ಹಳಿ ತಪ್ಪಿದ ಕೆಜಿಎಫ್ ರೈಲ್ವೆ ಪ್ರಯಾಣಿಕರ ಸಮಸ್ಯೆಗೆ ಮದ್ದೆಂದು?
ಕೆಜಿಎಫ್: ಮಾರಿಕುಪ್ಪಂನಿಂದ ಬೆಂಗಳೂರಿಗೆ ಬಂಗಾರಪೇಟೆ ಮಾರ್ಗವಾಗಿ ಪ್ರತಿದಿನ ಸಂಚರಿಸುವ 9 ರೈಲುಗಳಿಗೆ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ 20 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರಯಾಣಿಸುತ್ತಾರೆ.
ನಗರದಲ್ಲಿರುವ ಒಟ್ಟು 5 ರೈಲ್ವೆ ನಿಲ್ದಾಣಗಳಲ್ಲಿ 20 ಸಾವಿರ ಪ್ರಯಾಣಿಕರಿಗೆ ಕುಡಿಯುವ ನೀರು, ಶೌಚಾಲಯ, ಆಸನಗಳ ವ್ಯವಸ್ಥೆ, ವಿದ್ಯುತ್ ದೀಪ ಸೇರಿದಂತೆ ಇನ್ನಿತರ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. 1895 ರಲ್ಲಿ ತಮಿಳುನಾಡಿನ ಜೋಲಾರಪೇಟೆಯಿಂದ ಬೆಂಗಳೂರಿಗೆ ರೈಲು ಹಳಿ ಹಾಕಲಾಗಿತ್ತು. ಆಗ ಬೌರಿಂಗ್ಪೇಟೆಯಲ್ಲಿ(ಇದೀಗ ಬಂಗಾರಪೇಟೆ ಎಂದು ಬದಲಾಯಿಸಲಾಗಿದೆ) ರೈಲ್ವೆ ನಿಲ್ದಾಣ ನಿರ್ಮಿಸಲಾಗಿತ್ತು. ಕಾಲ ಕ್ರಮಮೇನ ಅದು ಬಂಗಾರಪೇಟೆ ಜಂಕ್ಷನ್ ಆಗಿ ಮಾರ್ಪಟ್ಟಿದೆ. ಬಿಜಿಎಂಎಲ್ ಚಿನ್ನದ ಗಣಿಗಳನ್ನು ಪ್ರಾರಂಭಿಸಿ ಕಾರ್ಖಾನೆಗಳಿಗೆ ಯಂತ್ರೋಪಕರಣಗಳು, ಪೀಠೋಪಕರಣಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಸಾಗಾಣಿಕೆ ಮಾಡಲು ಮಾರಿಕುಪ್ಪಂ ವರೆಗೆ ರೈಲು ಸಂಚಾರ ಪ್ರಾರಂಭಿಸಲಾಯಿತು. ಇದರಿಂದ ಮಾರಿಕುಪ್ಪಂ ಚಾಂಪಿಯನ್, ಉರಿಗಾಂ, ಕೋರಮಂಡಲ್ ಹಾಗೂ ಬೆಮೆಲ್ನಗರದಲ್ಲಿ ನಿಲ್ದಾಣಗಳನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿತ್ತು.
ಈ ಐದು ರೈಲು ನಿಲ್ದಾಣಗಳಲ್ಲಿ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ ಬರೀ ನೀರಿನ ಟ್ಯಾಂಕ್ ಇಡಲಾಗಿದೆ. ಆದರೆ ಅದರಲ್ಲಿ ನೀರು ತುಂಬಿಸಲ್ಲ, ಶೌಚಾಲಯಗಳು ಕುಸಿದು ಬಿದ್ದು ಗೋಡೆಗಳು ಮಾತ್ರ ಇವೆ, ಪ್ರಯಾಣಿಕರಿಗೆ ಸರಿಯಾದ ತಂಗುದಾನವಿಲ್ಲ, ಅಂದಿನ ಕಾಲದಲ್ಲಿ ನಿರ್ಮಿಸಿದ್ದ ಚಾವಣಿಗಳು ಕಿತ್ತು ಸೋರುತ್ತಿದೆ, ಕೂರಲು ಆಸನಗಳಿಲ್ಲ, ಇದ್ದ ಸಿಮಿಂಟ್ ಆಸನಗಳು ಮುರಿದು ಬಿದ್ದಿವೆ, ನಿಲ್ದಾಣದ ಉದ್ದಕ್ಕೂ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ ಆದರೆ ಅವುಗಳಿಗೆ ಲೈಟ್ ಹಾಕಿಲ್ಲ, ಇದ್ದ ಒಂದೆರಡು ಲೈಟ್ ಹಾಳಾಗಿವೆ, ಪ್ರಯಾಣಿಕರು ಟಿಕೆಟ್ ಪಡೆಯಲು ಒಬ್ಬರಮೇಲೊಬ್ಬರು ಬಿದ್ದು ಮುತ್ತಿಕೊಳ್ಳಬೇಕಾಗಿದೆ... ಹೀಗೆ ಹಲವಾರು ಸಮಸ್ಯೆಗಳಿಂದ 20 ಸಾವಿರ ಪ್ರಯಾಣಿಕರು ದಿನನಿತ್ಯ ಅವಸ್ಥೆ ಪಡಬೇಕಾಗಿದೆ.
ಈ ಬಗ್ಗೆ ರೈಲ್ವೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ಈ ಹಿಂದೆ ಇದ್ದ ರೈಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪರಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಇದೀಗ ನೂತನ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರು ಕೆಜಿಎಫ್ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಯಾಣಿಕರಿಗೆ ಮೂಲ ಸೌಕರ್ಯವನ್ನು ಕಲ್ಪಿಸಬೇಕು ಎಂಬುದು ದಿನನಿತ್ಯ ಪ್ರಯಾಣಿಕರ ಬೇಡಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

