ಕೋಲಾರ

ಕೋಲಾರ ಬಾಲ್ಡ್‌ವಿನ್ ಶಾಲೆ ಅರ್ಜಿ ವಜಾ

Published On :

ಬೆಂಗಳೂರು:  ಶಾಲೆ ಆರಂಭಿಸಲು ಇಲಾಖೆ ಅನುಮತಿ ಪಡೆಯದ ಕೋಲಾರದ ಬಾಲ್ಡ್‌ವಿನ್ ಶಾಲೆ ಬಂದ್ ಮಾಡುವುದಾಗಿ ಡಿಡಿಪಿಐ ನೀಡಿದ್ದ ನೋಟಿಸ್‌ಗೆ ಮಧ್ಯಂತರ ತಡೆಯಾಜ್ಞೆ ಕೋರಿ ಶಾಲೆ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ.
ಕೋಲಾರದ ಮೆಥೋಡಿಸ್ಟ್‌ನ ಶಾಖಾ ಶಾಲೆಯಾದ ಬಾಲ್ಡ್‌ವಿನ್ ಶಾಲೆ ಶಿಕ್ಷಣ ಇಲಾಖೆ ಅನುಮತಿ ಪಡೆಯದೇ 2014-15 ಶೈಕ್ಷಣಿಕ ವರ್ಷ ಆರಂಭಿಸಿತ್ತು.
ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಶಾಲೆ ಬಂದ್ ಮಾಡುವುದಾಗಿ ಡಿಡಿಪಿಐ ನೋಟಿಸ್ ಜಾರಿಮಾಡಿದ್ದನ್ನು ಪ್ರಶ್ನಿಸಿ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಶಾಲಾ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಲೇರಿತ್ತು.
ಶಿಕ್ಷಣ ಇಲಾಖೆಯ 1997ರ ನಿಯಮ 3 ಪ್ರಕಾರ ಶಾಲೆಯನ್ನು ಆರಂಭಿಸಬೇಕಾದರೆ ಅ.31ರೊಳಗೆ ಇಲಾಖೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಬೇಕು. ಆದರೆ ತಡವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯದೇ ಶಾಲೆ ಆರಂಭಿಸಲಾಗಿತ್ತು.
ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಸುಮಾರು 270 ಮಕ್ಕಳನ್ನು ಇಲಾಖೆ ಅನುಮತಿ ಪಡೆಯದೇ ದಾಖಲು ಮಾಡಿಕೊಂಡಿದ್ದರು. ನೋಟಿಸ್‌ಗೆ ತಡೆಯಾಜ್ಞೆ ನೀಡದೇ ಹೋದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯುವುದಾಗಿ ಶಾಲೆ ಪರ ವಕೀಲರು ವಾದ ಮಂಡಿಸಿದರು.
ಸರ್ಕಾರದ ಪರ ವಕೀಲ ಬಿ. ವೀರಪ್ಪ ಪೀಠದ ಮುಂದೆ ವಾದ ಮಂಡಿಸಿ, ಮಕ್ಕಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ನಿರ್ದೇಶಿಸುತ್ತಿರುವ ಶಾಲೆಯ ಕ್ರಮ ಸರಿಯಲ್ಲ. ಕಾನೂನು ಉಲ್ಲಂಘಿಸುವ ಮೂಲಕ ಮಕ್ಕಳ ಭವಿಷ್ಯದಲ್ಲಿ ಶಾಲೆ ಆಟವಾಡುತ್ತಿದೆ ಎಂದು ನ್ಯಾ. ಎ.ಎಸ್. ಬೋಪಣ್ಣ ಅವರ ಪೀಠಕ್ಕೆ ಮನವರಿಕೆ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ಕೋರಿ ಶಾಲೆ ಸಲ್ಲಿಸಿದ ಅರ್ಜಿಯನ್ನು ನಿರಾಕರಿಸಿ ವಿಚಾರಣೆ ಮುಂದೂಡಿತು.
ಈ ಹಿಂದೆ ಅನುಮತಿ ಪಡೆಯದೇ ಶಾಲೆ ಆರಂಭಿಸಿರುವುದನ್ನು ಪ್ರಶ್ನಿಸಿ ಮಕ್ಕಳನ್ನು ದಾಖಲಿಸಿಕೊಳ್ಳಬಾರದೆಂದು ಕೆಲವು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯನ್ನು ಮುಚ್ಚಲು ಜಿಲ್ಲಾ ಶಿಕ್ಷಣ ಇಲಾಖೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.