ಕೋಲಾರ

ಅತ್ಯಾಚಾರ ಪ್ರಕರಣ ಲಘುವಾಗಿ ಪರಿಗಣಿಸಿದರೆ ಜೋಕೆ: ಅಧಿಕಾರಿಗಳಿಗೆ ಖಾದರ್ ಖಡಕ್ ಎಚ್ಚರಿಕೆ

Published On :

ಕೋಲಾರ: ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುವಂತಹ ಆತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳನ್ನು ಲಘುವಾಗಿ ಪರಿಗಣಿಸುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯು.ಟಿ. ಖಾದರ್ ತಿಳಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರು, ಬಾಲಕಿಯರ  ಮೇಲೆ ನಡೆಯುತ್ತಿರುವ ಆತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಕಠಿಣ  ಕ್ರಮ ಕೈಗೊಳ್ಳಲಾಗುವುದೆಂಬ ಸಂದೇಶವನ್ನು ಬೆಂಗಳೂರಿನ ಫ್ರೆಜರ್ ಟೌನ್ ಇನ್ಸ್‌ಪೆಕ್ಟರ್ ಪ್ರಕರಣವೇ ಸಾಕ್ಷಿಯೆಂದು ಹೇಳಿದರು. ಮಹಿಳೆಯರು, ಬಾಲಕಿಯರು ಸೇರಿದಂತೆ ಅಪ್ರಾಪ್ತ ಮಕ್ಕಳ ಮೇಲೆ ನಡೆಯುತ್ತಿರುವಂತಹ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮಗಳು, ಮತ್ತು ಆರೋಪಿಗೆ ವಿಧಿಸಲಾಗುವ ಸೆಕ್ಷನ್‌ಗಳು ಎಲ್ಲವನ್ನು ಗಮನಿಸಲಾಗುವುದೆಂದ ಅವರು, ಒಂದು ವೇಳೆ ಅಧಿಕಾರಿ ಮಹಿಳೆಗೆ ಆಗಿರುವ ಅನ್ಯಾಯದ ಬಗ್ಗೆ ಸೆಕ್ಷನ್‌ಗಳನ್ನು ಬಿಟ್ಟರೆ ಯಾವುದೇ ಮುಲಾಜಿಲ್ಲದೆ ಅಂತಹ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ ಎಂದರು.
ವಕೀಲರಿಗೆ ಮನವಿ: ಅತ್ಯಾಚಾರ ನಡೆಸುವಂತಹ ಆರೋಪಿಗಳ ಪರ ಯಾವುದೇ ವಕೀಲರು ವಾದ ಮಂಡಿಸಬಾರದೆಂದ ಅವರು, ಸಮಾಜಘಾತಕ ಶಕ್ತಿಗಳು ಇಂದು ಆತ್ಯಾಚಾರ ಮಾಡಿದರೂ ನ್ಯಾಯಾಲಯಗಳಿಗೆ ಶರಣಾಗುವ ಮೂಲಕ ಜಮೀನು ಪಡೆದು ಇಲ್ಲವೇ ಜೈಲುಗಳಲ್ಲಿ ವಿಐಪಿ ಜೀವನ ನಡೆಸುವಂತಹ ವಾತಾವರಣ ಮಾಡಿಕೊಂಡಿರುವುದರಿಂದ ವಕೀಲರು ಮಾನವೀಯತೆ ಮತ್ತು ಸಮಾಜದ ಹಿತದೃಷ್ಟಿಯಿಂದ ಆರೋಪಿಗಳ ಪರ ವಾದ ಮಂಡಿಸಬಾರದೆಂದರು.
ಮಹಿಳೆ ಮೇಲೆ ಆತ್ಯಾಚಾರ ನಡೆದಿರುವ ವಿಷಯ ತಿಳಿದು ಬಂದರೆ ಪೊಲೀಸ್ ಇಲಾಖೆ ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬಹುದೆಂದು ತಿಳಿಸಿದರು.
ಶೀತಲ ಸಮರವಿಲ್ಲ: ಕೋಲಾರ ಜಿಲ್ಲೆಯಲ್ಲಿ ಡಿಸಿ ಮತ್ತು ಎಸ್ಪಿ ನಡುವೆ ನಡೆಯುತ್ತಿರುವ ಶೀತಲ ಸಮರದ ಬಗ್ಗೆ ಪತ್ರಕರ್ತರ ಪ್ರಶ್ನಿಸಿದಾಗ ಸಚಿವರು ಯಾವುದೇ ಶೀತಲ ಸಮರ ನಡೆಯುತ್ತಿಲ್ಲ, ಹಿಂದುಳಿದ ಜಿಲ್ಲೆಯಾಗಿರುವ ಕೋಲಾರದಲ್ಲಿ ಜನರ ವಿಶ್ವಾಸದಿಂದ ನೋಡುವಂತಹ ಕೆಲಸಗಳನ್ನು ಮಾಡಿಕೊಂಡು ಹೋಗುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಹಿಳೆಯರ ಮೇಲೆ ನಡೆಯುತ್ತಿರುವ ಆತ್ಯಾಚಾರ ಪ್ರಕರಣಗಳನ್ನು ತಡೆಯಲು ಡಿಸಿ ಮತ್ತು ಎಸ್ಪಿ ನೇತೃತ್ವದಲ್ಲಿ ಜನ ಜಾಗೃತಿ ಸಭೆಗಳನ್ನು ನಡೆಸುವಂತೆ ಸೂಚಿಸಲಾಗಿದ್ದು, ಮುಂದಿನ ದಿಗಳಲ್ಲಿ ಈ ಬಗ್ಗೆ ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಅರಿವು ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಳಬಾಗಲು ಶಾಸಕ ಕೊತ್ತೂರು ಮಂಜುನಾಥ್, ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಲ್ಲಾ ಎಸ್ಪಿ ಅಜಯ್ ಹಿಲೋರಿ, ಎಎಸ್ಪಿ ಜಮೀಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.