ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳಿಲ್ಲ
ಕೋಲಾರ: ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳಿಲ್ಲ, ಕೋಲಾರ ನಗರದಲ್ಲಿ ಪ್ರಾರಂಭಿಸಿದ್ದ ಅನಧಿಕೃತ ಬಾಲ್ಡ್ವಿನ್ ಶಾಲೆಯನ್ನು ಮುಚ್ಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪದ್ಮನಾಭ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದಿಂದ ಅನುಮತಿ ಪಡೆಯದೆ ನಡೆಸುತ್ತಿದ್ದ ಅನೇಕ ಶಾಲೆಗಳು ಈಗ ಅಧಿಕೃತ ಮಾನ್ಯತೆಯೊಂದಿಗೆ ನಡೆಯುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೂಚನೆ ಮೇರೆಗೆ ಜಿಲ್ಲೆಯ ಶಾಲೆಗಳ ಮಾಹಿತಿ ನೀಡಲಾಗಿದೆ ಎಂದರು.
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ನೀರಿನ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಯಾವುದಾದರೂ ಶಾಲೆಗಳಲ್ಲಿ ಈ ವ್ಯವಸ್ಥೆ ಇಲ್ಲದಿದ್ದ ಪಕ್ಷದಲ್ಲಿ ಸಮೀಕ್ಷೆ ನಡೆಸಿ ಶೌಚಾಲಯ ಮತ್ತು ನೀರಿನ ಸೌಕರ್ಯಗಳಿಲ್ಲದ ಶಾಲೆಗಳ ವರದಿ ನೀಡುವಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಬಿಇಒಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಸಂಖ್ಯೆಗೆ ಅನುಗುಣವಾಗಿ ಶೌಚಾಲಯ: ಶಾಲಾ ಶೌಚಾಲಯಗಳಿಗೆ ನೀರನ್ನು ಗ್ರಾಪಂ, ಖಾಸಗಿ ಕೊಳವೆ ಬಾವಿಗಳ ಮೂಲಕ ಒದಗಿಸಲಾಗುತ್ತಿದೆ. ಸರ್ಕಾರ ಮೂಲ ಸೌಕರ್ಯಕ್ಕೆ ಬೇಕಾದ ಅನುದಾನ ನೀಡಲು ಬದ್ಧವಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ನಗರದ ಗಂಗಮ್ಮನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ವರ್ಗಾವಣೆ ಮಾಡುವುದಕ್ಕೆ ಚಿಂತನೆ ನಡೆದಿದೆ. ಕಳೆದ ನಾಲ್ಕು ವರ್ಷಗಳ ಹಿಂದೆಯೇ ನಿವೇಶನ ಖರೀದಿಗಾಗಿ 3.5 ಲಕ್ಷ ಅನುದಾನ ಬಿಡುಗಡೆ ಆಗಿದೆ. ನಗರಸಭೆಯವರು ಇಲ್ಲವೇ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ದೊರೆತಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.
ಸೈಕಲ್ ಬಂದಿಲ್ಲ: ಪ್ರಸ್ತುತ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಗಂಭೀರ ಸಮಸ್ಯೆ ಇಲ್ಲ. 250ಕ್ಕೂ ಹೆಚ್ಚೂ ಮಂಜೂರಾತಿ ಶಿಕ್ಷಕರ ಹುದ್ದೆ ಭರ್ತಿಯಾದರೆ ಶಾಲೆಗಳಲ್ಲಿ ಪಠ-ಪ್ರವಚನಕ್ಕೆ ಅನುಕೂಲವಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನಿವಾರಣೆಗಾಗಿ ಹೆಚ್ಚುವರಿ ಶಿಕ್ಷಕರಿರುವ ಶಾಲೆಗಳಿಂದ ನಿಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಪಠ್ಯ ಪುಸಕ್ತ, ಸಮವಸ್ತ್ರ ಸರಬರಾಜು ಮಾಡಲಾಗಿದೆ. ಸೈಕಲ್ ವಿತರಣೆಗೆ ಇನ್ನು ಸರ್ಕಾರದಿಂದ ಸುತ್ತೋಲೆ ಬಂದಿಲ್ಲ. ಹೈಕೋರ್ಟಿನಲ್ಲಿ ಸೈಕಲ್ ವಿತರಣೆ ವಿಚಾರವಾಗಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆದಿದ್ದು ಸರ್ಕಾರದ ಪರವಾಗಿ ತೀರ್ಪು ಹೊರ ಬೀಳುವ ಸಾಧ್ಯತೆ ಇರುವುದರಿಂದ ಸೈಕಲ್ಗಳನ್ನು ಅದಷ್ಟು ಬೇಗ ವಿತರಿಸಲು ಸರ್ಕಾರದಿಂದ ಅನುದಾನ ಸಿಗಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

