ಕೋಲಾರ

ಸಫಾಯಿ ಕರ್ಮಚಾರಿಗಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ನಿರ್ಧಾರ

Published On :

ಕೆಜಿಎಫ್: ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 60 ಸಫಾಯಿ ಕರ್ಮಚಾರಿಗಳನ್ನು ಮತ್ತೆ ಕೆಲಸಕ್ಕೆ ಸೇರಿಕೊಳ್ಳುವ ಭರವಸೆಯನ್ನು ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ ನೀಡಿದ್ದಾರೆ. ಸಫಾಯಿ ಕರ್ಮಚಾರಿ ಹೋರಾಟ ಸಮಿತಿ ವತಿಯಿಂದ ಹಲವು ಬಾರಿ ನಗರಸಭೆ ಮುಂಧೆ ಧರಣಿ ಹೋರಾಟಗಳನ್ನು ನಡೆಸಲಾಗಿತ್ತು. ಈ ಹಿನ್ನಲೆಯಲ್ಲಿ ಸಫಾಯಿ ಕರ್ಮಚಾರಿಗಳ ಬಡ ಕುಟುಂಬ ಜೀವನ ನಡೆಸಲು ಪರದಾಡುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ ಪೌರಾಯುಕ್ತರೊಂದಿಗೆ ಸಭೆಯನ್ನು ನಡೆಸಿ, 60 ಸಫಾಯಿ ಕರ್ಮಚಾರಿಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ ಮತ್ತೆ ಕೆಲಸ ನೀಡಲು ತೀರ್ಮಾನವನ್ನು ಕೈಗೊಳ್ಳಲಾಯಿತು. ಈ ವೇಳೆ ನಗರಸಭೆ ಉಪಾಧ್ಯಕ್ಷ ದಾಸ್ಚಿನ್ನಸವರಿ, ಪೌರಾಯುಕ್ತ ವಿ.ಬಾಲಚಂದ್ರ, ವ್ಯವಸ್ಥಾಪಕ ನಂಜುಂಡಸ್ವಾಮಿ, ಸಫಾಯಿ ಕರ್ಮಚಾರಿ ಹೋರಾಟ ಸಮಿತಿಯ ಸದಸ್ಯರಾದ ಮಾಲಾ, ಸುಬ್ರಮಣಿ, ಮಹೇಶ್, ರಾಜೇಂದ್ರ, ಬಾಬು ಮತ್ತಿತರರು ಹಾಜರಿದ್ದರು.

ಉಸ್ತುವಾರಿ ಸಚಿವರೇ ಏನಿದು ಆಡಳಿತ?

ಕೋಲಾರ: ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ನಡುವೆ ಸಾಮರಸ್ಯದ ಕೊರತೆಯಿಂದ ಆಗುತ್ತಿರುವ ಎಡವಟ್ಟಗಳು ಟೀಕೆಗೆ ಗ್ರಾಸವಾಗಿದೆ.
ಸಾರ್ವಜನಿಕರಿಗೆ ಸಂಬಂಧಿಸಿದ ದೂರುಗಳ ವಿಚಾರದಲ್ಲಿ ಪೊಲೀಸರು ತಾತ್ಸಾರ ಮಾಡುತ್ತಿರುವುದರ ಬಗ್ಗೆ ಜಿಲ್ಲಾಧಿಕಾರಿ ಡಿ.ಕೆ. ರವಿ ಗರಂ ಆಗಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಬೇಕಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿಯವರ ತಟಸ್ಥ ಧೋರಣೆ ವಿರುದ್ಧ ಸರ್ಕಾರಕ್ಕೆ ವರದಿ ನೀಡುವುದಕ್ಕೆ ಮುಂದಾಗಿರುವುದು ಗಮನಿಸಿದರೆ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ನಡುವೆ ಎಲ್ಲವೂ ನೆಟ್ಟಗಿಲ್ಲ ಎಂಬುದು ಗೋಚರವಾಗುತ್ತಿದೆ.
ನಗರದಲ್ಲಿ ಅನಧಿಕೃತವಾಗಿ ಪ್ರಾರಂಭಿಸಿದ್ದ ಖಾಸಗಿ ಶಾಲೆಯನ್ನು ಮುಚ್ಚಿಸಲು ಸಹಕಾರ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿರುವ ಗಲ್ಪೇಟೆ ಪೊಲೀಸರ ವರ್ತನೆಯ ವಿರುದ್ಧ ಜಿಲ್ಲಾಧಿಕಾರಿ ಡಿ.ಕೆ. ರವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವ ಪರಿಸ್ಥಿತಿ ಉಂಟಾಗಿರುವುದು ಪೊಲೀಸ್ ಇಲಾಖೆಯ ಅವ್ಯವಸ್ಥೆಗೆ ಕೈಗನ್ನಡಿಯಾಗಿದೆ.
ಪೊಲೀಸರ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಜಿಲ್ಲಾಧಿಕಾರಿಗಳು ಎಸ್ಪಿಯೊಂದಿಗೆ ತೋಡಿಕೊಂಡ ಅಸಮಾಧಾನದ ಬಳಿಕ ಪೊಲೀಸರು ಖಾಸಗಿ ಶಾಲೆ ಮುಚ್ಚುವಂತೆ ಆಡಳಿತ ಮಂಡಳಿಗೆ ಸೂಚಿಸಿರುವುದಲ್ಲದೆ ಸರ್ಕಾರದಿಂದ ಅನುಮತಿ ಪತ್ರ ತರುವುದಕ್ಕೆ ಏನು ಮಾಡಬೇಕೆಂಬ ಬಗ್ಗೆ ಸಲಹೆ ನೀಡಿದ್ದಾರೆನ್ನಲಾಗಿದೆ.
ಕೇವಲ ಖಾಸಗಿ ಶಾಲೆಯ ವಿಚಾರ ಮಾತ್ರವಲ್ಲ, ಮರಳು ದಂಧೆ ತಡೆಯಲು ಜಿಲ್ಲಾಧಿಕಾರಿಗಳು ಸೂಚಿಸಿದ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಪೊಲೀಸರು ವಿಫಲವಾಗಿರುವ ಬಗ್ಗೆಯೂ ಸರ್ಕಾರಕ್ಕೆ ವರದಿ ನೀಡಿರುವುದು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಯು.ಟಿ. ಖಾದರ್ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಏನು ಮಾಡುತ್ತಿದ್ದಾರೆ, ಅಸಹಾಯಕತೆಗೆ ಕಾರಣವೇನೆಂಬುದು ಅನುಮಾನಕ್ಕೆ ಎಡೆ ಮಾಡಿದೆ.
ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಮರಳು ಲಾರಿಗಳನ್ನು ತಡೆಯಲು ಜಿಲ್ಲಾಧಿಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದರೆ ಎಸ್ಪಿಯವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಿಡಿದ ಮರಳು ಲಾರಿಗಳನ್ನು ಬಿಟ್ಟು ಕಳುಹಿಸಲು ತಮ್ಮ ಕಿರಿಯ ಅಧಿಕಾರಿಗಳಿಗೆ ಸೂಚಿಸಿರುವುದು ಡಿಸಿಯ ಪಿತ್ತಾ ನೆತ್ತಿಗೇರಲು ಕಾರಣವಾಗಿದೆ.
ಇದೇ ರೀತಿ ಸಮಾಜ ಕಲ್ಯಾಣ ಇಲಾಖೆಯ ಗುಮಾಸ್ತ ನಾರಾಯಣಸ್ವಾಮಿ ಎಂಬುವರು ಎಸಗಿರುವ ಅಕ್ರಮಗಳ ಕುರಿತ ತನಿಖೆ ನಿಲ್ಲಿಸಿರುವ ಪೊಲೀಸರ ಕ್ರಮಕ್ಕೆ ಡಿಸಿ ಸಿಟ್ಟಾಗಿದ್ದಾರೆ. ಪೊಲೀಸ್ ಠಾಣೆಗಳಲ್ಲಿ ಆಗುತ್ತಿರುವ ಎಟವಟ್ಟುಗಳ ಬಗ್ಗೆ ನಿಗಾವಹಿಸಿ ಇಲಾಖೆಯನ್ನು ಸರಿದಾರಿಗೆ ತರಬೇಕಾದ ನೀವೇ ಅಸಹಾಯಕರಾಗಿ ಕುಳಿತರೆ ಹೇಗೆ ಎಂದು ಡಿಸಿ ಪ್ರಶ್ನಿಸುವ ಮೂಲಕ ಪೊಲೀಸ್ ಇಲಾಖೆಯನ್ನು ನಿದ್ರೆಯಿಂದ ಎಬ್ಬಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಪೊಲೀಸ್ ಇಲಾಖೆ ಮಾಡಬೇಕಾದ ಕೆಲಸವನ್ನು ಜಿಲ್ಲಾ ಆಡಳಿತ ಮಾಡುವಂತಾಗಿದೆ. ತಾವು ಕಚೇರಿಯಲ್ಲಿ ಕುಳಿತರೆ ಸಾಲದು, ಠಾಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರು ದೂರುಗಳಿಗೆ ಅಲ್ಲಿನ ಅಧಿಕಾರಿಗಳು, ಸಿಬ್ಬಂದಿ ಹೇಗೆ ಸ್ಪಂದಿಸುತ್ತಿದ್ದಾರೆಂಬುದು ತಿಳಿಯುವುದು ನಿಮ್ಮ ಕರ್ತವ್ಯ. ಪೊಲೀಸ್ ಇಲಾಖೆಯಿಂದ ಆಗುವ ತಪ್ಪುಗಳಿಗೆ ಜಿಲ್ಲಾ ಆಡಳಿತ ಹೊಣೆ ಆಗುವಂತಾಗಿದೆ. ಇನ್ನಾದರೂ ಸಾರ್ವಜನಿಕರ ದೂರುಗಳಿಗೆ ಸಂಬಂಧಿಸಿ ಚುರುಕಿನಿಂದ ಕೆಲಸವಾಗಲಿ, ಇಲ್ಲದಿದ್ದರೆ ಸರ್ಕಾರಕ್ಕೆ ವರದಿ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಾಲೂರಿನಲ್ಲಿ ಇತ್ತೀಚೆಗೆ ತಾವೇ ಹಿಡಿದುಕೊಟ್ಟ ಮರಳು ಲಾರಿಗಳನ್ನು ಎಸ್ಪಿ ಅಜಯ್ ಹಿಲೋರಿಯವರು ಬಿಟ್ಟು ಕಳುಹಿಸಲು ಪೊಲೀಸರಿಗೆ ಸೂಚನೆ ನೀಡಿರುವುದರಿಂದ ಡಿಸಿ ಸಾಹೇಬ್ರು ಗರಂ ಆಗಲು ಕಾರಣವಾಗಿದ್ದು, ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹದೆಗೆಡುತ್ತಿರುವ ಆಡಳಿತಕ್ಕೆ ಯಾವ ರೀತಿ ಸರ್ಜರಿ ಮಾಡುತ್ತಾರೆಂಬುದು ಕುತೂಹಲ ಮೂಡಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.