ಕೋಲಾರ

ಪೊಲೀಸ್ ಗೃಹಗತಿ ಚೆನ್ನಾಗಿಲ್ಲ!

Published On :

ಬಂಗಾರಪೇಟೆ: ಪಟ್ಟಣದ ಪೊಲೀಸ್ ಠಾಣೆ ಅನತಿ ದೂರದಲ್ಲಿರುವ ಪೊಲೀಸ್ ವಸತಿ ಗೃಹಗಳು ದುಸ್ಥಿತಿಯಲ್ಲಿದ್ದು ಇಂದೋ ನಾಳೆಯೋ ಧರೆಗುರುಳುವ ಸ್ಥಿತಿಯಲ್ಲಿವೆ. ಇಂಥ ಪರಿಸ್ಥಿತಿಯಲ್ಲೂ ವಿಧಿ ಇಲ್ಲದೆ ಪೊಲೀಸ್ ಕುಟುಂಬಗಳು ಅದರಲ್ಲೇ ವಾಸ ಮಾಡುತ್ತಿವೆ.
ಕುಡಿಯುವ ನೀರು, ಸೊಳ್ಳೆಗಳ ಕಾಟ, ರಸ್ತೆಯೇ ಸಮರ್ಪಕವಾಗಿಲ್ಲದ ಕಾರಣ ಸಂದಿ ಗೊಂದಿಗಳಲ್ಲಿ ಮನೆಗೆ ತಲುಪಬೇಕಾದ ಪರಿಸ್ಥಿತಿ ಇದೆ. ಕನಿಷ್ಠ ಮನೆಗಳ ಪಕ್ಕದಲ್ಲಿ ಹರಿಯುವ ಚರಂಡಿ ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿದೆ. ಪೊಲೀಸ್ ಕುಟುಂಬಗಳು ಮೂಗು ಮುಚ್ಚಿಕೊಂಡೇ ಮನೆಗಳಲ್ಲಿ ವಾಸ ಮಾಡುವಂತಾಗಿದೆ.
ನಾಲ್ಕು ದಶಕಗಳ ಹಿಂದೆ ನಿರ್ಮಿಸಿದ 24 ವಸತಿ ಗೃಹಗಳು ವಾಸಕ್ಕೆ ಯೋಗ್ಯವಾಗಿಲ್ಲ. ಮಳೆ ಬಂತೆಂದರೆ ಜೀವ ಕೈಯಲ್ಲಿ ಹಿಡಿದು ವಾಸವಿರಬೇಕು. ಕಿತ್ತು ಹೋಗಿರುವ ಗೋಡೆಗಳು, ಹರಕಲು ಬಾಗಿಲು, ಕಿಟಕಿಗಳು, ನೆಲ ಹಾಸು ಕಿತ್ತು ಹೋಗಿದ್ದನ್ನು ನೋಡಲಾರದೇ ತಾವೇ ಜೇಬಿನಿಂದ ಹಣ ಖರ್ಚು ಮಾಡಿ ರಿಪೇರಿ ಮಾಡಿಸಿಕೊಂಡ ಪೊಲೀಸರು ಇದ್ದಾರೆ.
ಎರಡು ವರ್ಷಗಳ ಹಿಂದೆ ವಸತಿ ಗೃಹದ ಮುಂಭಾಗದಲ್ಲಿ ಕಾಂಪೌಂಡ್ ನಿರ್ಮಿಸಿ ಗೇಟ್ ಅಳವಡಿಸಲಾಗಿದೆ. ಆದರೆ ಹಿಂಭಾಗದಲ್ಲಿ ಕಾಂಪೌಂಡ್ ಇಲ್ಲ, ಯಾವುದೇ ರಕ್ಷಣೆಯ ಗೋಡೆ ಇಲ್ಲದ ಕಾರಣ ಬೀದಿ ನಾಯಿಗಳ   ಹಾವಳಿ ಮಿತಿ ಮೀರಿದೆ. ಎಲ್ಲ ವಸತಿ ಗೃಹಗಳಿಗೂ ಮುಂಭಾಗ ಹೊರತುಪಡಿಸಿ ಕನಿಷ್ಠ 10 ಅಡಿ ರಸ್ತೆಯೇ ಇಲ್ಲ. ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಳ್ಳಬೇಕೆಂದರೂ ಹರಸಾಹಸಪಡಬೇಕು. ವಸತಿ ಗೃಹಗಳ ಪಕ್ಕದಲ್ಲಿರುವ ಚರಂಡಿಗಳಲ್ಲಿ ಹೂಳು ತುಂಬಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದ ಕಾರಣ ಕೊಳಚೆ ನೀರು ರಸ್ತೆಗಳ ಮೇಲೆ ಬರುತ್ತದೆ. ಪೊಲೀಸ್ ವಸತಿ ಗೃಹಗಳ ದುರಸ್ತಿಗೆ ಕಳೆದ ಎರಡು ದಶಕಗಳಿಂದ ಒಂದೇ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ಇದರಿಂದ ವಸತಿ ಗೃಹಗಳು ಶಿಥಿಲಾವಸ್ಥೆಗೆ ತಲುಪಿರುವುದು ಎಷ್ಟರ ಮಟ್ಟಿಗೆ ಸರ್ಕಾರದ ಅನುದಾನ ಪೊಲೀಸ್ ಕಲ್ಯಾಣ ಅಭಿವೃದ್ಧಿಗೆ ಬರುತ್ತಿದೆ ಎನ್ನುವುದಕ್ಕೆ ಪಟ್ಟಣದ ಪೊಲೀಸ್ ವಸತಿ ಗೃಹಗಳ ದುರವಸ್ಥೆಯೇ ಪ್ರಮುಖ ನಿದರ್ಶನ.




ಪಟ್ಟಣದಲ್ಲಿ ಸಿಂಗಲ್ ಬೆಡ್ ರೂಂ ಮನೆಗೂ ದುಬಾರಿ ಬಾಡಿಗೆ ನೀಡಬೇಕು. ಇದರಿಂದ ಪೊಲೀಸ್ ವಸತಿಗೃಹವೇ ಮೇಲೆಂದು ಇಲ್ಲಿ ಕಾಲ ನೂಕುತ್ತಿದ್ದೇವೆ. ಈಗಲಾದರೂ ಇತ್ತ ಗಮನಹರಿಸಬಹುದು ಎಂದು ಕಾಯುತ್ತಿದ್ದೇವೆ.
ಟಿ ಪೊಲೀಸ್ ವಸತಿಗೃಹ ನಿವಾಸಿಗಳು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.