ಅಂಗನವಾಡಿಗೆ ಗ್ರಾಮಸ್ಥರಿಂದ ಬೀಗ
ಕೆಜಿಎಫ್: ಶಿಶು ಅಭಿವೃದ್ಧಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಕ್ಕಳಿಗೆ ಮತ್ತು ಫಲಾನುಭವಿಗಳಿಗೆ ನೀಡಬೇಕಾದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದು ಅದನ್ನು ಪ್ರಶ್ನಿಸಿದ ಗ್ರಾಮಸ್ಥರನ್ನು ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿದ್ದ ಘಟನೆ ಖಂಡಿಸಿ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕೆಜಿಎಫ್ ಕ್ಷೇತ್ರದ ಕ್ಯಾಸಂಬಳ್ಳ ಹೋಬಳಿ ಬಳುವನಹಳ್ಳಿ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಅಂಗನವಾಡಿ ಕೇಂದ್ರದಲ್ಲಿ ಹತ್ತಾರು ವರ್ಷಗಳಿಂದ ಸೇವೆ ಮಾಡುತ್ತಿರುವ ಶಕುಂತಲ ಎಂಬವರು ಅಂಗನವಾಡಿಗೆ ಸರಬರಾಜು ಆಗುವ ಆಹಾರ ಪದಾರ್ಥಗಳನ್ನು ಗ್ರಾಮದ ಮಕ್ಕಳಿಗೆ ಮತ್ತು ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡುತ್ತಿಲ್ಲ. ಈ ಹಿಂದೆ ಅಂಗನವಾಡಿ ಕೇಂದ್ರದಲ್ಲಿ ಸುಮಾರು 26 ಮಕ್ಕಳಿದ್ದು ಇದೀಗ ಐವರು ಮಕ್ಕಳು ಸಹ ಬರುತ್ತಿಲ್ಲ. ಆದ್ದರಿಂದ ಅಂಗನವಾಡಿಗೆ ಬರುವ ಆಹಾರ ಪದಾರ್ಥಗಳನ್ನು ಕಾರ್ಯಕರ್ತೆ ಶಕುಂತಲ ಅಕ್ರಮವಾಗಿ ಬಳುವನಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಇತರೆ ಗ್ರಾಮಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಕ್ಕೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಗೂಂಡಾಗಳನ್ನು ಕರೆಸಿ ಅಮರಮ್ಮ, ಆನಂದರೆಡ್ಡಿ, ವೆಂಕಟರಾಮರೆಡ್ಡಿ ಅವರನ್ನು ನಿಂದಿಸಿ, ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಬೇತಮಂಗಲ ಠಾಣೆಯಲ್ಲಿ ಅವರ ವಿರುದ್ಧ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅಲ್ಲಿಯವರೆಗೆ ಅಂಗನವಾಡಿ ಕೇಂದ್ರವನ್ನು ತೆರೆಯುವುದಿಲ್ಲ ಎಂದು ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಬಳುವನಹಳ್ಳಿ ಗ್ರಾಮಸ್ಥರಾದ ರಾಜಪ್ಪ, ಯಶೋಧ, ಶ್ರೀನಿವಾಸಗೌಡ, ಬಾಲೇಗೌಡ, ಲಕ್ಷ್ಮಪ್ಪ, ಮುನಿರಾಜು, ನೇತ್ರಾವತಿ, ಶೃತಿ, ವಿಜಯಲಕ್ಷ್ಮಿ, ಸುಜಾತಾ, ರಾಧಮ್ಮ, ರಾಮಚಂದ್ರಪ್ಪ ಸೇರಿದಂತೆ ಇತರೆ ಗ್ರಾಮದ ಮುಖಂಡರು ಹಾಗೂ ಅಂಗನವಾಡಿ ಸಹಾಯಕಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

