ಮಹಿಳಾ ಕಾಲೇಜಿನಲ್ಲಿ ಎಡವಟ್ಟು ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಪೆಟ್ಟು
ಕೋಲಾರ: ನಗರದ ಸರ್ಕಾರಿ ಮಹಿಳಾ ಕಾಲೇಜಿನ ಆಡಳಿತ ವರ್ಗದ ಎಡವಟ್ಟಿನಿಂದ ಬಿ.ಕಾಂ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಖಂಡಿಸಿ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಮಂಗಳವಾರ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು.
ಸರ್ಕಾರಿ ಮಹಿಳಾ ಕಾಲೇಜಿನ ಬಿ.ಕಾಂ ವಿದ್ಯಾರ್ಥಿಗಳಾದ ಎಸ್. ಸಿಂಧು, ಎಸ್. ಅಶ್ವನಿ, ಮುನಿಷಾ 2013-14ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಬಿ.ಕಾಂ.ಗೆ ಪ್ರವೇಶ ಪಡೆದು ದಾಖಲಾಗಿರುತ್ತಾರೆ.
ಈ ವಿದ್ಯಾರ್ಥಿನಿಯರು ಎಲ್ಲರಂತೆ ಪರೀಕ್ಷಾ ಶುಲ್ಕ ಪಾವತಿಸಿ, ಗುರುತಿನ ಚೀಟಿ ಮತ್ತು ಪರೀಕ್ಷೆ ಪ್ರವೇಶ ಪತ್ರವನ್ನು ಪಡೆದು ಪರೀಕ್ಷೆ ಬರೆದಿದ್ದರೂ ಕಾಲೇಜಿನ ಸಿಬ್ಬಂದಿ ಲೋಪ ಹಾಗೂ ಬೆಂಗಳೂರು ವಿವಿಯ ವೈಫಲ್ಯದಿಂದ ಈ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಮಾತ್ರ ಪ್ರಕಟಗೊಂಡಿಲ್ಲ. ಕಾಲೇಜಿನ ಪ್ರಾಂಶುಪಾಲರಿಗೆ ಈ ಬಗ್ಗೆ ಹಲವು ಬಾರಿ ಮನವಿ ಪತ್ರ ನೀಡಿದರೂ ಪ್ರಯೋಜನವಾಗಿಲ್ಲ, ಇದೇ ಗೊಂದಲದ ಮಧ್ಯೆ 2ನೇ ಸೆಮಿಸ್ಟರ್ ಪರೀಕ್ಷೆ ಶುಲ್ಕ ಕಟ್ಟಿಸಿಕೊಂಡು ಪರೀಕ್ಷೆ ಬರೆಸಲಾಗಿದೆ.
2014-15ನೇ ಸಾಲಿನಲ್ಲಿ ಬಿ.ಕಾಂ. ದ್ವಿತೀಯ ವರ್ಷಕ್ಕೆ ಪ್ರವೇಶದ ದಾಖಲಾತಿ ಆಗಲು ಬಂದಾಗ ಈ ವಿದ್ಯಾರ್ಥಿಗಳಿಗೆ ನಿಮ್ಮ ದಾಖಲಾತಿ ಮಾನ್ಯತೆ ಆಗಿಲ್ಲವೆಂದು ಪ್ರಾಂಶುಪಾಲರು ತಿಳಿಸಿದ್ದು, ಇದರಿಂದ ವಿದ್ಯಾರ್ಥಿನಿಯರ ಶೈಕ್ಷಣಿಕ ಪರಿಸ್ಥಿತಿ ಡೋಲಾಯನವಾಗಿದೆ. ಈ ಸಮಸ್ಯೆಗೂ ನನಗೂ ಸಂಬಂಧವಿಲ್ಲ, ಈ ಮುಂಚೆ ಇದ್ದ ಪ್ರಾಂಶುಪಾಲರ ಕಾಲದಲ್ಲಿ ನಡೆದಿದೆ ಎಂದು ಹಾಲಿ ಪ್ರಾಂಶುಪಾಲರು ನೀಡಿದ ಉತ್ತರದಿಂದ ಕುಪಿತರಾದ ವಿದ್ಯಾರ್ಥಿ ಮುಖಂಡರು ಸಮಸ್ಯೆ ನಿವಾರಣೆ ಮಾಡದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿನಿಯರಿಗೆ ತೊಂದರೆಯಾಗಿದೆ ಎಂಬ ವಿಷಯ ತಿಳಿದ ನಂತರ ನಾನೇ ಮಾನವೀಯತೆ ದೃಷ್ಟಿಯಿಂದ ಈ ಮೂವರು ವಿದ್ಯಾರ್ಥಿನಿಯರಿಗೆ ಪ್ರಥಮ ಬಿ.ಕಾಂ. ಸೇರ್ಪಡೆಗೆ ಅವಕಾಶ ನೀಡಲಾಗಿದೆ. ನಾನೇ ಶುಲ್ಕವನ್ನು ಪಾವತಿಸಿದ್ದೇನೆ ಎಂದಾಗ ವಿದ್ಯಾರ್ಥಿಗಳು ಒಪ್ಪಲಿಲ್ಲ, 2ನೇ ವರ್ಷಕ್ಕೆ ಪ್ರವೇಶ ನೀಡಬೇಕೆಂದು ಒತ್ತಾಯಿಸಿದರು. ವಿದ್ಯಾರ್ಥಿನಿಯರ ಪೋಷಕರು ತಮ್ಮ ಮಕ್ಕಳಿಗೆ ಅನ್ಯಾಯವಾಗಿದೆ, ತಪ್ಪು ಮಾಡಿರುವುದನ್ನು ಸರಿಪಡಿಸಿಕೊಡಬೇಕು ಎಂದು ಪ್ರಾಂಶುಪಾಲರ ಜೊತೆ ವಾಗ್ವಾದ ನಡೆಸಿದರು. ಪ್ರತಿಭಟನೆ ನೇತೃತ್ವವನ್ನು ಯುವ ವಿದ್ಯಾರ್ಥಿ ಒಕ್ಕೂಟದ ಸುರೇಶ ಗೌಡ, ಎಸ್ಎಫ್ಐ ರಾಜ್ಯಾಧ್ಯಕ್ಷ ಅಂಬರೀಶ್, ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ, ಸಿ. ಅಮರೇಶ್, ಹೂಹಳ್ಳಿ ನಾಗರಾಜ್, ಶ್ರೀನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

