ಅಕ್ಷರ ಜಾತ್ರೆ ಅರ್ಥಪೂರ್ಣವಾಗಲಿ
ಬಾಗೇಪಲ್ಲಿ: ಪಟ್ಟಣದಲ್ಲಿ ಜು.18 ಮತ್ತು 19 ರಂದು ನಡೆಯಲಿರುವ 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲು ಅಗತ್ಯ ಎಲ್ಲಾ ಸಹಕಾರವನ್ನು ನೀಡಿ ಕನ್ನಡದ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ತಾಲೂಕಿನ ಕನ್ನಡಪರ ವಿವಿಧ ಸಂಘಟನೆಗಳ ಮುಖಂಡರು ಚರ್ಚಿಸಿದರು.
ಪಟ್ಟಣದ ಬಾಲಕಿಯರ ಶಾಲಾ ಆವರಣದಲ್ಲಿರುವ ಕನ್ನಡಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಆರ್. ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡಪರ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಸಂಘಟನೆಗಳು ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕಾರ ನೀಡುವುದಾಗಿ ತಿಳಿಸಿದವು.
ಕಸಾಪ ತಾಲೂಕು ಅಧ್ಯಕ್ಷ ಕೃಷ್ಣ ಮಾತನಾಡಿ, ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿರುವ ಇಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಪ್ರತಿ ಮನೆ ಮನೆಗೂ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾಹಿತಿ ಹೋಗುವಂತಹ ಕೆಲಸವನ್ನು ನಡೆಸಬೇಕಾಗಿದೆ. ಇದೇ ಮೊದಲ ಬಾರಿಗೆ ತಾಲ್ಲೂಕಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವಂತಹ ಒಂದು ಸುವರ್ಣ ಅವಕಾಶ ತಮಗೆ ಸಿಕ್ಕಿದ್ದು ಇದನ್ನು ಯಶಸ್ವಿಗೊಳಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಂಘ-ಸಂಸ್ಥೆಗಳ ಮುಖಂಡರು, ಸದಸ್ಯರು ಸೇರಿದಂತೆ ಪ್ರತಿಯೊಬ್ಬರು ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಪಟ್ಟಣದಲ್ಲಿ ಕನ್ನಡದ ವೈಭವಕ್ಕೆ ಕಲೆ ತರುವ ನಿಟ್ಟಿನಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ, ಬಾವುಟಗಳನ್ನು ಹಾರಿಸುವುದು, ವಿಶೇಷವಾಗಿ ಮುಖ್ಯ ರಸ್ತೆಯಲ್ಲಿನ ಅಂಗಡಿ ಮುಂಗಟ್ಟುಗಳ ಮಾಲೀಕರು, ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳ ಮುಂದೆ ಕನ್ನಡದ ಬಾವುಟಗಳನ್ನು ಕಡ್ಡಾಯವಾಗಿ ಹಾರಿಸುವಂತೆ ಮನವೊಲಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಕನ್ನಡಸೇನೆಯ ತಾಲೂಕು ಅಧ್ಯಕ್ಷ ಬಿ.ಎ. ಬಾಬಾಜಾನ್, ಕಾರ್ಯದರ್ಶಿ ರವೀಂದ್ರ, ಕರವೇ ಶಿವರಾಮೇಗೌಡ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರವಣಪ್ಪ, ತಾಲೂಕು ಅಧ್ಯಕ್ಷ ವೆಂಕಟೇಶ್ , ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಬಿ.ಎಸ್. ನಾಗಭೂಷಣ್, ನವ ಕರ್ನಾಟಕ ವೇದಿಕೆ ತಾಲೂಕು ಅಧ್ಯಕ್ಷ ಬಿ.ಪಿ.ಬರಕತ್ತುಲ್ಲಾ, ಅಹಿಂದ ಮುಖಂಡ ಎಂ.ಎಚ್. ಅಬ್ದುಲ್ಲಾ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತರೆಡ್ಡಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ್, ಶಿಕ್ಷಕರಾದ ಶ್ರೀನಿವಾಸ್, ಅಂಜಿನಪ್ಪ, ಮುಖಂಡರಾದ ಬಿ.ಎಸ್. ನಾರಾಯಣಸ್ವಾಮಿ, ಮಂಜುನಾಥ್, ಕೆ.ಟಿ. ವೀರಾಂಜನೇಯ, ಚಂದ್ರಾನಾಯಕ್, ಎ.ವಿ. ಲಕ್ಷ್ಮೀನರಸಿಂಹಪ್ಪ ಮುಂತಾದವರು ಉಪಸ್ಥಿತರಿದ್ದರು.
ಸಾಹಿತ್ಯ ರಚನೆಯಲ್ಲಿ ಚುಟುಕುಗಳ ಪಾತ್ರ ಮಹತ್ವದ್ದು
ಕೆಜಿಎಫ್: ಸಮಾಜ ಬಯಸುವ ಸಾಹಿತ್ಯ ರಚನೆಯಲ್ಲಿ ಚುಟುಕುಗಳ ಪಾತ್ರ ಮಹತ್ವದ್ದಾಗಿದೆ ಎಂದು ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ನಗರದ ವಿವೇಕಾನಂದ ವಿದ್ಯಾ ಕೇಂದ್ರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಶಾಲಾ ಅಂಗಲದಲ್ಲಿ ಕವಿ ಕಾವ್ಯ ಚುಟುಕು ಸಂಭ್ರಮ ಹಾಗೂ ಮಕ್ಕಳ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಾವು ಕಾಣುವ ದೃಶ್ಯಗಳನ್ನು ಚುಟುಕಾಗಿ ಬರೆದು ಸಂದರ್ಭೋಚಿತವಾಗಿ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಎಂದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಡಾ.ಕೆ.ಜೆ.ಎನ್. ಮೌನಿ ಹಾಗೂ ನಗರ ಘಟಕ ಅಧ್ಯಕ್ಷ ವೀರವೆಂಕಟಪ್ಪ, ಚುಟುಕುಗಳು ಅರ್ಥಗರ್ಭಿತವಾಗಿರಬೇಕು ಜನಸಾಮಾನ್ಯರ ಮನ ಮುಟ್ಟುವಂತಿರಬೇಕು ಎಂದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿದರು. ಕೆ.ಆರ್. ಮಾದವನ್, ಪಿ. ನಾರಾಯಣಪ್ಪ, ಡಾ. ರಾಧಪ್ರಕಾಶ್, ಎಂ.ಕೆ. ನಾಗರತ್ನ, ಶರಣಪ್ಪ ಗಬ್ಬೂರು, ಸೂರ್ಯನಾರಾಯಣ ಇದ್ದರು.
ಸಾಹಿತ್ಯ ಬೆಳೆಸುವ ಕೆಲಸವಾಗಬೇಕಿದೆ
ಶಿಡ್ಲಘಟ್ಟ: ಗಡಿ ನಾಡು ಪ್ರದೇಶಗಳಲ್ಲಿ ಕನ್ನಡ ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೆಲಸ ಮಾಡಬೆಕಾಗಿದೆ ಎಂದು ಚಿಕ್ಕಬಳ್ಳಾಪುರ ಕಸಾಪ ಜಿಲ್ಲಾಧ್ಯಕ್ಷ ಹನುಮಂತರಾವ್ ಹೇಳಿದರು.
ಪಟ್ಟಣದ ಸರಸ್ವತಿ ಕಾನ್ವೆಂಟ್ ಶಾಲೆಯ ಕಾರ್ಯದರ್ಶಿ ಎನ್.ಶ್ರೀಕಾಂತ್ ಅವರ ಮನೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಮನೆಮನೆ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, “VÚt ನಾಡು ಪ್ರದೇಶಗಳಲ್ಲಿ ಇತ್ತೀಚೆಗೆ ಕನ್ನಡ ನಶಿಸುತ್ತಿದ್ದು, ಅನ್ಯ ಭಾಷೆಗಳ ಮೊರೆ ಹೋಗುತ್ತಿದ್ದಾರೆ. ಇಂಥ ಸಂದರ್ಭಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಮನೆ ಮನೆ ಕವಿಗೋಷ್ಠಿಗಳನ್ನು ಮಾಡುವ ಮೂಲಕ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸುವ ಮೂಲಕ ಕನ್ನಡದ ಕಂಪು ಹರಡುವಂತೆ ಮಾಡಬೇಕೆಂದರು.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ತಾಲೂಕು ಕಸಾಪದ ನಿಕಟಪೂರ್ವ ಅಧ್ಯಕ್ಷ ವಿ.ಕೃಷ್ಣ ಅವರು ವಹಿಸಿದ್ದರು. ಇದೇ ವೇಳೆ ಅವರು ನೂತನ ಅಧ್ಯಕ್ಷ ಕ.ನಾ.ಶ್ರೀನಿವಾಸ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಸಾಹಿತಿ ದೇವರ ಮಳ್ಳೂರು ಚನ್ನಕೃಷ್ಣ, ಮಾಲತಿ, ಟಿ.ವಿಜಯಕುಮಾರ್, ಜಿ.ಎನ್.ಶಾಮಸುಂದರ್, ಎಸ್.ವಿ.ನಾಗರಾಜ್ರಾವ್, ಅನಂತಕೃಷ್ಣ, ಟಿ.ನಾರಾಯಣಸ್ವಾಮಿ, ಎನ್.ಶ್ರೀಕಾಂತ್, ಡಾ. ವಿ.ಎಸ್.ಕೃಷ್ಣಮೂರ್ತಿ, ಅನಂತಲಕ್ಷ್ಮೀ, ಸರಸ್ವತಿ ಕಾನ್ವೆಂಟ್ ಅಧ್ಯಕ್ಷ ವೆಂಕಟಸುಬ್ಬಾರಾವ್, ಚಿಕ್ಕವೆಂಕಟರಾಯಪ್ಪ ಸೇರಿ ಅನೇಕರು ತಮ್ಮ ಕವಿತೆ ವಾಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

