ಸೋಪ್ ಸಂತೆಗೆ ಅತಿಥಿಯಾಗಿ ಹೋಗಿ 500 ದಂಡ ವಿಧಿಸಿದರು
ಕೋಲಾರ: ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದ್ದರೂ ಪ್ಲಾಸ್ಟಿಕ್ ಕವರ್ಗಳನ್ನು ಬಳಕೆ ಮಾಡಿದ ಕಾರಣಕ್ಕಾಗಿ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಸಂಸ್ಥೆಗೆ ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾರಕ್ 500 ದಂಡ ವಿಧಿಸುವ ಮೂಲಕ ದಿಟ್ಟ ಕ್ರಮ ಕೈಗೊಂಡಿದ್ದಾರೆ.
ಈ ಮೂಲಕ ಪ್ಲಾಸ್ಟಿಕ್ ನಿಷೇಧಿಸುವ ವಿಚಾರದಲ್ಲಿ ಯಾವುದೇ ಮುಲಾಜಿಲ್ಲವೆಂಬ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈ ಘಟನೆ ನಡೆದದ್ದು ನಗರದ ಕೆಇಬಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಸೋಪ್ ಸಂತೆ ಉದ್ಘಾಟನಾ ಕಾರ್ಯಕ್ರಮದಲ್ಲಿ. ಸೋಪ್ ಸಂತೆ ಕಾರ್ಯಕ್ರಮದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ವರ್ತೂರ್ ಪ್ರಕಾಶ್ ಸೇರಿದಂತೆ ಇನ್ನಿತರ ಗಣ್ಯರು ಬರಬೇಕಾಗಿತ್ತು. ಇವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ಉದ್ಘಾಟಿಸುವ ಭಾಗ್ಯ ಹೊಂದಿದ ನಗರಸಭೆ ಅಧ್ಯಕ್ಷ ಮುಬಾಕರ್, ಉದ್ಘಾಟನಾ ಭಾಷಣ ಮಾಡಲು ತನ್ನನ್ನು ಆಹ್ವಾನಿಸಿರುವುದರಿಂದ ನಿಮಗೆ ಲಾಭ ನಷ್ಟ ಎರಡೂ ಆಗಿದೆ. ಲಾಭವೆಂದರೆ ನಾನು 25 ಸಾವಿರ ಬೆಲೆಯ ಸೋಪು ಹಾಗೂ ಮಾರ್ಜಕಗಳನ್ನು ಖರೀದಿ ಮಾಡುತ್ತಿರುವುದು. ನಷ್ಟ ಎಂದರೆ, ಕೋಲಾರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ಸಂತೆಯಲ್ಲಿ ಪ್ಲಾಸ್ಟಿಕ್ ಕವರ್ಗಳನ್ನು ಬಳಸುತ್ತಿರುವುದಕ್ಕೆ ಸಂಸ್ಥೆಗೆ 500 ದಂಡವನ್ನು ವಿಧಿಸಲಾಗುವುದು. ಇದನ್ನು ಸಂಸ್ಥೆಯ ಅಧಿಕಾರಿಗಳು ತಪ್ಪಾಗಿ ಭಾವಿಸಬಾರದು ಎಂದು ವಿನಯದಿಂದಲೇ ಚಾಟಿ ಬೀಸಿದರು.
ಕೋಲಾರ ಜಿಲ್ಲೆಯವರೇ ಆದ ಸರ್.ಎಂ.ವಿಶ್ವೇಶ್ವರಯ್ಯ ಸ್ಥಾಪಿಸಿದ ಸಂಸ್ಥೆಯಲ್ಲಿ ತಯಾರಾದ ಸಾಬೂನುಗಳು ಕೋಲಾರ ಜಿಲ್ಲೆಯವರ ಸಾಬೂನುಗಳಿದ್ದಂತೆ. ಸೋಪ್ ಸಂತೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎ.ಸಿ.ಕೇಶವಮೂರ್ತಿ ಮಾತನಾಡಿ, ಶತಮಾನದತ್ತ ಮುನ್ನಡೆಯುತ್ತಿರುವ ಸಂಸ್ಥೆಯು 2010ರಲ್ಲಿ ಮುಖ್ಯಮಂತ್ರಿ ರತ್ನ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಸಂಸ್ಥೆಯು ಸತತ ಲಾಭದತ್ತ ಮುನ್ನಡೆಯುತ್ತಿದೆ. ಸಂಸ್ಥೆಗೆ ಬಂದಿರುವ ಲಾಭಾಂಶದಲ್ಲಿ 2.17 ಕೋಟಿ ಸಂಸ್ಥೆಯು ಮುಖ್ಯಮಂತ್ರಿಗಳ ನಿಧಿಗೆ ಅರ್ಪಿಸಿದೆ ಎಂದರು.
ಸಂಸ್ಥೆಯು 350 ಕೋಟಿ ವಹಿವಾಟು ನಡೆಸಿ, 26 ಕೋಟಿ ಲಾಭ ಪಡೆದುಕೊಂಡಿದೆ. ಇದೀಗ ಗ್ರಾಹಕರ ಮನೆ ಬಾಗಿಲಿಗೆ ಸಾಬೂನುಗಳನ್ನು ತಲುಪಿಸುವ ಉದ್ದೇಶದಿಂದ ಸೋಪ್ ಸಂತೆಯನ್ನು ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದು, ಇದೀಗ ರೈತರಿಗೆ ರಾಜ್ಯಾದ್ಯಂತ ಶ್ರೀಗಂಧ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆಯೆಂದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ಸುಕುಮಾರ್, ಗಾಂಧಿನಗರ ನಾರಾಯಣಸ್ವಾಮಿ, ಆಯುಕ್ತರಾದ ಕೆ.ಎನ್.ಜಗದೀಶ್, ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಪುಟ್ಟಣ್ಣ, ಸಂಸ್ಥೆಯ ಅಧಿಕಾರಿಗಳಾದ ಪ್ರಕಾಶ್ ಇತರರು ಇದ್ದರು. ಕಲಾವಿದ ಚಂದ್ರು ನಿರೂಪಿಸಿ, ಸಂಸ್ಥೆಯ ಮಾರುಕಟ್ಟೆ ಅಧಿಕಾರಿ ಸುವರ್ಣಕುಮಾರ್ ಸ್ವಾಗತಿಸಿ, ಉಮಾಶಂಕರ್ ಅಪಾಲಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

