಚಂದ್ರಪ್ಪ, ಪತ್ರಕರ್ತ ಕೆ.ಎಸ್. ಗಣೇಶ್, ಸಿ.ಜಿ. ಮುರಳಿ ಹಿಂದಿ ಕುರಿತ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಮಾಲೂರಿನ ಪಿ.ಎನ್. ದಾಸ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ, ಕೆ.ವಿ. ಹರೀಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

