ಸಾಮಾನ್ಯ ಸಭೆಯಲ್ಲಿ ಸಿಎ ಸೈಟ್ ಗದ್ದಲ
ಗೌರಿಬಿದನೂರು: ಪಟ್ಟಣದ ಬಿಎಚ್ ರಸ್ತೆ ಮತ್ತು ಎಂಜಿ ರಸ್ತೆಗಳ ಅಗಲೀಕರಣಕ್ಕೆ ಶನಿವಾರ ನಡೆದ ಪುರಸಭೆಯ ಸಾಮಾನ್ಯ ಸಭೆ ಒಕ್ಕೂರಲ ಒಪ್ಪಿಗೆ ನೀಡಿತು.
ವಿಷಯ ಪ್ರಸ್ತಾಪಿಸಿ ಮಾತನಾಡಿದ ಬಿಜೆಪಿ ಸದಸ್ಯ ಜಿ. ಬಾಲಾಜಿ, ಪಟ್ಟಣದಲ್ಲಿ ಸಂಚಾರ ಹೆಚ್ಚಾಗಿದೆ. ಇದಕ್ಕನುಗುಣವಾಗಿ ರಸ್ತೆಗಳು ಅಗಲೀಕರಣಗೊಳ್ಳದೆ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಆದ್ದರಿಂದ ಸದಸ್ಯರೆಲ್ಲರೂ ಬೆಂಬಲ ನೀಡಬೇಕೆಂದು ಕೋರಿದರು.
ಅಧ್ಯಕ್ಷ ಸೇರಿದಂತೆ ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರಲ್ಲದೆ, ಲೋಕೋಪಯೋಗಿ ಇಲಾಖೆಯ ಕಡತಗಳಲ್ಲಿರುವಂತೆ ರಸ್ತೆಗಳನ್ನು ಮಧ್ಯ ಭಾಗದಿಂದ ಐವತ್ತು ಅಡಿ ಅಗಲದ ರಸ್ತೆ ನಿರ್ಮಾಣವಾಗಬೇಕು ಎಂದು ಪುರಸಭಾ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು.
ಕಸ ಸಂಗ್ರಹ ಗಾಡಿಗಳು ತಮ್ಮ ವಾರ್ಡುಗಳಿಗೆ ನಿಯಮಿತವಾಗಿ ಬಾರದೆ ಇರುವುದರಿಂದ ಸಮಸ್ಯೆ ತೀವ್ರವಾಗಿದೆ ಎಂದು ಕಲೀಂ ಉಲ್ಲಾ ಮತ್ತು ಶಾರದಮ್ಮ ಸಭೆಯ ಗಮನಕ್ಕೆ ತಂದರು. ಇನ್ನು ಮುಂದೆ ಕಸ ಸಂಗ್ರಹ ಮಾಡಲು ವಾರ್ಡುಗಳಿಗೆ ತೆರಳುವ ಪೌರ ಕಾರ್ಮಿಕರು ಆಯಾ ವಾರ್ಡುಗಳ ಪುರಸಭಾ ಸದಸ್ಯರ ಸಹಿ ಪಡೆದು ಬರಲ ು ಸೂಚಿಸಬೇಕೆಂದು ಸಭೆ ತೀರ್ಮಾನಿಸಿತು.
ಪಟ್ಟಣದ ನೀರಿನ ಸಮಸ್ಯೆಯನ್ನು ಪರಿಹರಿಸಲು ಪಟ್ಟಣದ ವ್ಯಾಪ್ತಿಯಲ್ಲಿ ಖಾಸಗಿಯವರು ಕೊರೆಸಿರುವ ಕೊಳವೆ ಬಾವಿಗಳನ್ನು ಪುರಸಭೆ ವಶಪಡಿಸಿಕೊಂಡು ನೀರು ಸರಬರಾಜು ಮಾಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷಿಸಿದ್ದಾರೆ ಎಂದು ಜೆಡಿಎಸ್ ಸದಸ್ಯ ಕೆ.ಎಸ್. ಅನಂತರಾಜು ಆರೋಪಿಸಿದರು.
ಈಗಾಗಲೇ ಶಾಸಕರು ಸರ್ಕಾರಕ್ಕೆ ಪತ್ರ ಬರೆದು ಪುರಸಭೆ ವಾರ್ಡುಗಳ ರಸ್ತೆ, ಚರಂಡಿಗಳ ಅಭಿವೃದ್ಧಿಗೆ ಹಣ ಮಂಜೂರು ಮಾಡಬೇಕೆಂದು ಕೋರಿದ್ದಾರೆ ಎಂದು ಅಧ್ಯಕ್ಷ ಎಂ. ನರಸಿಂಹಮೂರ್ತಿ ಮಾಹಿತಿ ನೀಡಿದರು. ಉಪಾಧ್ಯಕ್ಷ ಚಿದಾನಂದಗುಪ್ತ, ಮುಖ್ಯಾಧಿಕಾರಿ ಎಚ್.ಸಿ. ಹನುಮಂತೇಗೌಡ ಸಭೆಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

