ಪ್ರೀತ್ಸೆ ಪ್ರೀತ್ಸೆ ಎಂದು ಬೆನ್ನು ಬಿದ್ದವನಿಗೆ ಬುದ್ಧಿ ಹೇಳಿದ್ದಕ್ಕೆ ಯುವತಿ ತಂದೆಗೆ ಇರಿದ ಭೂಪ
ಟೇಕಲ್: ನನ್ನನ್ನು ಪ್ರೀತಿಸು ಎಂದು ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದವನನ್ನು ಕರೆಸಿ ಬುದ್ಧಿವಾದ ಹೇಳಿ ಪಂಚಾಯ್ತಿ ಮಾಡುತ್ತಿದ್ದಾಗ, ಪಂಚಾಯ್ತಿದಾರನಿಗೆ ಚಾಕುವಿನಿಂದ ಕರುಳು ಹೊರಬರುವಂತೆ ತಿವಿದ ಪ್ರಕರಣ ನಡೆದಿದೆ.
ಘಟನೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಾಮಾಂಜಿನಪ್ಪ ಇರಿತಕ್ಕೆ ಒಳಗಾದವನಾಗಿದ್ದು, ಆತನನ್ನು ಕೋಲಾರದ ಮೆಡಿಕಲ್ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಮಾಸ್ತಿ ಹೋಬಳಿಯ ನಾಗದೇನಹಳ್ಳಿ ಗ್ರಾಮದ ಆಂಜಿನಪ್ಪ ಎಂಬುವರ ಮಗಳು ಮಾಸ್ತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದು, ಇವರ ಗ್ರಾಮದ ಪಕ್ಕದ ಹಳ್ಳಿಯ ತೊಳಕನಹಳ್ಳಿ ಗ್ರಾಮದ ಸೀನಪ್ಪನವರ ಮಗ ಶ್ರೀನಾಥ ಆಕೆ ಶಾಲೆಗೆ ಬರುವಾಗ ಚುಡಾಯಿಸುತ್ತಿದ್ದು, ಕೀಟಲೆ ಮಾಡುತ್ತಿದ್ದ ಹಾಗೂ ನಿನ್ನನ್ನು ಪರಾರಿ ಮಾಡಿಕೊಂಡು ಹೋಗುತ್ತೇನೆಂದು ಹೆದರಿಸುತ್ತಿದ್ದ. ಇದರಿಂದ ಭಯಗೊಂಡ ವಿದ್ಯಾರ್ಥಿನಿ ಶಾಲೆಗೆ ಹೋಗದೆ ತಂದೆ ಆಂಜಿನಪ್ಪ ಬಳಿ ವಿಷಯ ತಿಳಿಸಿದಳು.
ಅವರು ತೊಳಕನಹಳ್ಳಿಯ ಶ್ರೀನಾಥ ಮತ್ತು ಗ್ರಾಮದ ಹಿರಿಯರನ್ನು ವಿಚಾರಿಸಿ, ಈತ ಈ ರೀತಿ ಮಾಡುತ್ತಿರುವುದು ತಪ್ಪು. ದಯವಿಟ್ಟು ಈ ಬಗ್ಗೆ ಗಮನಹರಿಸಿ ಎಂದರು. ಅದರಂತೆಯೆ ಸೋಮವಾರ ಸಂಜೆ 6 ಗಂಟೆ ಸಮಯದಲ್ಲಿ ನಾಗದೇನಹಳ್ಳಿ ಸರ್ಕಾರಿ ಶಾಲೆ ಬಳಿ ಈ ವಿಚಾರವಾಗಿ ಪಂಚಾಯ್ತಿ ಸೇರಿ ಮಾತನಾಡುತ್ತಿದ್ದಾಗ ಶ್ರೀನಾಥನಿಗೆ ಕುಮ್ಮಕ್ಕು ನೀಡುತ್ತಿದ್ದ ಮಾಸ್ತಿಯ ಮುರುಳಿ ಎಂಬುವನಿಗೂ ಈ ಪಂಚಾಯ್ತಿಯಲ್ಲಿ ಬುದ್ಧಿವಾದ ಹೇಳುತ್ತಿದ್ದರು. ಆಗ ವಿದ್ಯಾರ್ಥಿನಿ ತಂದೆ ಆಂಜಿನಪ್ಪ ನೀನು ಮಾಡಿರುವುದು ತಪ್ಪೆಂದು ಹೇಳಲು ಮುಂದೆ ಬಂದಾಗ ಮುರುಳಿ, ತನ್ನ ಜೇಬಿನಲ್ಲಿದ್ದ ಬಟನ್ ಚಾಕುವಿನಿಂದ ಆತನಿಗೆ ತಿವಿಯಲು ಹೋದ. ಆಗ ಅಡ್ಡ ಬಂದ ಪಂಚಾಯ್ತಿಯಲ್ಲಿ ನಿಂತಿದ್ದ ರಾಮಾಂಜಿನಪ್ಪ ಎಂಬುವರ ಹೊಟ್ಟೆಗೆ ಬಲವಾಗಿ ಚಾಕು ಒಳ ಹೊಕ್ಕಿದ್ದು ಕ್ಷಣಾರ್ಧದಲ್ಲಿ ಕರುಳು ಹೊರಬಂದಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ರವಾನಿಸಲಾಗಿ ಸ್ಥಳದಲ್ಲಿದ್ದ ಗ್ರಾಮಸ್ಥರು ಮುರುಳಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಮಾಸ್ತಿ ಠಾಣೆಯ ಪೊಲೀಸರಿಗೆ ಒಪ್ಪಿಸಲಾಯಿತು.
ಶ್ರೀನಾಥ ಪರಾರಿಯಾಗಿದ್ದು, ಮಾಸ್ತಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸ್ಥಳಕ್ಕೆ ಮಾಸ್ತಿ ಪಿಎಸ್ಐ ಸಿದ್ದಪ್ಪ ಭೇಟಿ ನೀಡಿದ್ದು, ಶ್ರೀನಾಥನನ್ನು ಶೀಘ್ರವೇ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

